DAKSHINA KANNADA
ಮಂಗಳೂರಿನಲ್ಲಿ ಸಮಾನ ಮನಸ್ಕರ ಸಭೆ, ಅವಿಭಾಜ್ಯ ದ.ಕ. ಜಿಲ್ಲೆಯಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತಚಲಾಯಿಸಲು ಮನವಿ..!
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕ ಚಿಂತಕರು, ಪ್ರಾಧ್ಯಾಪಕರು, ಕವಿಗಳು, ಬರಹಗಾರರು ಸೇರಿದಂತೆ ಸಮಾನ ಮನಸ್ಕರು ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಸಿ ದಕ್ಷಿಣ ಕನ್ನಡ, ಉಡುಪಿ ಲೋಕಸಭಾ ಕ್ಷೇತ್ರದ ಮತದಾರರಲ್ಲಿ ಬಿಜೆಪಿಯನ್ನು ಸೋಲಿಸಲು, “ಇಂಡಿಯಾ” ಕೂಟದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತಚಲಾಯಿಸಲು ಮನವಿ ಮಾಡಿದ್ದಾರೆ.
ಮನವಿಯ ಪೂರ್ಣ ಪಾಠ
ಚಿಂತಕರು, ಬರಹಗಾರರು ಮತ್ತು ಪ್ರಜ್ಞಾವಂತರಿಂದ ದಕ್ಷಿಣ ಕನ್ನಡ, ಉಡುಪಿ ಮತದಾರರಲ್ಲಿ ಮನವಿ
ಭಾರತೀಯರೆಲ್ಲರಿಗೆ ಸಂವಿಧಾನದ ಆಶಯದಂತೆ ಸೂಕ್ತ ಯೋಜನೆಗಳ ಮೂಲಕ ಘನತೆಯಿಂದ ಬದುಕುವಂತೆ ಮಾಡಬೇಕಾದದ್ದು ಜನರಿಂದ ಚುನಾಯಿತವಾದ ಸರಕಾರದ ಹೊಣೆಗಾರಿಕೆಯಾಗಿದೆ. ಆದರೆ ಕಳೆದ ೧೦ ವರ್ಷಗಳಲ್ಲಿ ಅಧಿಕಾರ ನಡೆಸಿದ ಬಿಜೆಪಿ ನಾಯಕತ್ವದ ಎನ್.ಡಿ.ಎ. ಸರಕಾರ ಈ ಹೊಣೆಗಾರಿಕೆಯನ್ನು ವಿಫಲವಾದದ್ದು ಮಾತ್ರವಲ್ಲ, ಸಂವಿಧಾನದ ಮೂಲ ಆಶಯಗಳಾದ ಸ್ವಾತಂತ್ರ, ಸಮಾನತೆ, ಭ್ರಾತೃತ್ವವನ್ನು ಎತ್ತಿ ಹಿಡಿಯಲು, ಮಹಿಳೆಯರು, ದಮನಿತ ಸಮುದಾಯಗಳಿಗೆ ರಕ್ಷಣೆ ನೀಡಲು ವಿಫಲವಾಗಿರುವುದು ಎದ್ದು ಕಾಣುತ್ತಿದೆ. ಮೇಲಾಗಿ ಅಧಿಕಾರವನ್ನು ಸಣ್ಣ ಅಂಜಿಕೆಯೂ ಇಲ್ಲದೆ ದುರುಪಯೋಗ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ.
ಸ್ವಾತಂತ್ರ್ಯಕ್ಕೆ ಸಂಚಕಾರ
ಸರಕಾರದ ಅಸಮರ್ಪಕ ನಡೆ ಮತ್ತು ನೀತಿಯನ್ನು ಪ್ರಶ್ನಿಸುವ ರಾಜಕೀಯ ನಾಯಕರನ್ನು, ಪತ್ರಕರ್ತರನ್ನು ಮತ್ತು ಪ್ರಜ್ಞಾವಂತರನ್ನು ಅಧಿಕಾರ ದುರ್ಬಳಕೆಯ ಮೂಲಕ ಹತ್ತಿಕ್ಕುವ ದಮನಕಾರೀ ನೀತಿಯನ್ನು ಅನುಸರಿಸಲಾಗುತ್ತಿದೆ. ಯಾವುದೇ ಪೂರ್ವ ತಯಾರಿ ಇಲ್ಲದೆ ದೇಶದ ಅರ್ಥ ವ್ಯವಸ್ಥೆಗೆ ಕೊಡಲಿ ಏಟು ನೀಡಿದ ನೋಟು ಅಪಮೌಲ್ಯಗೊಳಿಸಿದ್ದು, ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಜನ ಸಾಮಾನ್ಯರಿಗೆ ಯಾವುದೇ ವ್ಯವಸ್ಥೆಗಳನ್ನು ರೂಪಿಸದೆ ತಿಂಗಳುಗಳ ಕಾಲ ಲಾಕ್‌ಡೌನ್ ಹೇರಿ ಹಸಿವು, ಸಾವು ನೋವುಗಳಿಗೆ ತಳ್ಳಿದ್ದನ್ನು ನಾವು ಕಂಡಿದ್ದೇವೆ.
ಸಮಾನತೆಗೆ ಸಂಚಕಾರ
ಒಟ್ಟಾರೆ ಸಂಪತ್ತಿನಲ್ಲಿ ಏರಿಕೆಯಾದರೂ ಬಡವರ ಮತ್ತು ಶ್ರೀಮಂತರ ನಡುವಿನ ವ್ಯತ್ಯಾಸ ಹೆಚ್ಚುತ್ತಿದೆ. ರಾಜ್ಯಗಳಿಗೆ ಸಿಗಬೇಕಾದ ತೆರಿಗೆಯ ಪಾಲನ್ನು ನೀಡದೆ ಸತಾಯಿಸುತ್ತಿರುವುದು, ಮಿತಿಮೀರಿದ ವೇಗದಲ್ಲಿ ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಣ ಮಾಡುತ್ತಿರುವುದು ಈ ಸರಕಾರದ ಆದ್ಯತೆಯಾಗಿದೆ.
ಭ್ರಾತೃತ್ವಕ್ಕೆ ಕೊಡಲಿ ಏಟು
ಧರ್ಮ, ಜಾತಿ, ಪ್ರದೇಶ, ಭಾಷೆ ಮುಂತಾದ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದು, ಜನರ ಮಧ್ಯೆ ಜಗಳ ತಂದು ಹಾಕಿ, ಸಮುದಾಯಗಳ ನಡುವೆ ಒಡಕು ಉಂಟುಮಾಡುತ್ತಿರುವುದು. ವಿಶೇಷವಾಗಿ ಅಲ್ಪಸಂಖ್ಯಾತರ ಮನಸ್ಸಿನಲ್ಲಿ ಅನಗತ್ಯ ಭಯ ಉಂಟುಮಾಡಿ, ಭದ್ರತೆ, ಕಾನೂನಿನನ್ವಯ ನಡೆದುಕೊಳ್ಳದೆ ತಾರತಮ್ಯ ತೋರುತ್ತಿರುವುದು ದೇಶದ ಬಹುತ್ವ, ಸರ್ವರನ್ನು ಒಳಗೊಳ್ಳುವ ಸಂಸ್ಕೃತಿಗೆ ಅಪಾಯವನ್ನು ಒಡ್ಡಿದೆ.
ಮಹಿಳೆಯರಿಗಿಲ್ಲದ ರಕ್ಷಣೆ
ಮಣಿಪುರದಲ್ಲಿ ಮಹಿಳೆಯರ ಮೇಲಿನ ಹಿಂಸೆ, ಅತ್ಯಾಚಾರಗಳ ಬಗ್ಗೆ ಸರಕಾರದ ನಿಷ್ಕ್ರಿಯತೆ ಹಾಗೂ ಪ್ರಧಾನ ಮಂತ್ರಿಗಳ ಗಾಢ ಮೌನ, ದೇಶದ ಹೆಮ್ಮೆಯಾಗಿರುವ ಮಹಿಳಾ ಕ್ರೀಡಾಪಟುಗಳ ಸಂಕಟಕ್ಕೆ ಸ್ಪಂದಿಸಲು ವಿಫಲರಾಗಿರುವುದು, “ಭೇಟಿ ಬಚಾವೋ” ಘೋಷಣೆ ಕೇವಲ ಪ್ರಚಾರಕ್ಕೆ ಸೀಮಿತ ಎನ್ನುವುದಕ್ಕೆ ಸಾಕ್ಷಿ. ಕೋವಿಡ್ ಸಂದರ್ಭದಲ್ಲಿ ಅಪಾರ ಪ್ರಮಾಣದಲ್ಲಿ ಮಹಿಳೆಯರ ಸಾವು ನೋವುಗಳಿಗೆ ಕಾರಣವಾಗಿರುವುದು, ಗುಜರಾತ್ ದಂಗೆಯಲ್ಲಿ ಸಾಮೂಹಿಕ ಅತ್ಯಾಚಾರ ಕೊಲೆಗಳ ಅಪರಾಧಿಗಳಿಗೆ (ಬಿಲ್ಕಿಸ್ ಬಾನು ಪ್ರಕರಣ) ಕ್ಷಮಾದಾನ ನೀಡಿ ಬರಮಾಡಿಕೊಂಡ ನಾಚಿಕೆಗೇಡಿನ ವಿದ್ಯಮಾನಗಳು ಕೆಲವು ಉದಾಹರಣೆಗಳಷ್ಟೆ.
ಅಧಿಕಾರದ ದುರುಪಯೋಗ
ದೇಶದ ಹಿತರಕ್ಷಣೆ ಮಾಡಬೇಕಿರುವ ಐ.ಟಿ, ಈ.ಡಿ. ಇಲಾಖೆಗಳು ಅಧಿಕಾರದಲ್ಲಿರುವ ಪಕ್ಷದ ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲು ಬಳಸುತ್ತ ಅಧಿಕಾರ ದುರುಪಯೋಗ. ಜನಾದೇಶ ಸಿಕ್ಕದೇ ಹೋದಾಗ ಜನಪ್ರತಿನಿಧಿಗಳನ್ನು ಕೋಟಿಗಟ್ಟಲೆ ಹಣ ಸುರಿದು ಖರೀದಿ ಮಾಡಿ ಸರಕಾರಗಳನ್ನು ರಚಿಸುವ ಮತ್ತು ಬೀಳಿಸುವ ಕೆಲಸ ಮಾಡುತ್ತಿರುವುದು. ಪ್ರಜಾಪ್ರಭುತ್ವದಲ್ಲಿ ಜನಹಿತ ಕಾಯುವ ಮಾಧ್ಯಮಗಳನ್ನು ನಿಯಂತ್ರಿಸಿ ಬಹುತೇಕ ಜನಹಿತ ಕಡೆಗಣಿಸಿ ಸರಕಾರದ ಪರನಿಲ್ಲುವಂತೆ ಮಾಡಿರುವುದು. ಚುನಾವಣಾ ಬಾಂಡ್, ಪಿ.ಎಂ.ಕೇರ್, ಮೂಲಕ ಕೋಟಿಗಟ್ಟಲೆ ಹಣದ ದುರುಪಯೋಗ ಅಲ್ಲದೇ ಕಳೆದ ಹತ್ತು ವರ್ಷಗಳಲ್ಲಿ ಜನರ ಸಮಸ್ಯೆಗಳ ಕುರಿತು ನಾಡಿನ ನಾಡಿ ಮಿಡಿತ ಅರಿಯಲು ಒಮ್ಮೆಯೂ ಪತ್ರಿಕಾಗೋಷ್ಟಿ ನಡೆಸಲು ಪ್ರಧಾನ ಮಂತ್ರಿ ಮುಂದಾಗದಿರುವುದನ್ನು ನಾವೆಲ್ಲಾ ಅಸಹಾಯಕತೆಯಿಂದ ಗಮನಿಸುತ್ತಾ ಬಂದಿದ್ದೇವೆ.
ಉದ್ಯೋಗ, ಶಿಕ್ಷಣ, ಸಾಮಾಜಿಕ ಸೌಹಾರ್ದತೆ, ಘನತೆಯ ಬದುಕಿಗೆ ದಾರಿ ಮಾಡಿಕೊಟ್ಟಿರುವ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನದ ರಕ್ಷಣೆ ಮತ್ತು ಭರವಸೆಯ ಬದುಕಿಗಾಗಿ, ಬರುವ ೨೬ನೇ ತಾರೀಕಿನಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ, ಒಕ್ಕೂಟವನ್ನು ಸೋಲಿಸಲು ಮತ್ತು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ `ಇಂಡಿಯಾ’ ಒಕ್ಕೂಟದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ನಾಡಿನ ಎಲ್ಲ ಮತದಾರರಲ್ಲಿ ಮನವಿ ಮಾಡುತ್ತಿದ್ದೇವೆ.
ಪ್ರೊ. ಉದಯಕುಮಾರ್ ಇರ್ವತ್ತೂರ್, ಪ್ರೊ. ಬಿ. ಶಿವರಾಮ ಶೆಟ್ಟಿ , ಡಾ| ಎನ್. ಇಸ್ಮಾಯಿಲ್, ಪ್ರೊ. ಗಣನಾಥ ಶೆಟ್ಟಿ ಎಕ್ಕಾರು, ಪ್ರೊ. ಕೆ.ಫಣಿರಾಜ್, ಪ್ರೊ.ನರೇಂದ್ರ ನಾಯಕ್, ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ, ಬಿ. ಎಂ. ರೋಹಿಣಿ, ಚಂದ್ರಕಲಾ ನಂದಾವರ, ಟಿ.ಆರ್. ಭಟ್, ದಯಾನಾಥ ಕೋಟ್ಯಾನ್, ಎನ್.ಜಿ. ಮೋಹನ್, ರವೀಂದ್ರನಾಥ ಕುಂಜತ್ತೂರು, ಪ್ರೊ. ಕೆ.ರಾಜೇಂದ್ರ ಉಡುಪ, ಪ್ರೊ. ರಾಜಾರಾಮ್ ತೋಳ್ಪಾಡಿ, ಪ್ರೊ. ವಸಂತಕುಮಾರ್, ಪ್ರೊ. ಹರಿಯಪ್ಪ ಪೇಜಾವರ, ಕೆ.ಸದಾಶಿವ ಮಾಸ್ಟರ್, ಮೋಹನಚಂದ್ರ ಯು, ಐ.ಕೆ. ಬೊಳುವಾರು, ಶ್ಯಾಮಸುಂದರ ರಾವ್, ಪ್ರಭಾಕರ ಕಾಪಿಕಾಡ್, ಪ್ರೊ. ರಂಗಯ್ಯ ಶೆಟ್ಟಿಗಾರ್, ಪ್ರೊ. ಯೂಸುಫ್ ಡಿ, ವಿಲ್ಸನ್ ಕಟೀಲ್, ಗುಲಾಬಿ ಬಿಳಿಮಲೆ, ಯಶವಂತ ಮರೋಳಿ, ಬೆನೆಟ್ ಅಮ್ಮಣ್ಣ, ನಾಗೇಶ್ ಕಲ್ಲೂರ್, ಎಚ್.ಎಂ. ಪೆರ್ನಾಲ್, ಸಂಜೀವ ಬಳ್ಕೂರ್, ಬಿ.ಎಂ. ಮಾಧವ, ಉಮೇಶ್ ಉಚ್ಚಿಲ್, ಮಹೇಶ್ ನಾಯಕ್ ಕಲ್ಲಚ್ಚು, ಮಹಮದ್ ಇಕ್ಬಾಲ್ ಮಾಸ್ಟರ್, ಮೋಲಿ ಮಿರಾಂಡಾ, ಅರುಣ್ ಶೆಣೈ, ಫ್ಲೇವಿ ಕ್ರಾಸ್ತಾ, ಬಿ.ಎನ್ ದೇವಾಡಿಗ, ಪುಂಡರೀಕಾಕ್ಷ, ಆಗ್ನೆಲ್ ವೇಗಸ್, ಮರಿಯಾ ವೇಗಸ್, ಡಾ| ಕೃಷ್ಣಪ್ಪ ಕೊಂಚಾಡಿ, ವಾಸುದೇವ ಉಚ್ಚಿಲ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.