DAKSHINA KANNADA
ಸುಳ್ಯ : ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ ರಾಘವನನ್ನು ತಮಿಳುನಾಡಿನಿಂದ ಎತ್ತಾಕಿ ಬಂದ ಸುಳ್ಯ ಪೊಲೀಸರು..!

ಸುಳ್ಯ : ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡದ ಸುಳ್ಯ (Sullia) ಪೊಲೀಸರ ಕಸ್ಟಡಿಯಲ್ಲಿದ್ದು ಪರಾರಿಯಾಗಿದ್ದ ಆರೋಪಿಯನ್ನು ಕೊನೆಗೂ ಸುಳ್ಯ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ರಾಘವನ್ ಕೆಜೀಶ್ವರನ್ ಅಲಿಯಾಸ್ ಕೂಲಿ ಕರಣ್ (25 )ಮತ್ತೆ ಸುಳ್ಯ ಪೊಲೀಸರ ವಶವಾದ ಆರೋಪಿಯಾಗಿದ್ದಾನೆ. ತಮಿಳುನಾಡಿನಲ್ಲಿ ಹರ ಸಾಹಸ ಪಟ್ಟು ಸುಳ್ಯ ಪೊಲೀಸರು ಆರೋಪಿ ರಾಘವನನ್ನು ವಶಕ್ಕೆ ಪಡೆದು ಸುಳ್ಯಕ್ಕೆ ಕರೆತಂದಿದ್ದಾರೆ. ಅ.5 ರಂದು ಪೊಲೀಸರು ಆತನನ್ನು ಸಂಪಾಜೆಯ ಅಂಬರೀಶ್ ಭಟ್ಟರ ಮನೆಯ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಂಡಿದ್ದರು, ನಿಯಮ ಪ್ರಕಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ವೈದ್ಯಕೀಯ ತಪಾಸಣೆ ನಡೆಸಬೇಕು, ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಕರೆದುಕೊಂಡು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ಆತ ಪೊಲೀಸರನ್ನೇ ದೂಡಿ ಹಾಕಿ ಪರಾರಿಯಾಗಿದ್ದ. ಈತನ ಪತ್ತೆಗಾಗಿ ಸುಳ್ಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಹಾಗೂ ಕ್ರೈಂ ಪಿಸಿಐ ಸರಸ್ವತಿ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಿದ್ದರು. ಸುಳ್ಯದಿಂದ ತಮಿಳುನಾಡಿಗೆ ಹೋಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ತಮಿಳುನಾಡಿಗೆ ಪೊಲೀಸ್ ತಂಡ ತೆರಳಿತ್ತು. ಆದ್ರೆ ಆತನನ್ನು ಪತ್ತೆ ಹಚ್ಚುದೇ ಕಷ್ಟವಾಗಿತ್ತು. ಕಾರಣ ಆರೋಪಿ ತಲೆ , ಮೀಸೆ ಬೋಳಿಸಿ ಸುತ್ತಾಡುತ್ತಿದ್ದ. ಸ್ಥಳೀಯರಿಂದ ಪೂರಕ ಮಾಹಿತಿ ಪಡೆದ ಪೊಲೀಸರು ತಲೆಕೂದಲು ಬೋಳಿಸಿ ಗುರುತು ಸಿಗದಂತೆ ತಿರುಗಾಟ ನಡೆಸುತ್ತಿದ್ದ ರಾಘವನನ್ನು ವಶಕ್ಕೆ ಪಡೆದು ಸುಳ್ಯಕ್ಕೆ ಕರೆತಂದು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
