Connect with us

KARNATAKA

ಶ್ರೀಕೃಷ್ಣ ಜನಿಸಿದ ಮಧ್ಯರಾತ್ರಿಯೇ ಅಚ್ಚರಿ ಎಂಬಂತೆ ಉಡುಪಿ ಕೃಷ್ಣ ಮಠದಲ್ಲಿ ಸ್ಪೀಕರ್ ಯು.ಟಿ ಖಾದರ್…!!

ಉಡುಪಿ ಸೆಪ್ಟೆಂಬರ್ 07: ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಜೊರಾಗಿದೆ. ಇಡೀ ಉಡುಪಿಯೇ ಸಂಭ್ರಮದಲ್ಲಿ ಮುಳುಗಿದೆ, ಈ ನಡುವೆ ಶ್ರೀಕೃಷ್ಣ ಜನಿಸಿದ ಮಧ್ಯರಾತ್ರಿ ಸಮಯದಲ್ಲೇ ಉಡುಪಿ ಕೃಷ್ಣ ಮಠಕ್ಕೆ ಆಕಸ್ಮಿಕವಾಗಿ ಭೇಟಿ ನೀಡಿ ವಿಧಾನಸಭಾಧ್ಯಕ್ಷ ಖಾದರ್ ಅಚ್ಚರಿ ಮೂಡಿಸಿದ್ದಾರೆ.


ಉಡುಪಿಯಲ್ಲಿ ಕೃಷ್ಣಾಷ್ಟಮಿ ಸಂಭ್ರಮ, ಕೃಷ್ಣ ಮಠದಲ್ಲಿ ಇದೀಗ ವಿಶೇಷ ಪೂಜೆ ಗಳು ನಡೆಯುತ್ತವೆ. ಭಗವಾನ್ ಶ್ರೀಕೃಷ್ಣ ಮಥುರಾದಲ್ಲಿ ಮಧ್ಯರಾತ್ರಿ ಜನಿಸಿದ್ದು ಇತಿಹಾಸ. ಅದೇ ಮಧ್ಯರಾತ್ರಿಯ ಸಮಯ, ಅದೇ ಗಳಿಗೆಯಲ್ಲಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಮುಸ್ಲೀಂ ಶಾಸಕರೊಬ್ಬರು ದೈವ ಸಂಕಲ್ಪ ಎಂಬಂತೆ ಭೇಟಿ ನೀಡಿ ಕೃಷ್ಣಾಷ್ಟಮಿಯ ಸಂಭ್ರಮದಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದರು. ಅವಿಭಜಿತ ದ.ಕ. ಜಿಲ್ಲೆಯ 13 ಶಾಸಕರ ಪೈಕಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಉಡುಪಿ ಮಠಕ್ಕೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾದ ಏಕೈಕ ಶಾಸಕ.


ಮಠದ ಸತ್ಯನಾರಾಯಣ ಭಟ್ ಅವರು ಸ್ಪೀಕರ್ ಅವರನ್ನು ಬರಮಾಡಿಕೊಂಡರು. ಮಠದ ಕೊಳದಲ್ಲಿ ಕೈ ಕಾಲು ತೊಳೆದು ಮಠದೊಳಗೆ ಭೇಟಿ ನೀಡಿದ ಯು.ಟಿ.ಖಾದರ್ ಅವರನ್ನು ಸತ್ಯನಾರಾಯಣ ಭಟ್ ಮತ್ತು ಸಮಿತಿಯವರು ಶಾಲು ಹೊದಿಸಿ ಸ್ವಾಗತಿಸಿದರು.

ಪ್ರಸಾದವನ್ನು ನೀಡಿ ಹರಸಿದರು. ಬುಧವಾರ ಬೆಳಿಗ್ಗೆ ಬೆಂಗಳೂರು ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ಬಂದು ತನ್ನ ಕ್ಷೇತ್ರದಲ್ಲಿ ವಿವಿಧೆಡೆ ಕೃಷ್ಣಾಷ್ಟಮಿ, ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಡುಪಿಯ ಕಡಿಯಾಲಿನಲ್ಲಿ ಪ್ರಸಾದ್ ಕಾಂಚನ್ ನೇತೃತ್ವದಲ್ಲಿ ಶಶಿರಾಜ್ ಕುಂದರ್ ಮತ್ತು ತಂಡದಿಂದ ಟೈಗರ್ ಫ್ರೆಂಡ್ಸ್ ನ ಹುಲಿವೇಷ ಪ್ರದರ್ಶನ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಿಂತಿರುಗುವಾಗ ಹಿತೈಷಿಗಳ ಕೋರಿಕೆ ಮೇರೆಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ವಿಶೇಷವೆಂದರೆ ಕಾಕತಾಳೀಯವೆಂಬಂತೆ ಭೇಟಿ ನೀಡಿದ ಅದೇ ಗಳಿಗೆಯಲ್ಲಿ ಶ್ರೀಕೃಷ್ಣ ಜನ್ಮ ತಾಳಿದ್ದರು ಎಂದು ಮಠದ ಸತ್ಯನಾರಾಯಣ ಭಟ್ ಉಲ್ಲೇಖಿಸಿದರು. ಈ ಭಾಗ್ಯ ಎಲ್ಲರಿಗೂ ಪ್ರಾಪ್ತವಾಗದು. ಎರಡೂ ಜಿಲ್ಲೆಯ 13 ಶಾಸಕರ ಪೈಕಿ 11 ಮಂದಿ ಬಿಜೆಪಿ ಶಾಸಕರಿದ್ದರೂ ಅವರ್ಯಾರಿಗೂ ಸಿಗದ ಭಾಗ್ಯ ಸ್ಪೀಕರ್ ಖಾದರ್ ಗೆ ಲಭಿಸಿದ್ದು ಕಾಕತಾಳೀಯ.

 

ಎಲ್ಲ ಧರ್ಮವನ್ನು ಸಮಾನವಾಗಿ ಗೌರವಿಸುವ ಸೌಹಾರ್ದದ ಹರಿಕಾರ ಯು.ಟಿ.ಖಾದರ್ ಗೆ ಇಂತಹ ವಿಶೇಷ ಸಿಕ್ಕಿದ್ದು ಅವರ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲೊಂದು ಎನ್ನಬಹುದು. 6 ಗಂಟೆಗೆ ಹುಲಿವೇಷ ಸ್ಪರ್ಧೆ ನಿಗದಿಯಾಗಿದ್ದರೂ ಆ ಸಮಯಕ್ಕೆ ಯು.ಟಿ. ಖಾದರ್ ಕ್ಷೇತ್ರದಲ್ಲೇ ಬಿಝಿಯಾಗಿದ್ದರು. ಸಂಘಟಕರ ಒತ್ತಾಯದ ಮೇರೆಗೆ ಉಡುಪಿ ಹುಲಿವೇಷ ಸ್ಪರ್ಧೆಗೆ ರಾತ್ರಿ ಭೇಟಿಯಿತ್ತರು. ಹಿಂತಿರುಗುವಾಗ ಶ್ರೀಕೃಷ್ಣ ಮಠ ಭೇಟಿಯ ಕಲ್ಪನೆಯೂ ಇರಲಿಲ್ಲ. ಅದೂ ಕೂಡಾ ಶ್ರೀಕೃಷ್ಣ ಜನಿಸಿದ ಅದೇ ಮಧ್ಯರಾತ್ರಿ ಸಮಯದಲ್ಲಿ ಮಠದೊಳಗೆ ಯು.ಟಿ.ಖಾದರ್ ಪ್ರತ್ಯಕ್ಷವಾದದ್ದು ದೇವರ ವಿಧಿಯಾಗಿರಬಹುದು ಎಂದು ಅಲ್ಲಿಗೆ ಬಂದಿರುವ ಬೇರೆ ಬೇರೆ ಜಿಲ್ಲೆಯ ಭಕ್ತಾದಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಪೀಕರ್ ಅವರೊಂದಿಗೆ ಕೌನ್ಸಿಲರ್ ಭಾಸ್ಕರ ರಾವ್ ಕಿದಿಯೂರ್, ರಮೇಶ್ ಕಾಂಚನ್, ಮುನಿಯಾಲ ಉದಯಕುಮಾರ್ ಶೆಟ್ಟಿ, ಮುಸ್ತಫ ಹರೇಕಳ, ಬದ್ರುದ್ದೀನ್ ಜೊತೆಗಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *