ಸುಳ್ಯ ಜುಲೈ 03: ನಗರದ ಸರ್ಕಾರಿ ಆಸ್ಪತ್ರೆಯ ಹಿಂಬದಿ ರಸ್ತೆಯ ಮಧ್ಯದಲ್ಲೇ ವಿದ್ಯುತ್ ಕಂಬವನ್ನು ಬಳಸಿಕೊಂಡು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದ ಕಾಂಕ್ರೀಟ್ ರಸ್ತೆಯ ಕಂಬಗಳನ್ನು ಮೆಸ್ಕಾಂ ಅಧಿಕಾರಿಗಳು ಕೊನೆಗೂ ತೆರವುಗೊಳಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತ ಮೆಸ್ಕಾಂ, ಕಂಬಗಳನ್ನು ರಸ್ತೆ ಮಧ್ಯದಿಂದ ಪಕ್ಕಕ್ಕೆ ಸ್ಥಳಾಂತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿದ್ದ ಲೇಔಟ್ ಮಾಲೀಕರು, ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬವನ್ನು ರಸ್ತೆಯ ಒಳಗೊಳ್ಳುವಂತೆ ಮಾಡಿಕೊಂಡೇ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ್ದರು ಎನ್ನಲಾಗಿದೆ.
ರಸ್ತೆಯ ಮಧ್ಯದಲ್ಲೇ ವಿದ್ಯುತ್ ಕಂಬ ಇದ್ದಿದ್ದರಿಂದ ಸ್ಥಳೀಯ ಸಾರ್ವಜನಿಕರ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಇದು ಭಾರಿ ಅಪಘಾತಕ್ಕೂ ಆಹ್ವಾನ ನೀಡುವಂತಿತ್ತು. ಈ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಸಾಮಾಜಿಕ ಜಾಲತಾಣಗಳು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (MESCOM) ಸುಳ್ಯ ವಿಭಾಗದ ಅಧಿಕಾರಿಗಳು, ಕಾಂಕ್ರೀಟ್ ರಸ್ತೆಯ ಮಧ್ಯದಲ್ಲಿದ್ದ ವಿದ್ಯುತ್ ಕಂಬಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದಾರೆ. ಲೇಔಟ್ನ ದೊಡ್ಡ ವಿದ್ಯುತ್ ಕಂಬವನ್ನು ರಸ್ತೆಯ ಬದಿಗೆ ಸುರಕ್ಷಿತವಾಗಿ ಶಿಫ್ಟ್ ಮಾಡಲಾಗಿದ್ದು, ಈಗ ವಾಹನ ಸವಾರರು ನಿರಾಳವಾಗಿ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.