DAKSHINA KANNADA
ಯುವಮೋರ್ಚಾ ರಾಲಿಗೆ ತಡೆ, ಜಿಲ್ಲೆಗೆ ಹೆಚ್ಚುವರಿ ಪೋಲೀಸ್ ಪಡೆ,

ಮಂಗಳೂರು, ಸೆಪ್ಟಂಬರ್ 5: ಸೆಪ್ಟಂಬರ್ 7 ರಂದು ಮಂಗಳೂರಿನಲ್ಲಿ ಬಿಜೆಪಿ ಯುವಮೋರ್ಚಾ ನಡೆಸಲಿರುವ ಮಂಗಳೂರು ಚಲೋ ಬೈಕ್ ರಾಲಿಯನ್ನು ತಡೆಯಲು ಪೋಲೀಸ್ ಇಲಾಖೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಭದ್ರತೆಗಾಗಿ ಹೆಚ್ಚುವರಿ ಪೋಲೀಸರನ್ನು ಹಾಗೂ ಇತರ ಅರೆಸೇನಾ ಪಡೆಗಳನ್ನು ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ನಿಯೋಜಿಸಿದ್ದು, ಜಿಲ್ಲೆಯಾದ್ಯಂತ ಪೋಲೀಸ್ ಪಥಸಂಚಲವನ್ನೂ ನಡೆಸಿದೆ.

ಬಂದೋಬಸ್ತ್ ಹಿನ್ನಲೆಯಲ್ಲಿ ಜಿಲ್ಲೆಗೆ ಸಾವಿರಾರು ಪೋಲೀಸರು ಹೊರ ಜಿಲ್ಲೆಗಳಿಂದಲೂ ಬಂದಿದ್ದು, 1 ತುಕಡಿ RAF, 15 KSRP ಪ್ಲಟೂನ್, 12 CAR ತುಕಡಿಗಳನ್ನು ಈಗಾಗಲೇ ಕರೆಸಿಕೊಳ್ಳಲಾಗಿದೆ.
ಬೆಳಗಾವಿಯಿಂದ 100 ಮಿಕ್ಕಿದ ಪೋಲೀಸರು ಜಿಲ್ಲೆಗೆ ಆಗಮಿಸಿದ್ದು, 6 ಎಸ್ಪಿ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಬಂದೋಬಸ್ತ್ ನ ಉಸ್ತುವಾರಿಯನ್ನು ವಹಿಸಲಿದ್ದಾರೆ.
ಬೈಕ್ ರಾಲಿ ನಡೆಸಲು ಯಾವುದೇ ಅನುಮತಿ ಇಲ್ಲದ ಕಾರಣ ರಾಲಿಯನ್ನು ಜಿಲ್ಲೆಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಮಂಗಳೂರು ಪೋಲೀಸ್ ಕಮಿಷನರ್ ಟಿ.ಆರ್. ಸುರೇಶ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ರಾಲಿ ಬದಲು ಮಂಗಳೂರಿನಲ್ಲಿ ಸಮಾವೇಶ ನಡೆಸಲು ಅನುಮತಿಯನ್ನು ನೀಡಿದ್ದು, ಈ ಬಗ್ಗೆ ಪರಿಶೀಲನೆಯನ್ನೂ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.