LATEST NEWS
ರಾಷ್ಟ್ರಪತಿ ಭೇಟಿ ವೇಳೆ ಸಂಚಾರ ಬಂದ್ – ಟ್ರಾಫಿಕ್ ನಲ್ಲಿ ಸಿಲುಕಿದ ಕಾರು…ರಸ್ತೆಯಲ್ಲೇ ಪ್ರಾಣ ಬಿಟ್ಟ ಮಹಿಳಾ ಉದ್ಯಮಿ

ಕಾನ್ಪುರ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಕಾನ್ಪುರ ಭೇಟಿ ಸಂದರ್ಭ ರಸ್ತೆ ಸಂಚಾರ ಬಂದ್ ಮಾಡಿದ್ದರಿಂದಾಗಿ ಓರ್ವ ಮಹಿಳಾ ಉದ್ಯಮಿ ತಮ್ಮ ಪ್ರಾಣ ಕಳೆದುಕೊಳ್ಳಬೇಕಾದ ಘಟನೆ ನಡೆದಿದೆ. ಮೃತ ಮಹಿಳಾ ಉದ್ಯಮಿಯನ್ನು ಭಾರತೀಯ ಕೈಗಾರಿಕಾ ಸಂಘದ (ಐಐಎ) ಮಹಿಳಾ ವಿಭಾಗದ ಪದಾಧಿಕಾರಿ ಆಗಿದ್ದ ವಂದನಾ ಮಿಶ್ರಾ ಎಂದು ಗುರುತಿಸಲಾಗಿದೆ.
ಇತ್ತೀಚೆಗೆ, ಕೋವಿಡ್ -19ನಿಂದ ಚೇತರಿಸಿಕೊಂಡಿದ್ದ ಮಿಶ್ರಾ ಅವರಿಗೆ ಶುಕ್ರವಾರ ಕೆಲವು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದವು. ಈ ಹಿನ್ನಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಕಾರಿನಲ್ಲಿ ಬರಲಾಗಿತ್ತು, ಆದರೆ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಉತ್ತರ ಪ್ರದೇಶದ ಕಾನ್ಪುರ ಪಟ್ಟಣಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದರಿಂದ ವಾಹನವು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದು, ಅವರ ಆರೋಗ್ಯ ಸ್ಥಿತಿ ಬಿಗಾಡಿಸಿದ ಹಿನ್ನಲೆ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮಿಶ್ರಾ ಸುಮಾರು ಒಂದು ಗಂಟೆ ಕಾಲ ತನ್ನ ಕಾರಿನಲ್ಲಿ ಸಿಲುಕಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ, ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟೊತ್ತಿಗೆ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು. ವಾಹನವನ್ನು ಹಾದುಹೋಗಲು ಅನುಮತಿ ನೀಡುವಂತೆ ಪೊಲೀಸರನ್ನು ಕೋರಿದರೂ ಭದ್ರತಾ ಕಾರಣ ಹೇಳಿ ನಿರಾಕರಿಸಿದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಕಾನ್ಪುರದ ಪೊಲೀಸ್ ಆಯುಕ್ತ ಅಸೀಮ್ ಅರುಣ್ ಅವರು ತನಿಖೆಗೆ ಆದೇಶಿಸಿದ್ದು, ನಂತರ ಸಂತ್ರಸ್ತೆಯ ನಿವಾಸಕ್ಕೆ ಭೇಟಿ ನೀಡಿ ದುರಂತಕ್ಕೆ ಕ್ಷಮೆಯಾಚಿಸಿದ್ದಾರೆ. ಇದು ದುರದೃಷ್ಟಕರ ಘಟನೆ.ಸಂಭವಿಸಬಾರದಾಗಿತ್ತು. ಇಂತಹ ಘಟನೆಗಳು ಮರುಕಳಿಸದಂತೆ ಮುಂದೆ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, ’ ಎಂದರು.
ಅಲ್ಲದೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದು, ಮಿಶ್ರಾ ಅವರ ನಿಧನಕ್ಕೆ ತಮ್ಮ ಸಂತಾಪ ಸೂಚಿಸಿದ್ದಾರೆ.