ಬೆಂಗಳೂರು, ಫೆಬ್ರವರಿ 16: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಮಾಲೀಕರೊಬ್ಬರು ಮನೆಗೆ ಸೂರ್ಯನ ಬೆಳಕು ಬರುತ್ತದೆ ಎಂಬ ಒಂದೇ ಕಾರಣಕ್ಕೆ 80 ಸಾವಿರ ಬಾಡಿಗೆ ಕೇಳಿದ ವಿಚಿತ್ರ ಘಟನೆ ವರದಿಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರು ದಿನೇ ದಿನೇ ಭಾರಿ ದುಬಾರಿಯಾಗುತ್ತಿದ್ದು, ಅದರಲ್ಲೂ ಮನೆ ಬಾಡಿಗೆ ಗಗನಕ್ಕೇರುತ್ತಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಬೆಂಗಳೂರಿನಲ್ಲಿ ಮನೆ ಮತ್ತು ಭೂಮಿ ಬೆಲೆಗಳು ಆಗಸಕ್ಕೇರುತ್ತಿದ್ದು, ಇಲ್ಲಿ ಬದುಕು ನಡೆಸುವುದೂ ಕೂಡ ದುಬಾರಿಯಾಗುತ್ತಿದೆ.
ಈ ಪಟ್ಟಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದ್ದು, ಬೆಂಗಳೂರಿನ ಮನೆ ಮಾಲೀಕರೊಬ್ಬರು ಮನೆಗೆ ಗಾಳಿ ಸೂರ್ಯನ ಬೆಳಕು ಚೆನ್ನಾಗಿ ಬರುತ್ತದೆ ಎಂಬ ಒಂದೇ ಕಾರಣಕ್ಕೆ ಮನೆಗೆ ಬರೊಬ್ಬರಿ 80 ಸಾವಿರ ರೂ ಬಾಡಿಗೆ ಕೇಳಿ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ.
ಅನು ಎಂಬುವವರು ತಮ್ಮ ಏಕ್ಸ್ ಖಾತೆಯಲ್ಲಿ ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಅವರು ಮನೆ ಮಾಲೀಕರ ಅತಿಯಾದ ಬೆಲೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ನೈಸರ್ಗಿಕ ಬೆಳಕಿನಂತಹ ಸರಳ ವೈಶಿಷ್ಟ್ಯದಿಂದಾಗಿ ಬಾಡಿಗೆಗಳು ತುಂಬಾ ಹೆಚ್ಚಾಗುವುದು ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಬಾಡಿಗೆಗಳು ಪ್ರತಿ ಬಾರಿಯೂ ತಮ್ಮನ್ನು ಆಶ್ಚರ್ಯಗೊಳಿಸುತ್ತದೆ ಎಂದು ಅನು ತಮ್ಮ ಪೋಸ್ಟ್ನಲ್ಲಿ ಹೇಳಿಕೊಂಡಿದ್ದು, ಕೋಣೆಗೆ ಸೂರ್ಯನ ಬೆಳಕು ಸಿಗುತ್ತದೆ. ಇದೇ ಕಾರಣಕ್ಕೆ ಬಾಡಿಗೆಯನ್ನು 80,000 ರೂ.ಗಳಿಗೆ ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದರು.
ಆರಂಭದಲ್ಲಿ ಇದನ್ನು ನನಗೆ ನಂಬಲಾಗಲಿಲ್ಲ. ಬಳಿಕ ಸೂರ್ಯನ ಬೆಳಕಿನಂತಹ ಸರಳ ವೈಶಿಷ್ಟ್ಯವನ್ನೂ ಸಹ “ಹೆಚ್ಚುವರಿ” ಎಂದು ಪರಿಗಣಿಸಿ ಹೆಚ್ಚಿನ ಬೆಲೆಗೆ ನೀಡಲಾಗುತ್ತಿದೆ ಎಂದು ತಿಳಿದು ಆಘಾತವಾಯಿತು ಎಂದು ಹೇಳಿಕೊಂಡಿದ್ದಾರೆ.
ಈ ಮೊತ್ತ ದುಬಾರಿಯಾಗಿದ್ದು, ಜನರು ಸಾಮಾನ್ಯವಾಗಿ ಮನೆಯಲ್ಲಿ ನಿರೀಕ್ಷಿಸುವ ಸೌಲಭ್ಯಗಳನ್ನು ಈಗ ನಗರದ ಬಾಡಿಗೆ ಮಾರುಕಟ್ಟೆಯಲ್ಲಿ ಪ್ರೀಮಿಯಂ ಎಂದು ನೋಡಲಾಗುತ್ತಿದೆ ಎಂದು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಪೋಸ್ಟ್ ವ್ಯಾಪಕ ವೈರಲ್ ಆಗಿದ್ದು, ನಗರದಲ್ಲಿ ಮನೆ ಬಾಡಿಗೆ ಎಷ್ಟು ದುಬಾರಿಯಾಗಿದೆ ಎಂಬ ಚರ್ಚೆಗೆ ನಾಂದಿ ಹಾಡಿದೆ.