ಮಗಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಗಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ “ಸುಕನ್ಯಾ ಸಮೃದ್ಧಿ” ಯೋಜನೆಯನ್ನ ಜಾರಿಗೆ ತಂದಿದೆ.
“ಬೇಟಿ ಬಚಾವೋ, ಬೇಟಿ ಪಡಾವೋ” ಆಶಯದಡಿಯಲ್ಲಿ ಈ ಯೋಜನೆಯನ್ನ ಆರಂಭಿಸಲಾಗಿದೆ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗೆ ಸಹಾಯವಾಗುವುದು ಈ ಯೋಜನೆಯ ಉದ್ದೇಶ. ಈ ಯೋಜನೆ ಬಗ್ಗೆ ಒಂದಷ್ಟು ಪ್ರಮುಖ ಮಾಹಿತಿಗಳು ಇಲ್ಲಿವೆ.
ಸುಕನ್ಯಾ ಸಮೃದ್ಧಿ ಯೋಜನೆಯ 10 ಹೈಲೈಟ್ಸ್ ಗಳು :
1) ಅವಧಿ ಎಷ್ಟು..?
ಒಟ್ಟು 21 ವರ್ಷ ಕಾಲಾವಧಿಯದ್ದಾಗಿದೆ. 14 ವರ್ಷಗಳ ಕಾಲ ಹಣ ಕಟ್ಟಬೇಕು. ತದನಂತರ 7 ವರ್ಷ ಗತಿಸಿದ ಬಳಿಕ ಯೋಜನೆಯ ಸಂಪೂರ್ಣ ಫಲವನ್ನ ಪಡೆದುಕೊಳ್ಳಬಹುದು.
2) ಎಷ್ಟು ಕಟ್ಟಬೇಕು..?
ಈ ಯೋಜನೆಯ ವಾರ್ಷಿಕ ಮೊತ್ತ 1 ಸಾವಿರದಿಂದ 1.5 ಲಕ್ಷ ರೂಪಾಯಿವರೆಗೂ ಇದೆ. ನೀವು ಪ್ರತಿವರ್ಷ ಎಷ್ಟು ಬೇಕಾದರೂ ಹಣವನ್ನ (1 ಸಾವಿರದಿಂದ ಒಂದೂವರೆ ಲಕ್ಷದವರೆಗೆ) ಪಾವತಿಸಬಹುದು.
3) ಯಾವಾಗ್ಯಾವಾಗ ಕಟ್ಟಬೇಕು..?
ನೀವು ಯಾವಾಗ ಬೇಕಾದರೂ ಹಣ ಕಟ್ಟಿಬಹುದು. ಇವತ್ತು 500, ನಾಳೆ 100, ಒಂದಷ್ಟು ದಿನದ ಬಳಿಕ ಇನ್ನಷ್ಟು ಹಣ… ಹೀಗೆ ಕನಿಷ್ಠ 100 ರೂಪಾಯಿಯಿಂದ ನೀವು ಯಾವಾಗ ಬೇಕಾದರೂ ಹಣ ಪಾವತಿ ಮಾಡಬಹುದು.
4) ಯಾವ ವಯಸ್ಸಿನ ಹುಡುಗಿ..?
ಹತ್ತು ವರ್ಷದ ವಯಸ್ಸಿನ ಮಿತಿ ದಾಟದ ಬಾಲಕಿಯರಿಗೆ ಈ ಯೋಜನೆ ಅನ್ವಯವಾಗುತ್ತದೆ. ಬಾಲಕಿಯ ಹೆಸರಿನಲ್ಲಿ ಆಕೆಯ ಪೋಷಕರು ಈ ಖಾತೆಯನ್ನ ಆರಂಭಿಸಿ, ನಿರ್ವಹಿಸಬಹುದಾಗಿದೆ. ಆದರೆ, ಬಾಲಕಿ ವಯಸ್ಸು 10 ವರ್ಷವನ್ನ ದಾಟಿದರೆ ಆ ಖಾತೆಯನ್ನ ನಿರ್ವಹಿಸಲು ಆಕೆಗೆ ಹಕ್ಕು ಸಿಗುತ್ತದೆ.
5) ಖಾತೆ ತೆರೆಯುವುದು ಹೇಗೆ..?
ನಿಮ್ಮ ಪ್ರದೇಶದಲ್ಲಿರುವ ಯಾವುದೇ ಅಂಚೆ ಕಚೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳ ನಿರ್ದಿಷ್ಟ ಕಚೇರಿಗಳಲ್ಲಿ ಖಾತೆ ತೆರೆಯಬಹುದು.
6) ಹಣ ಪಾವತಿ ವಿಳಂಬವಾದಾಗ…?
ಒಂದು ವೇಳೆ, ಒಂದಿಡೀ ವರ್ಷ ಹಣ ಕಟ್ಟದೇ ಇದ್ದಲ್ಲಿ ಈ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆ. ಅದನ್ನು ಪುನಾರಂಭಿಸಲು ಸುಮಾರು 50 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.
7) ತೆರಿಗೆ ಲಾಭ ಹೇಗೆ..?
ಈ ಯೋಜನೆ ಆದಾಯ ತೆರಿಗೆಯಿಂದ ವಿಮುಕ್ತವಾಗಿದೆ. ಮೆಚ್ಯೂರಿಟಿ ಬಳಿಕ ಬಂದ ಹಣಕ್ಕೆ ಯಾವ ತೆರಿಗೆಯನ್ನೂ ಪಾವತಿಸಬೇಕಾಗಿಲ್ಲ.
8) ಬಡ್ಡಿ ದರದ ಲಾಭ..?
ಕೇಂದ್ರ ಸರ್ಕಾರ ಈ ಯೋಜನೆಯಲ್ಲಿಡುವ ಠೇವಣಿಗೆ ಶೇ. 9.1ರಷ್ಟು ವಾರ್ಷಿಕ ಬಡ್ಡಿಯನ್ನ ಸದ್ಯಕ್ಕೆ ಘೋಷಣೆ ಮಾಡಿದೆ. ಇಷ್ಟು ಪ್ರಮಾಣದ ಬಡ್ಡಿಯನ್ನ ಯಾವುದೇ ಬ್ಯಾಂಕುಗಳು ನೀಡುತ್ತಿಲ್ಲವೆಂಬುದು ಇಲ್ಲಿ ಗಮನಾರ್ಹ. ಅಲ್ಲದೇ, ಈ ಯೋಜನೆಗೆ ಬಡ್ಡಿಯನ್ನ ನಿಗದಿಪಡಿಸುವುದು ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಲ, ಬದಲಾಗಿ ಖುದ್ದು ಸರ್ಕಾರವೇ ಬಡ್ಡಿದರವನ್ನ ಬೇಕೆಂದಾಗ ಬದಲಿಸಬಹುದಾಗಿದೆ.
9) ಮಧ್ಯದಲ್ಲಿ ಹಣ ಬೇಕೆಂದರೆ..?
ಬಾಲಕಿಯ ವಯಸ್ಸು 18 ವರ್ಷ ದಾಟಿದಾಗ, ಅಥವಾ ಆಕೆಯ ಮದುವೆ ಫಿಕ್ಸ್ ಆದಾಗ ಖಾತೆಯಲ್ಲಿ ಆವರೆಗೆ ಜಮೆಯಾದ ಹಣದಲ್ಲಿ ಶೇ. 50ರಷ್ಟು ಮೊತ್ತವನ್ನ ಹಿಂಪಡೆದುಕೊಳ್ಳುವ ಅವಕಾಶವಿದೆ.
10) ಬೇರೆ ಊರುಗಳಿಗೆ ಸ್ಥಳಾಂತರವಾದರೆ..?
ಒಂದು ಪ್ರದೇಶದಲ್ಲಿ ಖಾತೆಯನ್ನ ತೆರೆದು, ಒಂದಷ್ಟು ವರ್ಷಗಳ ಬಳಿಕ ಬೇರೆ ಊರಿಗೆ ಸ್ಥಳಾಂತರವಾದರೆ, ಈ ಸುಕನ್ಯ ಸಮೃದ್ಧಿ ಖಾತೆಯನ್ನೂ ಆಯಾ ಊರಿಗೆ ವರ್ಗಾಯಿಸಿಕೊಳ್ಳುವ ಅವಕಾಶವಿದೆ.