UDUPI
ಸುಗಮ್ಯ ಚುನಾವಣೆಗೆ ಸೂಕ್ತ ಕ್ರಿಯಾಯೋಜನೆ ರೂಪಿಸಲು ಜಿಲ್ಲಾಧಿಕಾರಿ ಸಭೆ

ಸುಗಮ್ಯ ಚುನಾವಣೆಗೆ ಸೂಕ್ತ ಕ್ರಿಯಾಯೋಜನೆ ರೂಪಿಸಲು ಜಿಲ್ಲಾಧಿಕಾರಿ ಸಭೆ
ಉಡುಪಿ ಫೆಬ್ರವರಿ 21 : ಚುನಾವಣಾ ಆಯೋಗವು ಪ್ರಸಕ್ತ ಚುನಾವಣೆಯಲ್ಲಿ “ಸುಗಮ್ಯ ಚುನಾವಣೆ” ಘೋಷವಾಕ್ಯದಡಿ ಜಿಲ್ಲೆಯಲ್ಲಿರುವ ವಿಕಲಚೇತನರು, ಹಿರಿಯ ನಾಗರಿಕರು, ಹಾಗೂ ಅನಾರೋಗ್ಯ ಪೀಡಿತರಿಗೆ ಮತದಾನ ಮಾಡಲು ಸಹಾಯವಾಗುವಂತೆ ಪೂರಕ ವ್ಯವಸ್ಥೆಗಳನ್ನು ರೂಪಿಸಲು ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಸಭೆಯಲ್ಲಿ ನಿಷ್ಪಕ್ಷ ಸ್ವಯಂಸೇವಕರಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಲಯನ್ಸ್, ರೋಟರಿ, ರೆಡ್‍ಕ್ರಾಸ್‍ನವರ ನೆರವಿನೊಂದಿಗೆ ಎನ್‍ವೈಕೆ ಅವರ ಸಹಯೋಗವನ್ನು ಪಡೆಯಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಚುನಾವಣಾ ಆಯೋಗದ ಶಿಫಾರಿಸ್ಸಿನಂತೆ ಜಿಲ್ಲೆಯಲ್ಲಿ ಇರುವ ವಿಶೇಷಚೇತನರಿಗೆ ಹಿರಿಯ ನಾಗರಿಕರಿಗೆ, ಅಸ್ವಸ್ಥರಿಗೆ ಮತದಾನವನ್ನು ಸುಲಭವಾಗಿಸಲು ಈಗಾಗಲೇ ಜಿಲ್ಲೆಯಲ್ಲಿ ಆಯಾ ಬೂತ್‍ಗಳಲ್ಲಿ ಹೆಸರುಗಳನ್ನು ಪಟ್ಟಿ ಮಾಡಿದ್ದು ಮಾಹಿತಿ ಪಡೆದುಕೊಂಡು ಕಾರ್ಯಗತಗೊಳಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.
ವಿಕಲಚೇತನರಿಗೆ ಸಹಾಯವಾಗುವಂತೆ, ಆಯಾ ಮತಗಟ್ಟೆಗಳಲ್ಲಿ ವೀಲ್‍ಚಯರ್, ರ್ಯಾಂಪ್‍ಗಳನ್ನು ನಿರ್ಮಿಸಲಾಗುವುದು. ಅಂಧ ಮತದಾರರಿಗೆ ಬ್ರೈನ್‍ಲಿಪಿಯ ಮೂಲಕ ಮತ ಹಾಕಲು ನೆರವಾಗುವ ವ್ಯವಸ್ಥೆಗಳನ್ನು ಮಾಡಲಾಗುವುದು. ಸುಗಮ್ಯ ಚುನಾವಣೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅರ್ಹರಿಗೆ ವಿಶೇಷ ಪಾಸುಗಳನ್ನು ನೀಡಿ ಅವರು ಸರತಿ ಸಾಲಿನಲ್ಲಿ ನಿಲ್ಲದಂತೆ ಕ್ರಮಕೈಗೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.