LATEST NEWS
ಅಮೇರಿಕಾದ ದಿಗ್ಬಂಧನಕ್ಕೆ ಭಾರತದ ಮೇಲೆ ಬಾಹ್ಯಾಕಾಶ ನಿಲ್ದಾಣ ಕಳಚಿ ಬೀಳಬಹುದು – ರಷ್ಯಾದ ಎಚ್ಚರಿಕೆ
ನವದೆಹಲಿ – ಉಕ್ರೇನ್ ಮೇಲೆ ಯುದ್ದ ನಡೆಸುತ್ತಿರುವ ರಷ್ಯಾಕ್ಕೆ ಹಾಕಲಾಗಿರುವ ನಿರ್ಬಂಧಕ್ಕೆ ಇದೀಗ ರಷ್ಯಾ ಪ್ರತ್ಯುತ್ತರ ನೀಡಲಾರಂಭಿಸಿದ್ದು. ಅಮೆರಿಕದ ದಿಗ್ಬಂಧನಗಳ ವಿರುದ್ದ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೊಸ್ ಮುಖ್ಯಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ವೇಳೆ ಬಾಹ್ಯಾಕಾಶ ನಿಲ್ದಾಣ ನಿಯಂತ್ರಣ ತಪ್ಪಿದಲ್ಲಿ ಅಮೆರಿಕ, ಯುರೋಪ್, ಭಾರತ, ಚೀನಾದಂತಹ ದೇಶಗಳ ಮೇಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ರೋಸ್ಕೊಸ್ಮೊಸ್ ಮುಖ್ಯಸ್ಥರು ಹೇಳಿದ್ದಾರೆ.
ಸುಮಾರು 500 ಟನ್ ತೂಕದ ಬಾಹ್ಯಾಕಾಶ ನಿಲ್ದಾಣದ ಭಾಗಗಳು ಭಾರತ ಅಥವಾ ಚೀನಾದ ಮೇಲೆ ಬೀಳಬಹುದು ಎಂದು ಅವರು ಹೇಳಿದ್ದಾರೆ. ಅಂತಹ ಅವಕಾಶಗಳಿಂದ ನೀವು ಬೆದರಿಕೆ ಹಾಕಲು ಬಯಸುವಿರಾ? ಎಂದು ರೋಸ್ಕೊಸ್ಮೊಸ್ ಮುಖ್ಯಸ್ಥರು ಯುನೈಟೆಡ್ ಸ್ಟೇಟ್ಸ್ ಅನ್ನು ಆಕ್ರೋಶದಿಂದ ಪ್ರಶ್ನಿಸಿದ್ದಾರೆ? ‘ಐಎಸ್ ಎಸ್ ರಷ್ಯಾದ ಮೇಲೆ ಹಾದು ಹೋಗುವುದಿಲ್ಲ, ಹಾಗಾಗಿ ಅದು ಕುಸಿದರೆ ನಷ್ಟವೆಲ್ಲ ನಿಮಗೇ. ಅದಕ್ಕೆ ನೀವು ಸಿದ್ಧರಿದ್ದೀರಾ?’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಎಚ್ಚರಿಸಿದ್ದಾರೆ. ಹೀಗಾಗಿ ಬೇಜವಾಬ್ದಾರಿಯಿಂದ ವರ್ತಿಸಬಾರದು ಎಂದು ಅಮೆರಿಕಕ್ಕೆ ಸೂಚಿಸಿದ್ದಾರೆ.
ಆದರೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಸುರಕ್ಷಿತ ಕಾರ್ಯಾಚರಣೆಗಾಗಿ ರಷ್ಯಾ ಮತ್ತು ಅಂತರಾಷ್ಟ್ರೀಯ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ.