BANTWAL
ಫರಂಗಿಪೇಟೆ – ವಿಧ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ಪೊಲೀಸ್ ವೈಫಲ್ಯದ ವಿರುದ್ದ ಪ್ರತಿಭಟನೆ

ಫರಂಗಿಪೇಟೆ ಮಾರ್ಚ್ 01: ನಾಪತ್ತೆಯಾಗಿರುವ ವಿಧ್ಯಾರ್ಥಿ ದಿಗಂತ್ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿರುವ ಹಿನ್ನಲೆ ಇಂದು ಫರಂಗಿಪೇಟೆಯಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದೆ.
ಮಂಗಳೂರಿನಲ್ಲಿ ಕಲಿಯುತ್ತಿದ್ದ ದಿಗಂತ್ ಫೆಬ್ರವರಿ 25 ರಂದು ಮನೆಯಿಂದ ಹೊರಗೆ ಹೋಗಿದ್ದವ ಮತ್ತೆ ವಾಪಾಸ್ ಆಗದೆ ನಾಪತ್ತೆಯಾಗಿದ್ದ. ಈಗಾಗಲೇ ನಾಪತ್ತೆಯಾಗಿ 5 ದಿನಗಳು ಕಳೆದರೂ ವಿಧ್ಯಾರ್ಥಿ ಬಗ್ಗೆ ಯಾವುದೇ ರೀತಿಯ ಸುಳಿವು ಪೊಲೀಸರಿಗೆ ಪತ್ತೆಯಾಗಿಲ್ಲ. ಈ ಹಿನ್ನಲೆ ಇದೀಗ ಹಿಂದೂ ಸಂಘಟನೆಗಳು ಮತ್ತು ಸ್ಥಳೀಯರು ಪ್ರತಿಭಟನೆ ಆರಂಭಿಸಿದ್ದಾರೆ. ಇಂದು ಫರಂಗಿಪೇಟೆಯಲ್ಲಿ ಪ್ರತಿಭಟನೆ ನಡೆಸಿ ಪೊಲೀಸ್ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ , ವಿದ್ಯಾರ್ಥಿಯ ನಾಪತ್ತೆ ಪ್ರಕರಣವನ್ನು ಪೋಲೀಸರು ಆದಷ್ಟು ಬೇಗ ಪತ್ತೆಹಚ್ಚಬೇಕು, ಘಟನೆ ಆದ ತಕ್ಷಣವೇ ಬಾಲಕನ ಪೋಷಕರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೋಲೀಸರು ಆ ಸಮಯದಲ್ಲಿ ಕೊಂಚ ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದಾಗಿ ಘಟನೆ ನಡೆದು 5 ದಿನವಾದರೂ ಬಾಲಕ ಪತ್ತೆಯಾಗಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಗಾಂಜಾ ಮಾಫಿಯಾ ಮಿತಿ ಮೀರಿದ್ದು, ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಗಾಂಜಾ ಮಾಫಿಯಾ ಇದ್ದು. ಈ ವ್ಯವಸ್ಥೆಯನ್ನು ಮಟ್ಟ ಹಾಕುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಎಂಎಲ್ಸಿ ಕಿಶೋರ್ ಕುಮಾರ್ ಆರೋಪಿಸಿದ್ದಾರೆ.
