LATEST NEWS
ಗ್ರಾಹಕರ ದೋಚುತ್ತಿರುವ ಕೇಬಲ್ ಮಾಫಿಯಾದ ವಿರುದ್ಧ ಸಾರ್ವಜನಿಕರ ಆಕ್ರೋಶ
ಗ್ರಾಹಕರ ದೋಚುತ್ತಿರುವ ಕೇಬಲ್ ಮಾಫಿಯಾದ ವಿರುದ್ಧ ಸಾರ್ವಜನಿಕರ ಆಕ್ರೋಶ
ಮಂಗಳೂರು, ಅಗಸ್ಟ್ 25: 100 ಚಾನಲ್ ವೀಕ್ಷಿಸುವ ಸೌಲಭ್ಯ ನೀಡಿದ್ದಲ್ಲಿ 130 ರೂಪಾಯಿ ಮಾತ್ರ ಶುಲ್ಕ ವಿಧಿಸಬೇಕು ಎನ್ನುವ ರಾಜ್ಯ ಸರಕಾರದ ಆದೇಶವಿದ್ದರೂ, ಮಂಗಳೂರಿನಲ್ಲಿ ಮಾತ್ರ ಕೇಬಲ್ ಮಾಫಿಯಾಗಳು ಈ ಆದೇಶಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ.
ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಕೇಬಲ್ ಆಪರೇಟರುಗಳು ಗ್ರಾಹಕರಿಂದ 300 ರಿಂದ 330 ರೂಪಾಯಿಗಳನ್ನು ದೋಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂಬ ಒತ್ತಾಯ ಇದೀಗ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಕೇಬಲ್ ಸಂಪರ್ಕಕ್ಕೆ ದರ ನಿಗದಿ ಮಾಡಿ ನಿರ್ಣಯಗೊಂಡಿದೆ. ಇದರ ಪ್ರಕಾರ 100 ಚಾನೆಲ್ ವೀಕ್ಷಿಸುವ ಸೌಲಭ್ಯ ನೀಡಿದಲ್ಲಿ 130 ರೂಪಾಯಿ ಶುಲ್ಕ ವಿಧಿಸಬೇಕು. ಹಾಗೆ ಹೆಚ್ಚುವರಿ 25 ಚಾನೆಲ್ ಗಳಿಗೆ ಹೆಚ್ಚುವರಿಯಾಗಿ ಕೇವಲ 20 ರೂಪಾಯಿ ಮಾತ್ರ ಶುಲ್ಕ ಪಡೆಯಬೇಕು ಎಂದು ಆದೇಶ ಹೊರಡಿಸಿದೆ. ಇದಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವ ಕೇಬಲ್ ಸಂಸ್ಥೆಗಳ ಬಗ್ಗೆ ನಿಗಾ ವಹಿಸಲು ರಾಜ್ಯಗಳಿಗೆ ಈಗಾಗಲೇ ಸೂಚಿಸಿದೆ.
ಆದರೆ ಮಂಗಳೂರಿನಲ್ಲಿ ಮಾತ್ರ ಕೇಬಲ್ ಆಪರೇಟರ್ ಗಳ ದರ್ಬಾರ್ ಎಗ್ಗಿಲ್ಲದೇ ನಡೆಯುತ್ತಿದೆ. ಮಂಗಳೂರಿನಲ್ಲಿ ಕೇಬಲ್ ಟಿವಿ ಮಾಸಿಕ ಶುಲ್ಕವೇ 300 ರೂಪಾಯಿ ಗಡಿ ದಾಟಿದೆ. ರಾಜ್ಯ ಸರಕಾರ 130 ರೂಪಾಯಿ ಮಾಸಿಕ ಶುಲ್ಕದ ಆದೇಶಕ್ಕೆ ಇಲ್ಲಿ ಯಾವುದೇ ಕಿಮ್ಮತ್ತಿಲ್ಲ.
ಕೇಬಲ್ ನೆಟ್ ವರ್ಕ್ ಉದ್ಯಮದಲ್ಲಿ ವರ್ಷಕ್ಕೆ ಅಂದಾಜು 5 ಸಾವಿರ ಕೋಟಿ ವ್ಯವಹಾರ ನಡೆಯುತ್ತದೆ ಎಂದು ಅಂದಾಜಿಸಲಾಗಿದೆ.
ಇದರಿಂದ ಸರಕಾರಕ್ಕೆ ಯಾವುದೇ ಆದಾಯ ಬರುತ್ತಿಲ್ಲ ಎಂದು ವಿಧಾನಸಭೆ ಅಧಿವೇಶನದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದರು. ಈ ಕುರಿತಂತೆ ಕಾಯ್ದೆಯನ್ನು ಕೂಡ ತರಲಾಗುವುದೆಂದು ಈ ಸಂದರ್ಭದಲ್ಲಿ ಅವರು ಹೇಳಿದ್ದರು. ಆದರೆ ರಾಜ್ಯ ಸರಕಾರದ ಆದೇಶಕ್ಕೂ ತಮಗೂ ಯಾವುದೇ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಮಂಗಳೂರಿನ ಕೇಬಲ್ ಮಾಫಿಯಾ ವರ್ತಿಸುತ್ತಿದೆ.
ಅಲ್ಲದೆ ಚೀನಾದಿಂದ ಬರುವ ಕಳಪೆ ಗುಣಮಟ್ಟದ ಸೆಟ್ ಟಾಪ್ ಬ್ಲಾಕ್ಸ್ ಗಳಿಗೆ ಗ್ರಾಹಕರಿಂದ ಸಾವಿರಾರು ರೂಪಾಯಿಗಳನ್ನು ದೋಚಿತ್ತಿದೆ. ಕೆಲವೊಮ್ಮೆ ತಿಂಗಳು ಕಳೆಯುವುದರೊಳಗೆ ಈ ಸೆಟ್ ಟಾಪ್ ಬಾಕ್ಸ್ ಗಳು ಕೆಟ್ಟು ಹೋಗುತ್ತಿದ್ದು, ಇದನ್ನು ಸರಿಪಡಿಸುವ ನೆಪದಲ್ಲಿ ಕನಿಷ್ಟ 10 ದಿನಗಳ ಕಾಲ ಗ್ರಾಹಕರಿಗೆ ಕೇಬಲ್ ಕನೆಕ್ಷನ್ ಇಲ್ಲದಾಗೆ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ.