LATEST NEWS
ಬಾಂಬ್ ಸ್ಪೋಟದಲ್ಲಿ ಗಾಯಗೊಂಡಿದ್ದ ರಿಕ್ಷಾ ಚಾಲಕನ ಚಿಕಿತ್ಸೆ ವೆಚ್ಚ ಪಕ್ಷ ಭರಿಸಲಿದೆ – ಸುನಿಲ್ ಕುಮಾರ್
ಮಂಗಳೂರು ನವೆಂಬರ್ 25: ಮಂಗಳೂರಿನ ಗರೋಡಿಯಲ್ಲಿ ನಡೆದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟದಿಂದ ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಪುರುಷೋತ್ತಮ ಅವರ ಚಿಕಿತ್ಸೆ ವೆಚ್ಚವನ್ನು ಜನಪ್ರತಿನಿಧಿಗಳು ಸೇರಿ ಬಿಜೆಪಿಯಿಂದ ಭರಿಸಲಿದ್ದೇವೆ. ಅವರಿಗೆ ಸರ್ಕಾರದಿಂದ ಪರಿಹಾರ ನೀಡುವುದಕ್ಕೂ ಕ್ರಮ ಕೈಗೊಳ್ಳಲಾಗುವುದು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದರು.
ಕುಕ್ಕರ್ ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಭೇಟಿ ನೀಡಿದ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ‘ಈ ಘಟನೆಯನ್ನು ಅತ್ಯಂತ ಉಗ್ರವಾಗಿ ಖಂಡಿಸುತ್ತೇನೆ. ಈ ಪ್ರಕರಣವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಈ ಘಟನೆ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲು ಹಾಗೂ ಇದರ ಆಳ ಮತ್ತು ಅಗಲವನ್ನು ಅರಿತು, ಈ ಪ್ರಕರಣವನ್ನು ಸಂಪೂರ್ಣವಾಗಿ ಭೇದಿಸುವ ಉದ್ದೇಶದಿಂದ ಇದರ ತನಿಖೆಯನ್ನು ರಾಷ್ಟ್ರೀಯ ತನಿಖೆ ಸಂಸ್ಥೆಗೆ ಹಸ್ತಾಂತರ ಮಾಡಲಾಗಿದೆ’ ಎಂದರು..
ಮೊನ್ನೆ ನಡೆದ ಘಟನೆಯ ಮುಂದುವರಿದ ಭಾಗವಾಗಿ ಕದ್ರಿ ದೇವಸ್ಥಾನದಲ್ಲಿ ಇಂತಹದ್ದೇ ಘಟನೆ ನಡೆಸಲು ಸಂಚು ರೂಪಿಸಿದ್ದರು, ಇನ್ಯಾವುದೋ ಕಚೇರಿಗಳನ್ನು ಹಾಗೂ ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿ ಕೊಂಡಿದ್ದರು ಎಂದು ಗೋತ್ತಾಗಿದೆ. ಹಿಂದೂ ಸಮಾಜವನ್ನು ಗುರಿಯನ್ನಾಗಿಸುವುದೇ ಇದರ ಒಟ್ಟು ಉದ್ದೇಶ ಎಂಬುದು ಇದರಿಂದ ಮನದಟ್ಟಾಗುತ್ತದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ. ಆದರೆ ಈ ಸಂಚು ವಿಫಲವಾಗಿದೆ. ಈ ಮಾನಸಿಕತೆಯೇ ದೂರ ಆಗಬೇಕು’ ಎಂದು ತಿಳಿಸಿದರು. ‘ರಾಷ್ಟ್ರೀಯ ತನಿಖೆ ಸಂಸ್ಥೆ ಮೇಲೆ ಹಾಗೂ ಪೊಲೀಸರ ಮೇಲೆ ವಿಶ್ವಾಸ ಇದೆ. ಇಂತಹ ಸಂಘಟನೆಗಳು ಮತ್ತೆ ಚಿಗುರೊಡೆಯಲಿಕ್ಕೆ ಅವರು ಬಿಡುವುದಿಲ್ಲ’ ಎಂದು ಹೇಳಿದರು