ಮುಂಬೈ ಮಾರ್ಚ್ 19: ಸತತ ಮೂರು ದಿನಗಳ ಕಾಲ ಲಾಭದಲ್ಲಿದ್ದ ಭಾರತೀಯ ಷೇರು ಮಾರುಕಟ್ಟೆಗಳು ಗುರುವಾರ ಭಾರಿ ಕುಸಿತ ಕಂಡಿವೆ. ಜಾಗತಿಕ ರಾಜಕೀಯ ಸಂಘರ್ಷ ಮತ್ತು ಪ್ರಮುಖ ಬ್ಯಾಂಕಿಂಗ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 2000 ಅಂಕಗಳಷ್ಟು ಕುಸಿತ ಕಂಡರೆ, ನಿಫ್ಟಿ 800 ಅಂಕಗಳಷ್ಟು ಪತನಗೊಂಡಿದೆ.

ಇರಾನ್ ಗಲ್ಫ್ ವಲಯದ ಇಂಧನ ಸೌಲಭ್ಯಗಳ ಮೇಲೆ ದಾಳಿ ನಡೆಸಿರುವುದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಇದರಿಂದಾಗಿ ಬ್ರೆಂಡ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ $110ರ ಗಡಿ ದಾಟಿದ್ದು, ಭಾರತದಂತಹ ಆಮದು ಅವಲಂಬಿತ ದೇಶಗಳ ಮೇಲೆ ಒತ್ತಡ ಹೆಚ್ಚಿಸಿದೆ.
ಎಚ್ಡಿಎಫ್ಸಿ ಬ್ಯಾಂಕಿನ ಅಧ್ಯಕ್ಷರು ಹಠಾತ್ ರಾಜೀನಾಮೆ ನೀಡಿದ ಬೆನ್ನಲ್ಲೇ ಬ್ಯಾಂಕಿನ ಷೇರುಗಳು ತೀವ್ರ ಕುಸಿತ ಕಂಡಿವೆ. ಇದು ಇಡೀ ಬ್ಯಾಂಕಿಂಗ್ ವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.
ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿಟ್ಟಿದ್ದು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರತೀಯ ಮಾರುಕಟ್ಟೆಯಿಂದ ಹಣ ಹಿಂತೆಗೆಯಲು ಕಾರಣವಾಗಿದೆ.
ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ ಭಾರಿ ಕುಸಿತದೊಂದಿಗೆ ವಹಿವಾಟು ನಡೆಸುತ್ತಿದ್ದು, ಹೂಡಿಕೆದಾರರು ಲಕ್ಷಾಂತರ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.