KARNATAKA
ಬಡಗುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
ಉಡುಪಿ, ಏಪ್ರಿಲ್ 25: ʼಗಾನಕೋಗಿಲೆʼ ಎಂದೇ ಅಭಿಮಾನಿಗಳ ಮನದಲ್ಲಿ ನೆಲೆಯೂರಿರುವ, ಯಕ್ಷಗಾನದ ಬಡಗುತಿಟ್ಟಿನ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ. ಅವರು ತಮ್ಮ 67ನೇ ವಯಸ್ಸಿನಲ್ಲಿ ಬೆಂಗಳೂರಿನ ಮನೆಯಲ್ಲಿ ಏ.25ರಂದು ಬೆಳಗ್ಗೆ ನಿಧನ ಹೊಂದಿದರು.
ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ನಾಲ್ಕೂವರೆ ದಶಕಗಳಿಗೂ ಹೆಚ್ಚುಕಾಲ ಯಕ್ಷಗಾನ ಕ್ಷೇತ್ರಕ್ಕೆ ದುಡಿದಿರುವ ಧಾರೇಶ್ವರರು ತಮ್ಮ ವಿಶಿಷ್ಠ ಕಂಠದ ಮೂಲಕ ಯಕ್ಷಾಭಿಮಾನಿಗಳಿಗೆ ಮೋಡಿ ಮಾಡಿದ್ದರು.
ಪೆರ್ಡೂರು ಮೇಳದಲ್ಲಿ ಸುದೀರ್ಘ 28 ವರ್ಷಗಳ ಕಾಲ ಭಾಗವತರಾಗಿದ್ದರು. ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ, ಶಿರಸಿ ಮೇಳದಲ್ಲೂ ಭಾಗವತರಾಗಿದ್ದರು. ಯಕ್ಷಗಾನದಲ್ಲಿ ಸಾಂಪ್ರದಾಯಿಕ ರಾಗಗಳ ಜತೆಗೆ ಹೊಸ ರಾಗಗಳ ಬಳಸಿ ಯಶಸ್ವಿಯಾಗಿದ್ದ ಧಾರೇಶ್ವರರು 400ಕ್ಕೂ ಆಧಿಕ ಯಕ್ಷಗಾನದ ಕ್ಯಾಸೆಟ್‌ಗಳಿಗೆ ಧನಿಯಾಗಿದ್ದರು. 300ಕ್ಕೂ ಅಧಿಕ ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಪ್ರಸಂಗಗಳನ್ನು ನಿರ್ದೇಶಿಸಿದ್ದರು.
ಕೆಲಕಾಲ ಎಲೆಕ್ಟ್ರಿಕ್ ಅಂಗಡಿ ತೆರೆದು ಯಕ್ಷಗಾನ ಮೇಳಗಳಿಗೆ ಲೈಟಿಂಗ್ಸ್ ಪರಿಕರ ಪೂರೈಸುವ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದರು. ಧಾರೇಶ್ವರ ಯಕ್ಷ ಬಳಗ ಸ್ಥಾಪಿಸಿದ್ದರು. ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಗೌರವಗಳು ಸಂದಿವೆ.
ಗುರುವಾರ ಸಂಜೆ ಕುಂದಾಪುರ ತಾಲ್ಲೂಕಿನ ಕಿರಿಮಂಜೇಶ್ವರದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.