DAKSHINA KANNADA
ಸುಬ್ರಹ್ಮಣ್ಯ – ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್ ಚಾಲಕ ನಾಪತ್ತೆ

ಸುಬ್ರಹ್ಮಣ್ಯ ಜುಲೈ 23: ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್ ಚಾಲಕ ಜುಲೈ 22 ರಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ. ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ (52) ನಾಪತ್ತೆಯಾಗಿರುವ ವ್ಯಕ್ತಿ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಡುಕಾಟ ಆರಂಭಿಸಲಾಗಿದೆ.
ಹೊನ್ನಪ್ಪ ಅವರು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬ್ಯಲೆನ್ಸ್ ವಾಹನದ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಅವರು ಜುಲೈ 22ರಂದು ಕರ್ತವ್ಯಕ್ಕೆಂದು ಮನೆಯಿಂದ ಬೆಳಗ್ಗೆ ಹೋಗಿದ್ದು, ಬಳಿಕ ಕಾಣೆಯಾಗಿದ್ದಾರೆ. ಅಲ್ಲದೆ ಅಗ್ರಹಾರ ದೇವಸ್ಥಾನದ ಬಳಿಯಿಂದಾಗಿ ಕುಮಾರಧಾರ ನದಿ ಕಡೆ ಹೋಗುತ್ತಿರುವುದು ಅಲ್ಲಿನ ಸಿ.ಸಿ. ಕೆಮರಾದಲ್ಲಿ ದಾಖಲಾಗಿದ್ದು, ಈ ಹಿನ್ನಲೆ ನದಿಗೆ ಹಾರಿರುವ ಶಂಕೆ ಇದ್ದು, ಕುಮಾರಧಾರ ನದಿಯಲ್ಲಿ ಹುಡುಕಾಟ ಆರಂಭಿಸಲಾಗಿದೆ. ಎಸ್.ಡಿ.ಆರ್.ಎಫ್. ತಂಡ, ಈಜುಗಾರರು ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು, ಸ್ಥಳೀಯರು ಘಟನಾ ಸ್ಥಳದಲ್ಲಿದ್ದಾರೆ.
