LATEST NEWS
ಮಹಮ್ಮದ್ ಮುಸ್ತಫ್ ಗೂ ಸ್ಪೀಕರ್ ಖಾದರ್ ಅವರಿಗೆ ಇರುವ ಸಂಬಂಧ ಏನು – ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಪ್ರಶ್ನೆ

ಮಂಗಳೂರು ಮೇ 06: ಬಜಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಪರ ಸ್ಪೀಕರ್ ಖಾದರ್ ತನಿಖೆಗೆ ಮೊದಲೇ ಕ್ಲಿನ್ ಚಿಟ್ ಕೊಟ್ಟಿದ್ದು, ಸ್ಪೀಕರ್ ಖಾದರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಖಾದರ್ ಸ್ಪೀಕರ್ ಆಗಿರುವ ತನಕ ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ನ್ಯಾಯ ಸಿಗುವ ನಂಬಿಕೆ ಇಲ್ಲ. ಆದ್ದರಿಂದ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ರಾಜ್ಯಪಾಲರೇ ಮಧ್ಯೆ ಪ್ರವೇಶಿಸಿ ಅವರ ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದರು.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿತ 8 ಮಂದಿಯ ಪೈಕಿ ರಂಜಿತ್ ಮತ್ತು ನಾಗರಾಜ ಕಳಸದವರು. ಅವರು ಅಲ್ಲಿ ಹೋಟೆಲ್, ಹೋಮ್ ಸ್ಟೇ ಹೊಂದಿರುವ ಮುಹಮ್ಮದ್ ಮುಸ್ತಫ ಎಂಬವರ ಕೆಲಸದವರು. ಮುಸ್ತಫ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಯು.ಟಿ.ಖಾದರ್ ಮತ್ತು ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಪಾಲ್ಗೊಂಡಿದ್ದರು ಎಂದು ಸತೀಶ್ ಕುಂಪಲ ಆರೋಪಿಸಿದರು.
ಘಟನೆ ನಡೆದ ಸ್ಥಳದಲ್ಲಿ ಇಬ್ಬರು ಮಹಿಳೆಯರಿದ್ದರು. 15ರಿಂದ 20 ಮಂದಿ ಕಾಯುತ್ತಾ ನಿಂತಿದ್ದರು. ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿಲ್ಲ. ಈ ಹತ್ಯೆಗೆ ಕೇವಲ ₹ 5 ಲಕ್ಷ ಸುಪಾರಿಯನ್ನು ಆದಿಲ್ ಮೆಹರೂಫ್ ನೀಡಿದ್ದಾನೆ ಎಂದು ಪೊಲೀಸ್ ಕಮಿಷನರ್ ಅನುಪಮ ಆಗ್ರವಾಲ್ ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು ಹಾಗೂ ಪಿಕಪ್ ವಾಹನದ ಬೆಲೆಯೇ ಅದಕ್ಕಿಂತ ಜಾಸ್ತಿ ಆಗುತ್ತದೆ. ಇಷ್ಟು ಕಡಿಮೆ ಹಣಕ್ಕೆ ಯಾರಾದರೂ ಹತ್ಯೆ ಮಾಡುತ್ತಾರೆಯೇ. ಪ್ರಮುಖ ಆರೋಪಿ ಸಫಾನ್ ಖಾತೆಗೆ ವಿದೇಶದಿಂದ ಹಣ ವರ್ಗಾವಣೆ ಆಗಿರುವ ಸಂದೇಹವಿದೆ. ಈ ಹಿಂದೆ ಹತ್ಯೆಗೊಳಗಾದ ಮಹಮ್ಮದ್ ಫಾಝಿಲ್ ಕುಟುಂಬಕ್ಕೆ ಕಾಂಗ್ರೆಸ್ ನೇತೃತ್ವದ ಸರ್ಕಾರವು ₹ 25 ಲಕ್ಷ ಪರಿಹಾರ ನೀಡಿತ್ತು. ಅದರ ಹಣವನ್ನೂ ಹತ್ಯೆಗೆ ಬಳಸಿರುವ ಶಂಕೆ ಇದೆ. ಎಂಟು ಆರೋಪಿಗಳ ಬಂಧನದ ಹೊರತಾಗಿ ಕಮಿಷನರ್ ಯಾವುದೇ ಮಾಹಿತಿಯನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಒದಗಿಸುತ್ತಿಲ್ಲ. ಅವರನ್ನು ಎಲ್ಲಿ ಬಂಧಿಸಲಾಗಿದೆ. ಅವರಾಗಿಯೇ ಶರಣಾದರೆ ಎಂದೂ ತಿಳಿಸಿಲ್ಲ’ ಎಂದರು.