LATEST NEWS
ಮಲ್ಪೆ ಬೀಚ್ ನಲ್ಲಿ ಸ್ಟಿಂಗ್ ರೇ ದಾಳಿ : ಹಲವರಿಗೆ ಗಾಯ

ಮಲ್ಪೆ ಬೀಚ್ ನಲ್ಲಿ ಸ್ಟಿಂಗ್ ರೇ ದಾಳಿ : ಹಲವರಿಗೆ ಗಾಯ
ಉಡುಪಿ,ಸೆಪ್ಟೆಂಬರ್ 26 : ಕಳೆದ ಎರಡು ದಿನಗಳಿಂದ ಉಡುಪಿಯ ಮಲ್ಪೆ ಬೀಚಿನಲ್ಲಿ ಸಮುದ್ರಕ್ಕೆ ಇಳಿದವರಿಗೆ ತೊರಕೆ ಮೀನು ಅಥವಾ ಸ್ಟಿಂಗ್ ರೇ ಇಂಜೆಕ್ಷನ್ ರುಚಿ ತೋರಿಸಿದೆ.
ಸಣ್ಣ ಗಾತ್ರದ ತೊರಕೆ ಮೀನು ಈ ಕಡಲತಡಿಗೆ ಬಂದಿರುವುದಾಗಿ ಹೇಳಲಾಗಿದ್ದು, ಅವು ತಮ್ಮ ಬಾಳದಲ್ಲಿರುವ ಮುಳ್ಳಿನಿಂದ ನೀರಿಗಿಳಿಯುವ ಪ್ರವಾಸಿಗರನ್ನು ಚುಚ್ಚುತ್ತಿದೆ. ನಿನ್ನೆ ಮಲ್ಪೆ ಬೀಚ್ ನಲ್ಲಿ ಸುಮಾರು ಎಂಟು ಮಂದಿಗೆ ತೊರಕೆ ಮೀನಿನ ಮುಳ್ಳು ಚುಚ್ಚಿ ಗಾಯಗೊಂಡಿದ್ದಾರೆ. ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ .

ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಕಂಡು ಬರುವ ಈ ಮೀನು ಈ ಅವಧಿಗೆ ಸಂತಾನೋತ್ಪತ್ತಿಗಾಗಿ ಕಡಲ ತಡೆಗೆ ಬರುತ್ತದೆ.ಅದರಂತೆ ಈ ವರ್ಷವೂ ಸಾಕಷ್ಟು ಸಂಖ್ಯೆಯಲ್ಲಿ ಮೀನುಗಳು ತೀರ ಸೇರಿವೆ .ಇನ್ನು ಒಂದು ವಾರದವರೆಗೆ ಈ ಮೀನುಗಳು ಸಮುದ್ರ ಕಿನಾರೆಯಲ್ಲಿ ಇರುತ್ತವೆ ಎಂದು ಹೇಳಲಾಗಿದೆ .
ಹಿಂದೆಯೂ ನಡೆದಿತ್ತು ದಾಳಿ :
ಎರಡು ವರ್ಷಗಳ ಹಿಂದೆ ಈ ರೀತಿಯಲ್ಲೇ ತೊರಕೆ ಮೀನುಗಳು ಪ್ರವಾಸಿಗರಿಂದ ಚುಚ್ಚಿ ಗಾಯಗೊಳಿಸಿದ್ದವು. ಈ ತೊರಕೆ ಮೀನುಗಳ ಬಣ್ಣ ಹಾಗೂ ನೀರಿನಡಿಯ ಮರಳಿನ ಬಣ್ಣ ಒಂದೇ ರೀತಿ ಗೊಚರಿಸುವ ಕಾರಣ ನೀರಿಗಿಳಿದು ಆಟವಾಡುವ ಪ್ರವಾಸಿಗರು ಕಾಲಿನಡಿಯಲ್ಲಿ ಸಂಚರಿಸುವ ತೊರಕೆ ಮೀನನ್ನು ಅರಿವಿಲ್ಲದೆ ಮೆಟ್ಟಿ ಮುಳ್ಳನ್ನು ಚುಚ್ಚಿಸಿ ಕೊಳ್ಳುತಿದ್ದಾರೆ.
ಮುಂಜಾಗೃತೆ:
ತೊರಕೆ ಮೀನು ಬಾಲದ ಮುಳ್ಳಿನಿಂದ ಚುಚ್ಚಿದಾಗ ವಿಪರೀತ ರಕ್ತ ಸ್ರಾವವಾಗುತ್ತದೆ ಹಾಗೂ ತುಂಬಾ ನೋವು ಉಂಟಾಗುತ್ತದೆ. ತೊರಕೆ ಮೀನಿನ ಮುಳ್ಳು ನಂಜಿನ ಗುಣವುಳ್ಳದ್ದರಿಂದ ತೊರಕೆ ಮೀನಿನ ಮುಳ್ಳು ಚುಚ್ಚಿದ ಬಳಿಕ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಪ್ರವಾಸಿಗರಿಗೆ ಎಚ್ಚರಿಕೆ :
ಕರಾವಳಿಯ ಕಡಲ ತಡಿಗೆ ಬರುವ ಪ್ರವಾಸಿಗರು ಮುಂಜಾಗ್ರತೆ ವಹಿಸಬೇಕಾಗಿದೆ. ಕಡಲ ತಡಿಗೆ ಭೇಟಿ ನೀಡುವ ಪ್ರವಾಸಿಗರು ಸಮುದ್ರಕ್ಕೆ ಇಳಿಯುವ ಮುನ್ನ ಎರಡು ಬಾರಿ ಯೋಚನೆ ಮಾಡುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಕಡಲಿಗೆ ಇಳಿಯುವ ಮುನ್ನ ಮುಂಜಾಗ್ರತೆ ವಹಿಸದಿದ್ದರೆ ತೊರಕೆ ಮೀನಿ ( Sting Ray)ನ ಮುಳ್ಳು ಚುಚ್ಚಿಸಿ ಕೊಳ್ಳ ಬೇಕಾದೀತು ಜೋಕೆ .