KARNATAKA
ಎಸ್ಎಸ್ಎಲ್ ಸಿ ಫೇಲ್ ಆದ ಮಗನ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ತಂದೆ ತಾಯಿ

ಬಾಗಲಕೋಟೆ ಮೇ 03: ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಫೇಲ್ ಆದ ಮಗನಿಗೆ ಪೋಷಕರು ಕೇಕ್ ಕತ್ತರಿಸಿ ತಿನ್ನಿಸಿ ಸಂಭ್ರಮಸಿದ್ದಾರೆ. ಬಾಗಲಕೋಟೆಯಲ್ಲಿ ಈ ಘಟನೆ ನಡೆದಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆರಕ್ಕೆ ಆರೂ ವಿಷಯದಲ್ಲಿ ಫೇಲ್ ಆದ ಮಗನಿಗೆ ಪೋಷಕರು ಕೇಕ್ ತಿನ್ನಿಸಿ ಆತ್ಮಸ್ಥೈರ್ಯ ತುಂಬಿಸಿದ್ದಾರೆ.
ಫೆಲ್ ಆದರೆ ವಿಧ್ಯಾರ್ಥಿಗಳ ಮನೋಬಲ ಕುಗ್ಗಿಸುವ ಬದಲು ಆತ್ಮಸ್ಥೈರ್ಯ ತುಂಬಿಸಿ ಮನಸ್ಸಿಗೆ ಸಂತೋಷ ಉಂಟುಮಾಡಲು ತಂದೆ, ತಾಯಿ ಸಹೋದರ, ಸಹೋದರಿ, ಅಜ್ಜಿ ಹಾಗೂ ಕುಟುಂಬವರು ಕೇಕ್ ತಿನ್ನಿಸಿದ್ದಾರೆ. ಬಾಗಲಕೋಟೆಯ ನವನಗರದ ಅಭಿಷೇಕ್ ನಿನ್ನೆ ಪ್ರಕಟವಾದ 10ನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಆರಕ್ಕೆ ಆರೂ ವಿಷಯಕ್ಕೆ ಅನುತ್ತೀರ್ಣನಾಗಿದ್ದ. ಬೇಸರದಲ್ಲಿದ್ದ ಅಭಿಷೇಕ್‌ಗೆ ಆತ್ಮಸ್ಥೈರ್ಯ ತುಂಬಲು ಅಚ್ಚರಿ ಎಂಬಂತೆ ಪೋಷಕರು ಕೇಕ್ ತಿನ್ನಿಸಿ ಸಿಹಿ ಮುತ್ತು ನೀಡಿ ಸಮಾಧಾನ ಮಾಡಿದ್ದಾರೆ.

ಪರೀಕ್ಷೆ ಒಂದೇ ಜೀವನವಲ್ಲ, ಈಗ ಸಾಧ್ಯವಾಗದಿದ್ದರೆ ಇನ್ನೊಂದು ಪರೀಕ್ಷೆಯಲ್ಲಿ ಮರಳಿ ಪ್ರಯತ್ನ ಮಾಡು ಎಂದು ಮಗನಿಗೆ ಪೋಷಕರು ಮತ್ತು ಮನೆಯವರು ಧೈರ್ಯ ತುಂಬಿದ್ದಾರೆ. 15 ತಿಂಗಳ ಮಗುವಾಗಿದ್ದಾಗ ಎರಡು ಪಾದ ಸುಟ್ಟು ಹೋಗಿದ್ದರಿಂದ ಅಭಿಷೇಕ್ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾನೆ. ಇದರಿಂದಾಗಿ ಉತ್ತರ ನೆನಪಿಟ್ಟುಕೊಂಡು ಬರೆಯಲು ಅಭಿಷೇಕ್‌ಗೆ ಸಾಧ್ಯವಾಗಿಲ್ಲ. ಫೇಲ್ ಆಗಿದ್ದರಿಂದ ಬಹಳ ಬೇಸರವಾಗಿತ್ತು. ತಂದೆ, ತಾಯಿ ಎಲ್ಲರೂ ಈಗ ಧೈರ್ಯ ತುಂಬಿದ್ದಾರೆ. ಫೇಲ್ ಆದರೂ ಧೈರ್ಯ ತುಂಬಿ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ನಾನು ಪರೀಕ್ಷೆಯಲ್ಲಿ ಫೇಲ್ ಆಗಿರಬಹುದು, ಜೀವನದಲ್ಲಿ ಫೇಲ್ ಆಗಲ್ಲ. ಮತ್ತೆ ಪ್ರಯತ್ನ ಮಾಡಿ ಪಾಸ್ ಆಗುತ್ತೇನೆ ಎಂದು ಅಭಿಷೇಕ್ ಆತ್ಮವಿಶ್ವಾಸದಿಂದ ಹೇಳುತ್ತಾನೆ.