DAKSHINA KANNADA
ಸುಳ್ಯ ಪೆರಾಜೆ – ಬಿಳಿಯಾರಿಯಲ್ಲಿ ಕಾರಿನ ಮೇಲೆ ಒಂಟಿ ಸಲಗ ದಾಳಿ , ಪ್ರಯಾಣಿಕರು ಅಪಾಯದಿಂದ ಪಾರು..!
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗ ಸುಳ್ಯದಲ್ಲಿ ಮತ್ತೆ ಕಾಡಾನೆ ಹಾವಾಳಿ ಕಾಣಿಸಿಕೊಂಡಿದ್ದು, ಪೆರಾಜೆ ಗ್ರಾಮದಲ್ಲಿ ಸುತ್ತಾಡಿ ಬಳಿಕ ಪಯಸ್ವಿನಿ ನದಿ ದಾಟಿ ಪೂಮಲೆ ಬೆಟ್ಟಕ್ಕೆ ತೆರಳುವ ಸಂದರ್ಭ ಬಿಳಿಯಾರಿನಲ್ಲಿ ನಿಂತಿದ್ದ ಕಾರಿಗೆ ಒಂಟಿ ಸಲಗ ಹಾನಿ ಮಾಡಿದ ಘಟನೆ ನಡೆದಿದೆ.
ಪೆರಾಜೆಯ ಉದ್ಯಮಿ ಉನೈಸ್ ಪೆರಾಜೆಯವರ ಮಾರುತಿ ಒಮಿನಿ ಕಾರಿಗೆ ಹಾನಿ ಮಾಡಿದೆ. ಕಾರಿನ ಚಾಲಕ ಅವಿನಾಶ್ ಗೂನಡ್ಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನೆ ದಾಳಿ ಮಾಡುತ್ತಿದ್ದ ವೇಳೆ ಅವರು ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತ್ತಿದ್ದರು. ಕಾರಿನಲ್ಲಿ ಶಾಲೆಗೆ ಹೋಗುವ ಬಾಲಕ ಇದ್ದು ಅಪಾಯವಿಲ್ಲದೇ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಪೆರಾಜೆಯ ದಿವಾಕರ ರೈಯವರ ಗದ್ದೆಗೆ ಬಂದು ಬಳಿಕ ಅಲ್ಲಿಂದ ಬಿಳಿಯಾರು ರಸ್ತೆಗಾಗಿ ಪೂಮಲೆ ಕಾಡಿನತ್ತ ದಾಟಿದೆ. ಪೆರಾಜೆ ಗ್ರಾಮದ ಕಂಡಾಡು, ನಿಡ್ಯಮಲೆ, ಪೀಚೆ, ಮೂಲೆಮಜಲು – ದೇಶಕೋಡಿಯಾಗಿ ಕಾಡಾನೆ ಬಂದಿದೆ. ಮೂಲೆಮಜಲು ಧನಂಜಯ ಎಂಬವರು ಪೆರಾಜೆ ಪೇಟೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾಡಾನೆ ಎದುರಾಗಿ ಬಂದಿದೆ. ತಕ್ಷಣ ಅವರು ಬೈಕನ್ನು ಬಿಟ್ಟು ಓಡಿ ತಪ್ಪಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಇದೇ ಒಂಟಿ ಸಲಗ ಕಳೆದ ಆರೇಳು ವರ್ಷಗಳಿಂದ ಪೆರಾಜೆ ಗ್ರಾಮದ ಮೂಲಕ ಕೋಳಕ್ಕಿ ಮಲೆ ಬೆಟ್ಟಕ್ಕೆ ಹೋಗಿ ಬರುತ್ತಿದ್ದು, ಒದು ವಾರದ ಬಳಿಕ ಮರಳಿ ಹೋಗುತ್ತದೆ ಈ ವರ್ಷವೂ ಈ ಆನೆ ಬಂದಿದ್ದು ಪ್ರತಿ ವರ್ಷ ಬಂದಾಗಲೂ ಯಾವುದೇ ಹಾನಿ ಮಾಡದೇ ಹೋಗುತ್ತಿದ್ದು ಈ ಬಾರಿ ಇದೇ ಮೊದಲ ಸಲ ಕಾರು ಸೇರಿ ಕೆಲವೆಡೆ ಹಾನಿ ಮಾಡಿದೆ ಎನ್ನುತ್ತಾರೆ ಸ್ಥಳೀಯರು..