Connect with us

    DAKSHINA KANNADA

    ವಿಗ್ರಹಗಳ ಜಲಸ್ತಂಭನಕ್ಕೆ ಸುರಕ್ಷಿತ ಸರಳ ಯಂತ್ರ ಆವಿಷ್ಕರಿಸಿದ ಪುತ್ತೂರಿನ ವಿದ್ಯಾರ್ಥಿಗಳು..! 

    ಪುತ್ತೂರು : ಗಣೇಶೋತ್ಸವ, ನವರಾತ್ರಿ ಉತ್ಸವಗಳಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ, ಅದಕ್ಕೆ ಪೂಜೆ ನೆರವೇರಿಸಿಸ ಬಳಿಕ ಯೋಜಿತ ಸಮಯದಲ್ಲಿ ಅದನ್ನು ವಿಸರ್ಜಿಸುವ ಪ್ರಕ್ರಿಯೆ ಎಲ್ಲಾ ಕಡೆಗಳಲ್ಲಿ ನಡೆಯುತ್ತದೆ. ಈ ವಿಸರ್ಜನೆಯ ಸಂದರ್ಭದಲ್ಲಿ ದೇವರ ಮೂರ್ತಿಯನ್ನು ಗೌರವಪೂರ್ವಕವಾಗಿ ಸಮುದ್ರದಲ್ಲೋ, ಕೆರೆಯಲ್ಲೋ,ಬಾವಿಯಲ್ಲೋ ವಿಸರ್ಜನೆ ಮಾಡಬೇಕು ಎನ್ನುವ ಒತ್ತಾಯಗಳು‌ ಈ ಹಿಂದಿನಿಂದಲೂ‌ ಕೇಳಿಕೊಂಡು‌ ಬಂದಿದೆ.

    ದೇವರ ಮೂರ್ತಿಯನ್ನು ವಿಸರ್ಜನೆ ಮಾಡುವ ಸಮಯದಲ್ಲಿ ಮೂರ್ತಿಯನ್ನು ಸಮುದ್ರದಲ್ಲಾದರೆ ಎತ್ತಿ ಎಸೆಯುವ, ಬಾವಿ-ಕೆರೆಯಾದರೆ ಜಾರಿ ಬಿಡುವ ಪ್ರಕ್ರಿಯೆ ಈ ಹಿಂದೆ ನಡೆದಿದೆ. ಆದರೆ ಈ ಬಗ್ಗೆ ಜಾಗೃತಿ ಆರಂಭಗೊಂಎ ಬಳಿಕ ಮುಂಬೈ ನಂತಹ ಮಹಾನಗರಗಳಲ್ಲಿ ಪ್ರತಿಷ್ಢಾಪಿಸಲ್ಪಡುವ ಸಾವಿರಾರು ಸಂಖ್ಯೆಯ ಗಣೇಶನ ಬೃಹತ್ ಮೂರ್ತಿಗಳನ್ನು ಕ್ರೇನ್ ಬಳಸಿ ನೀರಲ್ಲಿ ಮುಳುಗಿಸುವ ವ್ಯವಸ್ಥೆ ಆರಂಭಗೊಂಡಿದೆ. ಅದೇ ರೀತಿ ಬೇರೆ ಬೇರೆ ತಂತ್ರಜ್ಞಾನವನ್ನು ಬಳಸಿ ದೇವರ ವಿಗ್ರಹದ ವಿಸರ್ಜನೆ ಮಾಡಲಾಗುತ್ತಿದೆ.

    ಇದೇ ರೀತಿಯ ತಂತ್ರಜ್ಞಾನವನ್ನು ಪುತ್ತೂರಿನ ವಿದ್ಯಾರ್ಥಿಯೋರ್ವ ಕಂಡುಕೊಂಡಿದ್ದಾನೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಶ್ರೀಕೃಷ್ಣ. ಜಿ.ರಾವ್ ದೇವರ ವಿಗ್ರಹದ ವಿಸರ್ಜನೆಯ ಸಂದರ್ಭದಲ್ಲಿ ಆಗುತ್ತಿದ್ದ ಲೋಪಗಳನ್ನು ಬಗೆಹರಿಸಲು ಲಿಫ್ಟ್ ಮಾದರಿಯ ಯಂತ್ರವನ್ನು ರಚಿಸಿದ್ದಾನೆ. ಈತ ರಚಿಸಿದ ಯಂತ್ರ ಇದೀಗ ಪುತ್ತೂರು ಹಾಗು ಇತರ ಭಾಗಗಳಲ್ಲಿ ನಡೆಯುವ ಗಣೇಶೋತ್ಸವ ಮತ್ತು ನವರಾತ್ರಿ ಉತ್ಸವಗಳಲ್ಲಿ ನಡೆಯುವ ಮೂರ್ತಿ ವಿಸರ್ಜನೆಯ ಸಂದರ್ಭದಲ್ಲಿ ಬಳಕೆಯಾಗುತ್ತಿದೆ.

    ಲಿಪ್ಟ್ ನ ಸ್ಕಚ್ ಮತ್ತು ಐಡಿಯಾವನ್ನು ಶ್ರೀಕೃಷ್ಣ ಮಾಡಿದರೆ, ಇದಕ್ಕೆ ಬೇಕಾದ ತಂತ್ರಜ್ಞಾನ ವಿಟ್ಲದ ಸಂತೋಷ್ , ಅನಂತ ಪ್ರಸಾದ್, ಲಕ್ಷ್ಮಣ್ ಮಾಡಿದ್ದಾರೆ. ವಿಸರ್ಜನೆ ಮಾಡುವ ವಿಗ್ರಹವನ್ನು ಬಾವಿಯಲ್ಲಿ ಜಲಸ್ತಂಭನ ಮಾಡುವುದಾದರೆ, ಬಾವಿಯ ತಳಭಾಗದ ತನಕ ಆ್ಯಂಗ್ಲರ್ ಗಳನ್ನು ಕೊಟ್ಡು, ಲಿಫ್ಟ್ ನಲ್ಲಿ ವಿಗ್ರಹವನ್ನು ಇಡಲಾಗುತ್ತದೆ. ಯಾವ ರೀತಿ ಜೈನ್ ಪುಲ್ಲಿಂಗ್ ನಲ್ಲಿ ಭಾರೀ ಗಾತ್ರದ ವಸ್ತುಗಳನ್ನು ಸುಲಭವಾಗಿ ಎತ್ತಲು ಮತ್ತು ಇಳಿಸಲಾಗುವುದೋ, ಅದೇ ರೀತಿ ಇಲ್ಲಿ ಈ ಯಂತ್ರಕ್ಕೆ ರೋಪ್ ಬಳಸಿ ವಿಗ್ರಹವನ್ನು ಆರಾಮವಾಗಿ ಇಳಿಸಲಾಗುತ್ತದೆ. ವಿಸರ್ಜನಾ ಸಮಯದಲ್ಲಿ ವಿಗ್ರಹಕ್ಕೆ ಆಗುವ ಡ್ಯಾಮೇಜ್ ಮತ್ತು ಇತರ ಲೋಪಗಳು ಈ ಯಂತ್ರದ ಬಳಕೆಯ ಬಳಿಕ ಇಲ್ಲದಂತಾಗಿದೆ. ಕಳೆದ ವರ್ಷದಲ್ಲಿ ಈ ಹೊಸ ಪ್ರಯೋಗವನ್ನು ಶ್ರೀಕೃಷ್ಣ ಆರಂಭಿಸಿದ್ದು, ಈ ಯಂತ್ರಕ್ಕೆ ಸುಮಾರು 40 ಸಾವಿರ ರೂಪಾಯಿಗಳಷ್ಟು ಖರ್ಚು ಮಾಡಲಾಗಿದೆ. ಕಬ್ಬಿಣದ ರಾಡ್ ಮತ್ತು ರೋಪ್ ಬಳಸಿ ಈ ಯಂತ್ರವನ್ನು ನಿರ್ಮಿಸಲಾಗಿದ್ದು, ಈ ಬಾರಿಯ ಪುತ್ತೂರಿನ ಎಲ್ಲಾ ಗಣೇಶ ವಿಗ್ರಹಗಳ ವಿಸರ್ಜನೆಗೆ ಇದೇ ಯಂತ್ರವನ್ನು ಬಳಸಲಾಗಿದೆ.

    ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದ ಬಳಿಕ ವಿಸರ್ಜನೆಯ ಸಂದರ್ಭದಲ್ಲಿ ಅದೇ ಪೂಜಿಸಿದ ವಿಗ್ರಹವನ್ನು ಅನಿವಾರ್ಯವಾಗಿ ಎಸೆಯಬೇಕಾದ ಪರಿಸ್ಥಿತಿಯಿತ್ತು. ಆದರೆ ಇದೀಗ ಇಂಥ ಯಂತ್ರಗಳ ಸಹಾಯದಿಂದ ಈ ಲೋಪಗಳನ್ನೂ ಸುಧಾರಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply