DAKSHINA KANNADA
ವೈದ್ಯರು ನರ್ಸ್ ಗಳಿಗೆ ಕೊರೊನಾ ಸುಳ್ಯ ಸರಕಾರಿ ಆಸ್ಪತ್ರೆ ಎರಡು ದಿನ ಸೀಲ್ ಡೌನ್
ಸುಳ್ಯ ಜುಲೈ 9: ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಸೊಂಕು ತಗುಲಿದ ಹಿನ್ನಲೆ ಇಡೀ ಆಸ್ಪತ್ರೆಯನ್ನು ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಸುಳ್ಯ ಸರಕಾರಿ ಆಸ್ಪತ್ರೆ ವೈದ್ಯರು, ನರ್ಸ್ ಸೇರಿದಂತೆ 6 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಹಿನ್ನಲೆ ಇಂದು ಹಾಗೂ ನಾಳೆ ಆಸ್ಪತ್ರೆಯಲ್ಲಿ ಸ್ಯಾನಿಟೈಸೇಷನ್ ನಡೆಯಲಿದ್ದು ಆಸ್ಪತ್ರೆಯನ್ನು ಎರಡು ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ. ಹಾಗೆಯೇ ಹೊಸದಾಗಿ ಬರುವ ರೋಗಿಗಳಿಗೆ, ಹೆರಿಗೆಗೆ ಹಾಗೂ ಡಯಾಲಿಸಿಸ್‌ಗೆ ಬರುವವರಿಗೆ ಅವಕಾಶವಿರುವುದಿಲ್ಲ ಎಂದು ವರದಿಯಾಗಿದೆ.
ಕೆಲ ದಿನಗಳ ಹಿಂದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಪಾಸಿಟಿವ್ ಆಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಬಳಿಕ ಆ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ ನರ್ಸ್‌ಗೂ ಕೊರೊನಾ ಪಾಸಿಟಿವ್ ಆಗಿತ್ತು. ಈಗ ಸುಳ್ಯ ಸರಕಾರಿ ಆಸ್ಪತ್ರೆ ವೈದ್ಯರು, ನರ್ಸ್ ಸೇರಿದಂತೆ 6 ಜನರಿಗೆ ಸೋಂಕು ದೃಢವಾಗಿದೆ. ಸೋಂಕು ದೃಢಪಟ್ಟ ಆರು ಜನರ ಪೈಕಿ ಒಬ್ಬರು ವೈದ್ಯಾಧಿಕಾರಿ, ಮೂವರು ನರ್ಸ್‌ಗಳು ಹಾಗೂ ಇಬ್ಬರು ಡಯಾಲಿಸಿಸ್ ವಿಭಾಗದ ತಂತ್ರಜ್ಞರು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಪ್ರಸ್ತುತ 17 ಮಂದಿ ಒಳರೋಗಿಗಳು ಇದ್ದು ಅವರಿಗೆ ಚಿಕಿತ್ಸೆ ನೀಡಲು ವೈದ್ಯಾಧಿಕಾರಿ ಹಾಗೂ ಮೂವರು ನರ್ಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.