DAKSHINA KANNADA
ಸುಳ್ಯ – ಸಂಪಾಜೆಯಲ್ಲಿ ದಿಢೀರ್ ಪ್ರವಾಹ…ಅಪಾರ ಹಾನಿ

ಸುಳ್ಯ ಅಗಸ್ಟ್ 29: ಕೊಡಗಿನ ಗಡಿಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪಯಸ್ವಿನಿ ನದಿ ಉಕ್ಕಿ ಹರಿದು ಹಲವೆಡೆ ನೀರು ನುಗ್ಗಿ ಆವಾಂತರ ಸೃಷ್ಠಿಯಾಗಿದೆ.
ಕೊಡಗಿನ ಗಡಿಭಾಗಗಳಲ್ಲಿ ಭಾರೀ ಮಳೆಯಾದ ಕಾರಣ ಕೊಯನಾಡು , ಚೆಂಬು ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ, ಕೊಯನಾಡು ಶಾಲೆ ಬಳಿಯ 5 ಮನೆಗಳು ಜಲಾವೃತವಾಯಿತು. ಬಳಿಕ ಈ ಮನೆಯವರನ್ನು ಸುರಕ್ಷಿತ ಸ್ಣಳಗಳಿಗೆ ಸ್ಥಳಾಂತರಿಸಲಾಯಿತು. ಭಾರೀ ಗಾತ್ರದ ಮರಗಳು ಪ್ರವಾಹ ನೀರಿನಲ್ಲಿ ಕೊಚ್ಚಿ ಬಂದು ಕೊಯನಾಡಿನ ಕಿಂಡಿ ಅಣೆಕಟ್ಟಿನಲ್ಲಿ ಅಡ್ಡಲಾಗಿ ನಿಂತಿದೆ. ಹಲವೆಡೆ ಕೃಷಿ, ತೋಟಗಳಿಗೆ ನೀರು ನುಗ್ಗಿದೆ. ಊರುಬೈಲು, ಚೆಂಬು ಭಾಗದಲ್ಲಿ ಸೇತುವೆಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಚೆಂಬು ಗ್ರಾಮದ ಆನೆಹಳ್ಳ ಎಂಬಲ್ಲಿ ಕಿಂಡಿ ಅಣೆಕಟ್ಟು ನೀರಿನಲ್ಲಿ ಕೊಚ್ಚಿಹೋಗಿದ್ದು , ದಬ್ಬಡ್ಕದಲ್ಲೂ ಗುಡ್ಡ ಕುಸಿದಿದ್ದು, ಸಮೀಪದ ರವಿ ಎಂಬವರ ಮನೆಗೆ ಹಾನಿ ಸಂಭವಿಸಿದೆ. ಇತ್ತೀಚಿಗೆ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದ ಮಾರ್ಪಡ್ಕ – ಊರುಬೈಲು ಸೇತುವೆಯ ಎರಡೂ ಬದಿ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಈ ಪರಿಸರದ ಹಲವು ಕೃಷಿಕರ ಅಡಿಕೆ ತೋಟಗಳು ನೀರಿನಿಂದ ಆವೃತಗೊಂಡಿದೆ.