Connect with us

LATEST NEWS

ಉಡುಪಿಯಲ್ಲೊಂದು ವಿಶೇಷ ಮದುವೆ

ಉಡುಪಿ ಸೆಪ್ಟೆಂಬರ್ 03 : ಉಡುಪಿ ಜಿಲ್ಲೆಯ ಉಚ್ಚಿಲದ ಶ್ರೀಮತಿ ತುಂಬೆ ಕರ್ಕೆರಾ ಸಭಾಭವನದಲ್ಲಿ ಭಾನುವಾರ ನಡೆದ ಸುಧಾಕರ ಮತ್ತು ಹರಿಣಾಕ್ಷಿ ಅವರ ವಿವಾಹ ಹೊಸ ದಾಖಲೆಗೆ ಪಾತ್ರವಾಯಿತು.

ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರ ನೇತೃತ್ವದಲ್ಲಿ , ಹಸಿರು ಶಿಷ್ಠಾಚಾರ ಪಾಲಿಸಿ ಆಚರಿಸಿ ನಡೆದ ವಿವಾಹ ಕಾರ್ಯಕ್ರಮ ಈ ದಾಖಲೆಗೆ ಸಾಕ್ಷಿಯಾಯಿತು ಹಾಗೂ ಪ್ರತಿಯೊಬ್ಬರಿಗೂ ಮಾದರಿಯಾಯಿತು.

ಮದುವೆ ವ್ಯವಸ್ಥೆ

ಸುಮಾರು 700 ಮಂದಿ ಭಾಗವಹಿಸಿದ್ದ ಈ ವಿವಾಹ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆಯಿಂದ ಊಟದ ವ್ಯವಸ್ಥೆಯ ವರೆಗೂ ಎಲ್ಲಿಯೂ ಪಾಸ್ಟಿಕ್ ಬಳಕೆ ಕಂಡುಬರಲಿಲ್ಲ ಅಲ್ಲದೇ ಮದುವೆಯ ನಂತರ ಪರಿಸರಕ್ಕೆ ಹಾನಿಯಾಗುವ ಯಾವುದೇ ತ್ಯಾಜ್ಯ ಉತ್ಪತ್ತಿಯಾಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಮದುವೆ ಮಂಟಪಕ್ಕೆ ಬಟ್ಟೆಯಿಂದ ತಯಾರಿಸಿದ ಹೂ ಮತ್ತು ನೈಸರ್ಗಿಕ ಹೂ ಗಳನ್ನೇ ಬಳಸಲಾಗಿತ್ತು, ಕುಡಿಯಲು ಸ್ಟೀಲ್ ಲೋಟಗಳು ಮತ್ತು ಊಟಕ್ಕೆ ಪಿಂಗಾಣಿ ಪ್ಲೇಟ್ ಗಳನ್ನು ಬಳಸಲಾಗಿತ್ತು.

ಜಿಲ್ಲಾಡಳಿತದಿಂದ ಪರಿಶೀಲನೆ

ಈ ವಿವಾಹದಲ್ಲಿ ಪಾಸ್ಟಿಕ್ ಬಳಕೆ ಮತ್ತು ತ್ಯಾಜ್ಯ ಸೃಷ್ಠಿಸುವ ವಸ್ತುಗಳ ಬಳಕೆ ಮಾಡುವುದರ ಕುರಿತು ಪರಿಶೀಲಿಸುವ ಉದ್ದೇಶದಿಂದ ಮದುಮಕ್ಕಳಗಿಂತ ಮುಂಚಿತವಾಗಿ 2 ಮಂದಿ ಪಿಡಿಓ ಗಳು ಪರಿಶೀಲನೆಗೆ ಅಗಮಿಸಿದ್ದು, ಈ ಬಗ್ಗೆ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು, ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ ಖುದ್ದಾಗಿ ವಿವಾಹದ ಸಭಾ ಭವನಕ್ಕೆ ಆಗಮಿಸಿ ವಧೂ ವರ ರನ್ನು ಅಭಿನಂದಿಸಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ, ಸ್ವಚ್ಛ ಉಡುಪಿ ಮಿಷನ್ ಅಂಗವಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಎಲ್ಲಾ ಯುವಕ ಮಂಡಳಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ಬಗ್ಗೆ ಮಾಹಿತಿ ನೀಡಿದ್ದು, ಅದರಂತೆ ನವಚೇತನ ಯುವಕ ಮಂಡಲ ಮತ್ತು ನವಚೇತನ ಯುವತಿ ಮಂಡಲ ಕಟ್ಟೆಗುಡ್ಡೆ ಇದರ ಸಂಘದ ಸದಸ್ಯ ಸುಧಾಕರ ಅವರ ವಿವಾಹವನ್ನು ಪ್ಲಾಸ್ಟಿಕ್ ರಹಿತವಾಗಿ ಮಾಡಿ, ಎಲ್ಲರಿಗೂ ಮಾದರಿಯಾಗುವುದಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದರು, ಅದರಂತೆ ಇಂದು ವಿವಾಹ ನಡೆದಿದೆ ಇದು ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದು ತಿಳಿಸಿದರು.

ಈ ವಿವಾಹ ಕಾರ್ಯಕ್ರಮಕ್ಕೆ ಕ್ಯಾಟರಿಂಗ್ ವ್ಯವಸ್ಥೆ ಮಾಡಿದ್ದ, ಉಡುಪಿ ಅಂಬಾಗಿಲು ನ ಎಕ್ಸಲೆಂಟ್ ಕ್ಯಾಟರರ್ ನ ದೀಕ್ಷಿತ್ ಶೆಟ್ಟಿ ಅವರನ್ನು ಅಭಿನಂದಿಸಿದ ಜಿಲ್ಲಾಧಿಕಾರಿ, ಮುಂದೆಯೂ ಎಲ್ಲಾ ವಿವಾಹಗಳಲ್ಲಿ ಇದೇ ಮಾದರಿಯಲ್ಲಿ ಪ್ಲಾಸ್ಟಿಕ್ ಬಳಕೆ ರಹಿತವಾಗಿ, ಪರಿಸರಕ್ಕೆ ಪೂರಕವಾಗಿರುವ ವಸ್ತುಗಳನ್ನು ಬಳಸಿ ಆಹಾರ ಸರಬರಾಜು ಮಾಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಹಸಿರು ಶಿಷ್ಠಚಾರ ಪಾಲಿಸಿ, ಪ್ಲಾಸ್ಟಿಕ್ ಬಳಕೆ ಮಾಡದೇ ವಿವಾಹವಾಗುವ ಎಲ್ಲಾ ದಂಪತಿಗಳಿಗೆ, ಅಂತಹ ಸಭಾ ಭವನಗಳ ಮುಖ್ಯಸ್ಥರಿಗೆ ಹಾಗೂ ಆಹಾರ ತಯಾರಿಕೆ/ಸರಬರಾಜು ಮಾಡುವವರಿಗೆ ಜಿಲ್ಲಾಡಳಿದ ವತಿಯಿಂದ ಅಭಿನಂದನಾ ಪತ್ರಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಉಡುಪಿ ಜಿಲ್ಲೆ ತ್ಯಾಜ್ಯಮುಕ್ತ

ಉಡುಪಿ ಜಿಲ್ಲೆಯನ್ನು 2018 ರ ಅಕ್ಟೋಬರ್ 2 ರ ಒಳಗೆ ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿಸಲು, ಸ್ವಚ್ಛ ಉಡುಪಿ ಮಿಷನ್ ವರ್ಷದ ಕೌಂಟ್ ಡೌನ್ ಕಾರ್ಯಕ್ರಮ ಈಗಾಗಲೇ ಪ್ರಾರಂಭಗೊಂಡಿದ್ದು, ಇಂದು ನಡೆದ ಈ ವಿವಾಹ ಕಾರ್ಯಕ್ರಮ ಎಲ್ಲರಿಗೂ ಪ್ರೇರಣೆ ನೀಡಿದೆ.
ವಿವಾಹ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಡುಪಿ ತಾ.ಪಂ. ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ, ಸ್ವಚ್ಛ ಭಾರತ್ ಅಭಿಯಾನದ ಜಿಲ್ಲಾ ಸಮಾಲೋಚಕ ಸುಧೀರ್, ಪಿಡಿಓ ಗಳಾದ ರಮಾನಂದ ಪುರಾಣಿಕ್, ಸಿದ್ದೇಶ್ ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *