DAKSHINA KANNADA
ಸ್ಪೂರ್ತಿ ಸಾವಿಗೆ ಯುನಿಟಿ ಆಸ್ಪತ್ರೆ ಹೊಣೆ : ಸಹೋದರಿ ಆರೋಪ

ಮಂಗಳೂರು, ಸೆಪ್ಟೆಂಬರ್ 12 : ಮಂಗಳೂರು ನಗರದ ಯುನಿಟಿ ಆಸ್ಪತ್ರೆಯ ಮಹಿಳಾ ಉದ್ಯೋಗಿ ಸ್ಪೂರ್ತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸ್ಪೂರ್ತಿಯ ಮನೆಯವರು ಉಳ್ಳಾಲ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಪೂರ್ತಿಯ ಸಹೋದರಿ ಶ್ರುತಿ ಅವರು ಯುನಿಟಿ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ದ ಉಳ್ಳಾಲ ಪೋಲಿಸ್ ಠಾಣೆಗೆ ಮತ್ತೊಂದು ಲಿಖಿತ ದೂರು ನೀಡಿದ್ದಾರೆ.
ದೂರಿನ ಸಾರಾಂಶ :

ಸ್ಪೂರ್ತಿ
ದೂರಿನಲ್ಲಿ ಸ್ಪೂರ್ತಿ ಅವರ ಸಾವಿಗೆ ಆಸ್ಪತ್ರೆಯ ಆಡಳಿತ ಮಂಡಳಿಯೇ ನೇರಾ ಹೊಣೆ ಎಂದು ಆರೋಪ ಮಾಡಿದ್ದಾರೆ. ” ನನ್ನ ಅಕ್ಕ ಕೆಲಸ ಮಾಡುವ ಯುನಿಟಿ ಹಾಸ್ಪಿಟಲ್ ನ ಮೇಲಾಧಿಕಾರಿಗಳಾದ ಶೈಲಾ ಮತ್ತು ಸಂಜನ ಅವರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಎಲ್ಲಾ ಜನರ ಎದುರು ಹೀಯಾಳಿಸುತ್ತಿದ್ದರು ಎಂದು ಅಕ್ಕ ನನ್ನ ಬಳಿ ಮತ್ತು ಅಮ್ಮನ ಬಳಿ ಹೇಳಿ ಬೇಸರ ವ್ಯಕ್ತಪಡಿಸುತ್ತಿದ್ದರು.

ನಾನು ಇನ್ನು ಮುಂದೆ ಕೆಲಸಕ್ಕೆ ಹೋಗುವುದಿಲ್ಲವೆಂದು ಹೇಳುತ್ತಿದ್ದರು. ನನ್ನ ಅಕ್ಕನ ಸಾವಿಗೆ ಮೇಲೆ ತಿಳಿಸಿದವರ ಕಿರುಕುಳವೇ ಕಾರಣ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕ್ರಮ ಜರುಗಿಸಬೇಕೆಂದು ಶ್ರುತಿ ಉಳ್ಳಾಲ ಠಾಣಾಧಿಕಾರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಶ್ರುತಿ ಅವರು ನೀಡಿದ ಲಿಖಿತ ದೂರನ್ನು ಸ್ವೀಕರಿಸಿರುವ ಉಳ್ಳಾಲ ಠಾಣಾಧಿಕಾರಿ ಅವರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಪ್ರಕರಣದ ಹಿನ್ನೆಲೆ :
21 ವರ್ಷದ ಸ್ಪೂರ್ತಿ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಒಂದುವರೆ ತಿಂಗಳ ಹಿಂದೆ ಉದ್ಯೋಗಕ್ಕೆ ಸೇರ್ಪಡೆಯಾಗಿದ್ದಳು. ಆಸ್ಪತ್ರೆಯ ಇನ್ಸೂರೆನ್ಸ್ ವಿಭಾಗಲ್ಲಿ ಕೆಲಸ ಮಾಡುತ್ತಿದ್ದಳು. ಅದರೆ ಮಂಗಳವಾರ ಸಂಜೆ ಸ್ಪೂರ್ತಿ ಉಳ್ಳಾಲ ಸೋಮೇಶ್ವರ ಉಚ್ಚಿಲದಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಆಸ್ಪತ್ರೆಯ ಆಡಳಿತ ಮಂಡಳಿಯ ಕಿರುಕುಳವೇ ಸ್ಪೂರ್ತಿ ಅವರು ಆತ್ಮಹತ್ಯೆಗೆ ಕಾರಣ ಎಂದು ಆಕೆಯ ಪೋಷಕರು ಆರೋಪಿಸಿದ್ದರು.
ಎರಡು ಪ್ರತ್ಯೇಕ ದೂರುಗಳು ದಾಖಲು :
ಸ್ಪೂರ್ತಿ ಸಾವಿನ ಬಗ್ಗೆ ನಿನ್ನೆ ಸ್ಪೂರ್ತಿ ಅವರ ಮಾವ ಈಗಾಗಲೇ ದೂರೊಂದನ್ನು ನೀಡಿದ್ದು, ಇಂದು ಸ್ಪೂರ್ತಿಯ ಸಹೋದರಿ ಶ್ರುತಿ ಅವರು ಯುನಿಟಿ ಆಸ್ಪತ್ರೆಯ ಆಡಳಿಯ ಮಂಡಳಿಯ ಅಧಿಕಾರಿಗಳ ವಿರುದ್ದ ಮತ್ತೊಂದು ದೂರನ್ನು ದಾಖಲಿಸಿದ್ದಾರೆ.
ಆತ್ಮಹತ್ಯೆ ಘಟನೆಯ ಬಳಿಕ ಸೌಜನ್ಯಕ್ಕಾದರೂ ಯುನಿಟಿ ಆಸ್ಪತ್ರೆಯ ಆಡಳಿತ ಮಂಡಳಿ ಮನೆಯವರನ್ನು, ಪೋಷಕರನ್ನಾಗಲಿ ಭೇಟಿ ಮಾಡಿಲ್ಲ ಎಂದು ಸ್ಪೂರ್ತಿ ಅವರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.