LATEST NEWS
ಅಯ್ಯಪ್ಪ ಮಾಲಾಧಾರಿ ವಿಧ್ಯಾರ್ಥಿಗೆ ಅನ್ಯಕೋಮಿನ ವಿಧ್ಯಾರ್ಥಿಗಳಿಂದ ಹಲ್ಲೆ….!!
ಮಂಗಳೂರು ಡಿಸೆಂಬರ್ 21: ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿಯೊಬ್ಬನಿಗೆ ಅನ್ಯಕೋಮಿನ ಹಿರಿಯ ವಿದ್ಯಾರ್ಥಿಗಳ ತಂಡ ಹಲ್ಲೆ ನಡೆಸಿರುವ ಆರೋಪ ಕೇಳಿ ಹಂದಿದ್ದು, ಇದೀಗ ಖಾಸಗಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗೆ ಮಾಲೆ ಧರಿಸಿ ಶಾಲೆಗೆ ಬರದಂತೆ ತಡೆದಿದ್ದಾರೆ ಎಂದು ವಿದ್ಯಾರ್ಥಿ ಮತ್ತು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರು ನಗರದ ಕಪಿತಾನಿಯೋ ಶಾಲೆಯ ವಿದ್ಯಾರ್ಥಿಗೆ ಹಲ್ಲೆ ಆರೋಪ ವ್ಯಕ್ತವಾಗಿದ್ದು, ಅದೇ ಶಾಲೆಯ ನಾಲ್ವರು ಹಿರಿಯ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ನಡುವೆ ಈ ಹಿಂದೆ ಹಲವು ಬಾರಿ ಗಲಾಟೆ ನಡೆದಿತ್ತು. ಗಲಾಟೆ ನಡೆಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರೆ ಮತ್ತೆ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ಆರೋಪ ವ್ಯಕ್ತವಾಗಿದೆ. ಗಾಯಾಳು ವಿದ್ಯಾರ್ಥಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಗಾಯಾಳು ವಿದ್ಯಾರ್ಥಿಯ ಪೋಷಕರು ಮತ್ತು ಸಂಬಂಧಿಕರು ಶಾಲೆಗೆ ಭೇಟಿ ನೀಡಿ ಶಾಲಾಡಳಿತದ ಜತೆ ಮಾತುಕತೆ ನಡೆಸಿದರು. ಕಂಕನಾಡಿ ನಗರ ಠಾಣೆಯ ಪೊಲೀಸರೂ ಬಂದೋಬಸ್ತು ಮಾಡಿದ್ದರು. ಈ ವಿದ್ಯಾರ್ಥಿ ಅಯ್ಯಪ್ಪಸ್ವಾಮಿ ವ್ರತಾಚರಣೆ ಮಾಡುವುದಾಗಿ ಮಾಲೆ ಹಾಕುವ ಮುಂಚಿತವಾಗಿ ಶಾಲಾಡಳಿತದ ಅನುಮತಿ ಪಡೆದಿದ್ದಾನೆ. ಶಾಲಾಡಳಿತ ಅನುಮತಿ ನೀಡಿದೆ ಎಂದು ವಿದ್ಯಾರ್ಥಿಯ ತಂದೆ ಪ್ರಶಾಂತ್ ಶೆಟ್ಟಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಶಾಲಾಡಳಿತ ನ್ಯಾಯಯುತ ತೀರ್ಮಾನ ಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ. ಶಾಲೆಯಲ್ಲಿ ಎಲ್ಲಾ ಮಕ್ಕಳನ್ನು ಸಮಾನವಾಗಿ ಕಾಣಲಾಗುತ್ತದೆ; ಯಾವುದೇ ತಾರತಮ್ಯ ಇಲ್ಲ ಎಂದು ಶಿಕ್ಷಕ ಫೆಲಿಕ್ಸ್ ತಿಳಿಸಿದರು. ಆ ಮೂವರು ವಿದ್ಯಾರ್ಥಿಗಳು ಶಾಲೆಯಲ್ಲಿ ಶಿಕ್ಷಕರ ಎದುರೇ ನನಗೆ ಬೆದರಿಕೆ ಹಾಕಿದ್ದರು. ಬಳಿಕ ಶಾಲೆಯ ಹೊರಗೆ ಬಸ್ ನಿಲ್ದಾಣದಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ಹಲ್ಲೆಗೊಳಗಾದ ವಿದ್ಯಾರ್ಥಿ ಮಾಹಿತಿ ನೀಡಿದ್ದಾನೆ.