KARNATAKA
ನಾಳೆಯಿಂದ ರಾತ್ರಿ ಕರ್ಫ್ಯೂ, ಜುಲೈನಲ್ಲಿ ಮತ್ತೆ ಭಾನುವಾರ ಲಾಕ್ ಡೌನ್

ಬೆಂಗಳೂರು, ಜೂನ್ 27 : ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಭಾನುವಾರದ ಲಾಕ್ ಡೌನ್ ಗೆ ಸರಕಾರ ನಿರ್ಧರಿಸಿದೆ.
ಜುಲೈ ತಿಂಗಳಲ್ಲಿ ಪ್ರತಿ ಭಾನುವಾರ ಲಾಕ್‌ಡೌನ್ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಅಲ್ಲದೆ, ನಾಳೆ ಜೂನ್ 28ರಿಂದ ಪ್ರತಿ ದಿನ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಹಿಂದಿನ ರೀತಿ ಕರ್ಫ್ಯೂ ಜಾರಿಗೆ ನಿರ್ಧರಿಸಲಾಗಿದೆ. ಸರಕಾರಿ ನೌಕರರು ವಾರಕ್ಕೆ ಐದು ದಿನಗಳ ಕಾಲ ಮಾತ್ರ ಕರ್ತವ್ಯ ನಿರ್ವಹಿಸಿದರೆ ಸಾಕೆಂಬ ಸೂಚನೆಯನ್ನೂ ನೀಡಲಾಗಿದೆ.

ರಾತ್ರಿ ಸಮಯದಲ್ಲಿ ಸಂಪೂರ್ಣ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ರಾತ್ರಿ ಹೊತ್ತಿನ ಅನಗತ್ಯ ಸಂಚಾರಕ್ಕೆ ಕಡಿವಾಣ ಹೇರುವ ಮೂಲಕ ಕೊರೊನಾ ಹರಡುವುದನ್ನು ತಡೆಯಲು ತಜ್ಞರ ಸಮಿತಿ ಶಿಫಾರಸು ಮಾಡಿತ್ತು. ರಾಜ್ಯದಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ತಜ್ಞರ ಕಾರ್ಯಪಡೆ ಜತೆ ಸಭೆ ನಡೆಸಿತ್ತು.
ರಾಜಧಾನಿ ಬೆಂಗಳೂರಿನಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಬೇಕೆಂಬ ಒತ್ತಡ ರಾಜ್ಯ ಸರಕಾರದ ಮೇಲಿದೆ. ಈ ನಿಟ್ಟಿನಲ್ಲಿ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಕಠಿಣ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಕೇಂದ್ರ ಸರಕಾರದ ಲಾಕ್ ಡೌನ್ ಜೂನ್ 30ಕ್ಕೆ ಕೊನೆಯಾಗುತ್ತಿದ್ದು ಮುಂದಿನ ನಿರ್ಧಾರದ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಬಹುತೇಕ ಆಯಾ ರಾಜ್ಯಗಳಿಗೆ ನಿರ್ಧಾರ ಕೈಗೊಳ್ಳಲು ಬಿಡುವ ಸಾಧ್ಯತೆಯಿದೆ.