DAKSHINA KANNADA
ಸುಳ್ಯ: ಅನ್ಯಕೋಮಿನ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ ವಿದ್ಯಾರ್ಥಿಗೆ ಥಳಿತ: 7 ಮಂದಿ ವಿರುದ್ಧ ಪ್ರಕರಣ ದಾಖಲು
ಸುಳ್ಯ, ಆಗಸ್ಟ್ 31: ಹಿಂದೂ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ್ದ ಮುಸ್ಲಿಂ ವಿದ್ಯಾರ್ಥಿಗೆ ಅದೇ ಕಾಲೇಜಿನ ವಿದ್ಯಾರ್ಥಿಗಳ ತಂಡವೊಂದು ಹಿಗ್ಗಾಮುಗ್ಗ ಥಳಿಸಿ ಜೀವಬೆದರಿಕೆಯೊಡ್ಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕಸಬಾ ಗ್ರಾಮದ ಕೊಡಿಯಾಲಬೈಲು ಎಂಬಲ್ಲಿ ನಿನ್ನೆ ನಡೆದಿದೆ.
ಆರೋಪಿಗಳನ್ನು ದೀಕ್ಷಿತ್ (ಬಿಬಿಎ) ಮತ್ತು ಧನುಷ್(ಬಿಬಿಎ ) ಪ್ರಜ್ವಲ್, (ಅಂತಿಮ ವರ್ಷದ ಬಿಬಿಎ) ತನುಜ್ (ಅಂತಿಮ ವರ್ಷದ ಬಿಕಾಂ) ಅಕ್ಷಯ್ (ದ್ವಿತಿಯ ವರ್ಷದ ಬಿಕಾಂ) ಮೋಕ್ಷಿತ್ (ಅಂತಿಮ ವರ್ಷದ ಬಿಕಾಂ) ಹಾಗೂ ಸುಳ್ಯದ ಎನ್ ಎಂಸಿ ಕಾಲೇಜಿನ ಗೌತಮ್ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿ ಮಹಮ್ಮದ್ ಸನೀಫ್ ಸುಳ್ಯ ಕಸಬಾ ಗ್ರಾಮದ ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ,ಕಾಂ ಪದವಿ ಕಲಿಯುತ್ತಿದ್ದು, ಆತನಿಗೆ ಅದೇ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯೊಬ್ಬಳ ಜೊತೆ ಸ್ನೇಹಸಂಬಂಧವಿತ್ತು. ಇದು ಕೆಲ ಸಹಪಾಠಿಗಳಿಗೆ ಹಿಡಿಸುತ್ತಿರಲಿಲ್ಲ.
ಈ ಹಿನ್ನೆಲೆ ಆ.30 ರಂದು ಬೆಳಗ್ಗೆ 10:30ಕ್ಕೆ ಮಹಮ್ಮದ್ ಸನೀಫ್ ತರಗತಿಗೆ ಬಂದ ದೀಕ್ಷಿತ್ ಮತ್ತು ಧನುಷ್ ಎಂಬುವವರು ಮಾತನಾಡಲು ಇದೆ ಎಂದು ಹೇಳಿ ಕಾಲೇಜಿನ ಗ್ರೌಂಡ್‌ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಇನ್ನುಳಿದ ಆರೋಪಿಗಳು ಈತನ ಕಾಲರ್ ಪಟ್ಟಿ ಹಿಡಿದು ನೀನು ಆಕೆಯೊಂದಿಗೆ ಯಾಕೆ ಮಾತನಾಡುತ್ತಿಯಾ ಎಂದು ಪ್ರಶ್ನಿಸಿದ್ದಾರೆ.
ನಂತರ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿ ಇನ್ನು ಮುಂದಕ್ಕೆ ಆಕೆಯೊಂದಿಗೆ ಮಾತನಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ವಿದ್ಯಾರ್ಥಿ ಸುಳ್ಯ ಸರ್ಕಾರಿ ಆಸ್ಪತ್ರೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.