LATEST NEWS
ರೈತರ ಕೆಲಸ ಕಾರ್ಯಗಳನ್ನು ಆದ್ಯತೆಯ ಮೇಲೆ ಮಾಡಿಕೊಡಿ : ಸಚಿವ ವಿ ಸುನೀಲ್ ಕುಮಾರ್
ಉಡುಪಿ, ಡಿಸೆಂಬರ್ 12: ರೈತರ ಕೆಲಸ ಕಾರ್ಯಗಳನ್ನು ಸರ್ಕಾರಿ ಇಲಾಖೆಗಳಲ್ಲಿ ಆದ್ಯತೆಯ ಮೇಲೆ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಸೂಚನೆ ನೀಡಿದರು.
ಅವರು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ರೈತರ ಸರ್ವತೋಮುಖ ಅಭಿವೃದ್ಧಿ ಕುರಿತ ಪ್ರಮುಖ ಬೇಡಿಕೆಗಳ ಈಡೇರಿಕೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದ ಬೆನ್ನುಲುಬಾದ ರೈತರು ಇತ್ತೀಚಿನ ದಿನಗಳಲ್ಲಿ ಅನೇಕ ಸಮಸ್ಯೆಗಳಿಂದ ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರದೆ ಇರುವುದು ಕಂಡು ಬರುತ್ತಿದೆ. ಅವರ ಆದಾಯವನ್ನು ದ್ವಿಗುಣಗೊಳಿಸಲು ಸರ್ಕಾರವು ಪ್ರಯತ್ನಿಸುತ್ತಿದೆ. ರೈತರು ತಮ್ಮ ಕೃಷಿ ಪದ್ಧತಿಯಲ್ಲಿ ಯಾಂತ್ರೀಕರಣ ಹಾಗೂ ಆಧುನಿಕತೆಯನ್ನು ಬೆಳಸಿಕೊಂಡಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದರು.
ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರಗಳ ಪ್ರಾರಂಭವನ್ನು ರೈತರಿಗೆ ಅನುಕೂಲವಾಗುವಂತೆ ಬೆಳೆ ಕಟಾವು ಬಂದಾಗ ಪ್ರಾರಂಭಿಸಿದ್ದಲ್ಲಿ ಅವರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಮುಂಬರುವ ಭತ್ತದ ಕಟಾವು ಸಂದರ್ಭದಲ್ಲಿಯೇ ಖರೀದಿ ಕೇಂದ್ರವನ್ನು ಪ್ರಾರಂಭಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದ ಅವರು, ರೈತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವಾಗ ವಾಣಿಜ್ಯ ಇಲಾಖೆ ಅಧಿಕಾರಿಗಳು ಮಾರಾಟ ತೆರಿಗೆಯನ್ನು ಪಾವತಿಸಬೇಕೆಂಬ ದೂರುಗಳು ಕೇಳಿ ಬರುತ್ತಿವೆ ಈ ಬಗ್ಗೆ ಎಚ್ಚರವಹಿಸಬೇಕು ಎಂದರು. ಕೃಷಿಯಲ್ಲಿ ಯಾಂತ್ರೀಕರಣನ್ನು ಬಳಕೆ ಮಾಡಲು ಅನುಕೂಲವಾಗುವಂತೆ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿದೆ.
ಇವುಗಳಲ್ಲಿ ಕೆಲವು ಕೇಂದ್ರಗಳ ನಿರ್ವಹಣೆ ಅವಧಿಯು ಮುಗಿದಿದ್ದು, ಇದರಿಂದ ರೈತರಿಗೆ ಅನಾನುಕೂಲತೆ ಉಂಟಾಗಿದೆ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೇಂದ್ರ ನಿರ್ವಹಣೆ ಒದಗಿಸಬೇಕೆಂದರು. ಕಾಡು ಅಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ರೈತರ ಬೆಳೆ ನಷ್ಠ ಉಂಟಾಗುತ್ತಿವೆ. ಇವುಗಳನ್ನು ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದ ಅವರು, ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಆಹಾರ ಉತ್ಪಾದನೆಯಾಗುವಂತಹ ಹಣ್ಣಿನ ಮರಗಳನ್ನು ನೆಡಲು ಮುಂದಾಗಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರಕ್ಕೆ ಭೂಮಿಗಳನ್ನು ಕೋರಿ ರೈತರು ಸಲ್ಲಿಸಿರುವ ನಿಗಧಿತ ನಮೂನೆಯ ಅರ್ಜಿಗಳನ್ನು ಆದಷ್ಟು ಶೀಘ್ರದಲ್ಲಿಯೇ ನಿಯಮಾನುಸಾರ ವಿಲೇವಾರಿ ಮಾಡಬೇಕೆಂದು ತಿಳಿಸಿದ ಅವರು, ರೈತರು ಪಹಣಿ ಕಾಲಂಗಳಲ್ಲಿ ಋಣಭಾರದ ಬದಲಾವಣೆ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಅವುಗಳನ್ನು ಆಗಿಂದಾಗ್ಗೆ ವಿಲೇವಾರಿ ಮಾಡಬೇಕೆಂದು ತಿಳಿಸಿದರು.
ಹವಾಮಾನ ಆಧಾರಿತ ಬೆಳೆ ವಿಮೆಯನ್ನು ರೈತರುಗಳು ಮಾಡಿಸಿದಲ್ಲಿಯೂ ಕೆಲವು ರೈತರುಗಳಿಗೆ ಪರಿಹಾರದ ಹಣವು ಸಿಕ್ಕದೇ ಇರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಕೆಲವು ಕಂದಾಯ ದಾಖಲೆ ಹಾಗೂ ವೈಯಕ್ತಿಕ ಮಾಹಿತಿಗಳಲ್ಲಿ ಸಣ್ಣಪುಟ್ಟ ದೋಷಗಳ
ಕಾರಣದಿಂದಾಗಿ ಪರಿಹಾರದ ಹಣ ಸಿಕ್ಕಿಲ್ಲ. ಈ ಬಗ್ಗೆ ಇಲಾಖೆಯವರು ಹಾಗೂ ಬ್ಯಾಂಕ್ ಅಧಿಕಾರಿಗಳು ಸಮನ್ವಯದೊಂದಿಗೆ ಆಗಿರುವ ನ್ಯೂನತೆಗಳನ್ನು ಬಗೆಹರಿಸಿ, ಪರಿಹಾರ ಒದಗಿಸಬೇಕೆಂದು ಸೂಚನೆ ನೀಡಿದರು.
ಕಿಂಡಿ ಅಣೆಕಟ್ಟುಗಳ ನಿರ್ಮಾಣವನ್ನು ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಮಾಡಲಾಗಿದೆ. ಇವುಗಳ ನಿರ್ವಹಣೆಯನ್ನು ಸ್ಥಳೀಯ ರೈತರುಗಳೇ ಸಂಘಗಳನ್ನು ಮಾಡಿಕೊಳ್ಳುವುದರ ಮೂಲಕ ನಿರ್ವಹಿಸಬೇಕು ಎಂದ
ಅವರು, ಹಳೆಯ ಕಿಂಡಿ ಅಣೆಕಟ್ಟುಗಳಿಗೆ ಮರದ ಹಲಗೆಗಳನ್ನು ಅಳವಡಿಸಲಾಗಿದೆ. ಇವುಗಳ ನಿರ್ವಹಣೆ ಸರಳವಾಗಿಲ್ಲದೇ ಇರುವುದರಿಂದ ಫೈಬರ್ ತಡೆಗೋಡೆಯಾಗಿ ನಿರ್ವಹಿಸಲು ಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ರೈತರು ಇಂದಿನ ಸಭೆಯಲ್ಲಿ ತಿಳಿಸಿರುವ ಕೆಲವು ಸಮಸ್ಯೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬಗೆಹರಿಸುವಂತದ್ದಾಗಿದ್ದು, ಸರ್ಕಾರದ ಗಮನಕ್ಕೆ ತಂದು ಪರಿಹರಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಮಾತನಾಡುತ್ತಾ, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಹಳೆಯ ಗುಜರಿ ವಸ್ತುಗಳ ವಿಲೇವಾರಿಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ತನಿಖೆಯಾಗಬೇಕು. ತೆಂಗು ಬೆಳೆಗೆ ಬೆಂಬಲ ಬೆಲೆ ನೀಡಬೇಕು. ಸಾವಯವ ಕೃಷಿಗೆ ಉತ್ತೇಜನ ನೀಡುವುದರ ಜೊತೆಗೆ ಮಾರುಕಟ್ಟೆ ಮೌಲ್ಯವರ್ಧನೆಗೆ ಸರ್ಕಾರ ಸಹಕರಿಸಬೇಕು ಸೇರಿದಂತೆ ಮತ್ತಿತರ ಸಮಸ್ಯೆಗಳನ್ನು
ಸಚಿವರ ಗಮನಕ್ಕೆ ತಂದರು.