DAKSHINA KANNADA
ಸುಳ್ಯ : ಶೌಚಾಲಯದ ಗೋಡೆ ಕುಸಿದು ಬಿದ್ದು ಇಬ್ಬರು ಮಹಿಳೆಯರ ಸಾವು

ಸುಳ್ಯ ಡಿಸೆಂಬರ್ 19: : ಶೌಚಾಲಯದ ಹಳೆಯ ಗೋಡೆ ಕುಸಿದು ಬಿದ್ದು ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಮೃತಪಟ್ಟ ದಾರುಣ ಘಟನೆ ಎಣ್ಮೂರು ಗ್ರಾಮದ ನರ್ಲಡ್ಕದಲ್ಲಿ ನಡೆದಿದೆ.
ಬೀಪಾತುಮ್ಮ ಹಾಗೂ ನೆಬಿಸ ಮೃತ ಮಹಿಳೆಯರು ನರ್ಲಡ್ಕ ನಿವಾಸಿ ಹರೀಶ ನಾಯ್ಕ ಎಂಬವರ ಮನೆಯ ಹಳೆಯ ಟಾಯ್ಲೆಟ್ ಗೋಡೆಯನ್ನು ತೆಗೆದು ಹೊಸ ಕಟ್ಟಡ ಕಟ್ಟುವ ಕೆಲಸ ನಡೆಯುತ್ತಿತ್ತು. ಇತರ ಕೆಲಸಗಾರರ ಜತೆ ಸಮೀಪದ ಮನೆಯ ಬೀಪಾತುಮ್ಮ ಮತ್ತು ನೆಬಿಸಾರವರು ಕಾಮಗಾರಿ ಕೆಲಸದಲ್ಲಿ ತೊಡಗಿದ್ದರು.

ಆ ವೇಳೆ ಮಣ್ಣಿನ ಇಟ್ಟಿಗೆಯ ಗೋಡೆ ಇಬ್ಬರು ಮಹಿಳೆಯ ಮೇಲೆ ಏಕಾಏಕಿ ಕುಸಿದು ಬಿತ್ತು. ತಕ್ಷಣ ಅಲ್ಲಿದ್ದವರು ಇವರನ್ನು ಮಣ್ಣಿನ ರಾಶಿಯಿಂದ ಹೊರತೆಗೆದು ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ದಾರಿಮಧ್ಯೆ ಬೀಪಾತುಮ್ಮ ರವರು ಕೊನೆಯುಸಿರೆಳೆದರು. ನೆಬಿಸರವರನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅವರೂ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ದುರಂತ ಸ್ಥಳಕ್ಕೆ ಬೆಳ್ಳಾರೆ ಎಸ್ ಐ ಆಂಜನೇಯರೆಡ್ಡಿ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ ಭೇಟಿ ನೀಡಿದ್ದಾರೆ.