LATEST NEWS
ಎಲ್ಲಿಯವರೆಗೆ ನಮಗೆ ಅವರು ತೊಂದರೆ ಕೊಡುತ್ತಾರೋ, ಅಲ್ಲಿಯವರೆಗೆ ನಾವು ಅವರೊಂದಿಗೆ ಕ್ರಿಕೆಟ್ ಆಟವಾಡಬಾರದು – ಸ್ಪೀಕರ್ ಖಾದರ್
ಮಂಗಳೂರು ಜೂನ್ 08 : ಅಮೇರಿಕಾದಲ್ಲಿ ಟಿ20 ವರ್ಲ್ ಕಪ್ ನಲ್ಲಿ ಭಾರತ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಕುರಿತಂತೆ ಸ್ಪೀಕರ್ ಖಾದರ್ ಪ್ರತಿಕ್ರಿಯೆ ನೀಡಿದ್ದು ಪಾಕಿಸ್ತಾನ ಎಲ್ಲಿಯವರೆಗೆ ಅವರು ತೊಂದರೆ ಕೊಡುತ್ತದೋ, ಅಲ್ಲಿಯವರೆಗೆ ನಾವು ಅವರೊಂದಿಗೆ ಕ್ರಿಕೆಟ್ ಆಟವಾಡಬಾರದು ಎಂದು ಹೇಳಿದ್ದಾರೆ.
ನ್ಯೂಯಾರ್ಕ್ನಲ್ಲಿ ಇಂಡಿಯಾ – ಪಾಕಿಸ್ತಾನದ ನಡುವೆ ಟಿ-20 ವರ್ಲ್ಡ್ ಕಪ್ ಕ್ರಿಕೆಟ್ ಮ್ಯಾಚ್ ನಡೆಯಲಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, “ಹಿಂದೆ ಪಾಕಿಸ್ತಾನದವರು ಕ್ರಿಕೆಟ್ ಆಟವಾಡಲು ಬಂದ ವೇಳೆ ಪಿಚ್ ಅಗೆದಿದ್ದಾರೆ. ವಿನಾಕಾರಣ ಪ್ರತಿಭಟನೆ ಮಾಡಿದ್ದರು. ಆದ್ದರಿಂದ ಎಲ್ಲಿಯವರೆಗೆ ನಮಗೆ ಅವರು ತೊಂದರೆ ಕೊಡುತ್ತಾರೋ, ಅಲ್ಲಿಯವರೆಗೆ ನಾವು ಅವರೊಂದಿಗೆ ಆಟವಾಡಬಾರದು” ಎಂದು ಹೇಳಿದರು. ಎರಡೂ ದೇಶಗಳ ನಡುವೆ ಸಂಚಾರ ಮಾಡುವುದನ್ನೂ ನಿಲ್ಲಿಸಲಾಗಿದೆ. ಅಲ್ಲದೆ ಅವರು ನಮ್ಮಲ್ಲಿಗೆ ಬಂದು ಆಟವಾಡುವುದನ್ನೂ ನಿಲ್ಲಿಸಲಾಗಿದೆ. ಇಷ್ಟಾದ ಮೇಲೆ ಪಾಕಿಸ್ತಾನದ ಆಟಗಾರರನ್ನು ದುಬೈ, ನ್ಯೂಯಾರ್ಕ್ಗೆ ಕರೆದೊಯ್ದು ಅಲ್ಲಿ ಅವರೊಂದಿಗೆ ಭಾರತದ ಆಟಗಾರರು ಆಡುವುದೆಂದರೆ ಏನರ್ಥ?. ಎಲ್ಲಿಯವರೆಗೆ ಪಾಕ್ನವರು ಭಾರತ ಹೇಳುವುದನ್ನು ಕೇಳುವುದಿಲ್ಲವೋ ಅಲ್ಲಿಯವರೆಗೆ ಅವರೊಂದಿಗೆ ಆಟವಾಡುವುದು ಬೇಡ. ಅವರೊಂದಿಗೆ ಆಟವಾಡದಿದ್ದರೆ ಕ್ರಿಕೆಟ್ ಆಟ ಮುಂದೆ ಹೋಗುದಿಲ್ಲವೇ?” ಎಂದು ಪ್ರಶ್ನಿಸಿದರು.
ಪಾಕ್ನೊಂದಿಗೆ ನಡೆಯುವ ಪಂದ್ಯಾಟದಲ್ಲಿ ಭಾರತದ ತಂಡ ಗೆಲುವು ಸಾಧಿಸುವುದು ಮಾತ್ರವಲ್ಲ, ಇಡೀ ದೇಶಕ್ಕೆ ಗೌರವದ ಗೆಲುವನ್ನು ತರಬೇಕು. ಅದೇ ರೀತಿ ಪಾಕಿಸ್ತಾನವನ್ನು ಸೋಲಿಸುವುದು ಮಾತ್ರವಲ್ಲ, ಅತ್ಯಂತ ಹೀನಾಯ ಸೋಲನ್ನು ಅನುಭವಿಸುವಂತೆ ಮಾಡಲು ದೇವರು ನಮ್ಮ ಆಟಗಾರರಿಗೆ ಶಕ್ತಿ ತುಂಬಲಿ” ಎಂದು ಯು.ಟಿ. ಖಾದರ್ ಪ್ರಾರ್ಥಿಸಿದರು.