Connect with us

UDUPI

ಹೋಂ ಸೀಲ್ ಡೌನ್ ನಲ್ಲಿರುವರು ಹೊರಗಡೆ ತಿರುಗಾಡಿದರೆ ಕಠಿಣ ಕ್ರಮ – ಜಿಲ್ಲಾಧಿಕಾರಿ ಜಗದೀಶ್

ಮಹಾರಾಷ್ಟ್ರದಿಂದ ಬರುವವರು 14 ಹೋಂ ಕ್ವಾರಂಟೈನ್ ಕಡ್ಡಾಯ

ಉಡುಪಿ ಜೂನ್ 10 : ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುವವರನ್ನು ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಡಿಸಿ ಆ ಮನೆಯನ್ನು ಸೀಲ್ ಡೌನ್ ಮಾಡುವ ಕುರಿತಂತೆ ಈಗಾಗಲೇ ಸರಕಾರದ ಆದೇಶವಾಗಿದ್ದು, ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಎಪಿಡಮಿಕ್ ಆಕ್ಟ್ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

ಮಹಾರಾಷ್ಟ್ರದಿಂದ ಬರುವವರನ್ನು 14 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಡಿಸಿ ಆ ಮನೆಯನ್ನು ಸೀಲ್ ಡೌನ್ ಮಾಡಬೇಕಾಗಿದ್ದು, ಮನೆಯ ಸುತ್ತ ಟೇಪ್ ಹಾಕಬೇಕು ಹಾಗೂ ಮನೆಗೆ ಸ್ಟಿಕರ್ ಅಳವಡಿಸಬೇಕು, ಪಕ್ಕದ ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡುವುದಲ್ಲದೇ ಕ್ವಾರಂಟೈನ್ ನಲ್ಲಿರುವರು ನಿಯಮ ಉಲ್ಲಂಘಿಸಿ ಹೊರಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ತಿಳಿಸಬೇಕು, ಸಂಬಂದಪಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕಂದಾಯ ನಿರೀಕ್ಷಕರು, ಬಿಲ್ ಕಲೆಕ್ಟರ್ ಮತ್ತು ಪಿಡಿಓ ಗಳ ತಂಡ ಪರಿಶೀಲನೆ ನಡೆಸಬೇಕು, ಈ ಕುರಿತಂತೆ ಎಲ್ಲಾ ತಹಸೀಲ್ದಾರ್ ಗಳು ಮತ್ತು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಪ್ರತಿಯೊಂದು ಗ್ರಾಮಗಳಿಗೆ ತಂಡವನ್ನು ರಚಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ನಿಯಮ ಉಲ್ಲಂಘಿಸುವವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸೀಲ್‌ಡೌನ್ ಮಾಡಿದ ಮನೆಯ ನಿವಾಸಿಗಳು 14 ದಿನಕ್ಕೆ ಬೇಕಾಗುವ ದಿನಸಿ ಸಾಮಗ್ರಿಗಳನ್ನು ಮೊದಲೇ ಖರೀದಿಸಿರಬೇಕು, ಹಾಲು ಮತ್ತು ತರಕಾರಿಯನ್ನು ಸಂಬಂದಪಟ್ಟ ನಿರ್ದಿಷ್ಟ ಅಂಗಡಿಯಿಂದ ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳ ತಂಡ ಪ್ರತೀ ದಿನ ಈ ಮನೆಗಳಿಗೆ ಭೇಟಿ ನೀಡಿ, ಗ್ರಾಮ ಪಂಚಾಯತ್ ನಲ್ಲಿನ ತಂಡ ಭೇಟಿ ಪರಿಶೀಲನೆ ನಡೆಸಿದ ಕುರಿತು ತಪಾಸಣೆ ನಡೆಸಿ, ಅದೇ ದಿನ ಸಂಜೆಯೊಳಗೆ ವರದಿ ನೀಡಬೇಕು ಎಂದು ತಿಳಿಸಿದರು.

ಕ್ವಾರಂಟೈನ್ ಗೆ ಒಳಪಡುವವರ ಕೈ ಗೆ ಕಡ್ಡಾಯವಾಗಿ ಸೀಲ್ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಕ್ವಾರಂಟೈನ್ ಸೀಲ್ ಇರುವವರನ್ನು ಮಾಲ್ ಗಳು, ಹೋಟೆಲ್ ಗಳು, ದೇವಸ್ಥಾನದ ಒಳಗಡೆ ಪ್ರವೇಶ ನೀಡಿದಲ್ಲಿ ಸಂಬಂದಪಟ್ಟ ಸಂಸ್ಥೆಗಳ ಮುಖ್ಯಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು, ಎಲ್ಲಾ ಸಂಸ್ಥೆಗಳು ತಮ್ಮ ಪ್ರವೇಶ ದ್ವಾರದಲ್ಲೇ ಇದನ್ನು ಪರೀಕ್ಷಿಸಿ ಅಂತಹವರು ಕಂಡುಬಂದಲ್ಲಿ ಕೂಡಲೇ 100 ಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಜಿಲ್ಲೆಗೆ ಹೊರರಾಜ್ಯದಿಂದ ಬರುವವರು ಕಡ್ಡಾಯವಾಗಿ ಸೇವಾ ಸಿಂಧು ಆಪ್ ನಲ್ಲಿ ನೊಂದಾಯಿಸಿಕೊಂಡು ಬರುವಂತೆ ತಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲೆಯಲ್ಲಿ ಸಾಮಾಜಿಕ ಅಂತರ ಉಲ್ಲಂಘನೆ, ಮಾಸ್ಕ್ ಧರಿಸದೇ ಇರುವವರಿಗೆ ಕಟ್ಟುನಿಟ್ಟಾಗಿ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *