Connect with us

KARNATAKA

ನೈಋತ್ಯ ರೈಲ್ವೆಯ 2024-25ರ ಆರ್ಥಿಕ ವರ್ಷದಲ್ಲಿ 45.66 ಮಿಲಿಯನ್ ಟನ್ ಸರಕು ಸಾಗಣೆಯ ಮಹತ್ತರ ಮೈಲಿಗಲ್ಲು

ಹುಬ್ಬಳ್ಳಿ ಎಪ್ರಿಲ್ 02:

• ನೈಋತ್ಯ ರೈಲ್ವೆ 45.66 ಮಿಲಿಯನ್ ಟನ್ ಸರಕು ಸಾಗಣೆಯ ಮಹತ್ತರ ಮೈಲಿಗಲ್ಲು ಸಾಧಿಸಿದೆ.
• ಹುಬ್ಬಳ್ಳಿ ವಿಭಾಗವು 32.69 ಮಿಲಿಯನ್ ಟನ್ ಸಾಧಿಸಿದ್ದು, ನೈಋತ್ಯ ರೈಲ್ವೆಗೆ ದೊಡ್ಡ ಕೊಡುಗೆ ನೀಡಿದೆ.
• ಮೈಸೂರು ವಿಭಾಗವು 10.84 ಮಿಲಿಯನ್ ಟನ್ ಗುರಿಯನ್ನು ಮೀರಿ 10.89 ಮಿಲಿಯನ್ ಟನ್ ಸಾಧಿಸಿದೆ.
• 67.57 ಮಾರ್ಗ ಕಿಲೋಮೀಟರ್ ವಿದ್ಯುದ್ದೀಕರಣ ಪೂರ್ಣಗೊಳಿಸಲಾಗಿದೆ.
• 39.1 ಕಿ.ಮೀ ದ್ವಿಪಥ ಮಾರ್ಗ ಮತ್ತು 26.5 ಕಿ.ಮೀ ಹೊಸ ಮಾರ್ಗ ಪೂರ್ಣಗೊಂಡಿದೆ.
• 160 ಕೋಟಿ ರೂ.ಗಳ ಗುರಿಯ ವಿರುದ್ಧ ಸ್ಕ್ರ್ಯಾಪ್ ಮಾರಾಟದಿಂದ 188.07 ಕೋಟಿ ರೂ.ಗಳ ದಾಖಲೆಯ ಆದಾಯ ಗಳಿಸಿದೆ.

ನೈಋತ್ಯ ರೈಲ್ವೆ 2024-25ರ ಆರ್ಥಿಕ ವರ್ಷದಲ್ಲಿ ಸರಕು ಸಾಗಣೆ, ಆದಾಯ ಉತ್ಪಾದನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ದೃಷ್ಟಿಯಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದೆ. ಆರ್ಥಿಕ ಕಾರ್ಯಕ್ಷಮತೆಯಲ್ಲಿ ವಿವಿಧ ಆದಾಯಗಳ ಮೂಲಕ ಗಣನೀಯ ಬೆಳವಣಿಗೆಯನ್ನು ಸಾಧಿಸಿರುವ ನೈಋತ್ಯ ರೈಲ್ವೆ, ಪ್ರಯಾಣಿಕರ ಆದಾಯವನ್ನು 3,172.82 ಕೋಟಿ ರೂಪಾಯಿಗೆ ಹೆಚ್ಚಿಸಿದೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಆದಾಯಯು 3,090.5 ಕೋಟಿ ರೂಪಾಯಿಯಾಗಿತ್ತು. ಇತರ ಕೋಚಿಂಗ್ ಆದಾಯವು 328.26 ಕೋಟಿ ರೂಪಾಯಿಯಿಂದ 335.24 ಕೋಟಿಗೆ ಏರಿದ್ದು , ಪಾರ್ಸೆಲ್ ಆದಾಯವು ಕಳೆದ ವರ್ಷ 157.77 ಕೋಟಿ ರೂಪಾಯಿಯಾಗಿದ್ದರೆ, ಈ ವರ್ಷ 166.6 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಒಟ್ಟು ಆದಾಯ 8,340.90 ಕೋಟಿ ರೂಪಾಯಿಗೆ ತಲುಪಿದ್ದು, ಇದು ನೈಋತ್ಯ ರೈಲ್ವೆಯ ಬಲವಾದ ಆರ್ಥಿಕ ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ. ವಾಣಿಜ್ಯ ಆದಾಯವೂ ಮಹತ್ತರ ಏರಿಕೆ ಕಂಡಿದ್ದು, 2023-24ರ 78.90 ಕೋಟಿ ರೂಪಾಯಿಯಿಂದ ಈ ವರ್ಷ 91.60 ಕೋಟಿ ರೂಪಾಯಿಗೆ ತಲುಪಿದೆ. ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, 165.51 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದರೆ ಹಿಂದಿನ ವರ್ಷ ಈ ಸಂಖ್ಯೆ 162.16 ಮಿಲಿಯನ್ ಆಗಿತ್ತು.

2024-25ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಒಟ್ಟು 45.66 ಮಿಲಿಯನ್ ಟನ್ ಸರಕು ಸಾಗಣೆಯನ್ನು ದಾಖಲಿಸಿದೆ . ಇದರಲ್ಲಿ ಹುಬ್ಬಳ್ಳಿ ವಿಭಾಗವು 32.69 ಮಿಲಿಯನ್ ಟನ್ ಸರಕು ಸಾಗಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದ್ದರೆ, ಮೈಸೂರು ವಿಭಾಗವು 10.89 ಮಿಲಿಯನ್ ಟನ್ ಗುರಿಯನ್ನು ಮೀರಿಸುವ ಮೂಲಕ ಮಹತ್ತರ ಸಾಧನೆ ಮಾಡಿದೆ. ಉಳಿದ ಲೋಡಿಂಗ್ ಅನ್ನು ಬೆಂಗಳೂರು ವಿಭಾಗ ನಿರ್ವಹಿಸಿದೆ. ಮಾರ್ಚ್ 2025ರಲ್ಲಿ, ನೈಋತ್ಯ ರೈಲ್ವೆ ತನ್ನ ಅತ್ಯಧಿಕ ಮಾಸಿಕ ಸರಕು ಸಾಗಣೆ 5.024 ಮಿಲಿಯನ್ ಟನ್ ಅನ್ನು ದಾಖಲಿಸಿದ್ದು , ಇದು ಆರ್ಥಿಕ ವರ್ಷದ ಅತ್ಯುತ್ತಮ ಕಾರ್ಯಕ್ಷಮತೆಯಾಗಿದೆ. ಈ ವರ್ಷ, ರೈಲ್ವೆ ವಲಯವು 2.56 ಮಿಲಿಯನ್ ಟನ್ ಖನಿಜ ತೈಲವನ್ನು ಲೋಡ್ ಮಾಡುವ ಮೂಲಕ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಅದೇ ರೀತಿ, ಒಂದೇ ದಿನದಲ್ಲಿ 3,870 ಎಂಟು ಚಕ್ರಗಳ ವಾಹನಗಳನ್ನು ಲೋಡ್ ಮಾಡಿದ್ದು, ಈ ವರ್ಷ ದಾಖಲಾದ ಅತಿ ಹೆಚ್ಚಿನ ಲೋಡ್ ಆಗಿದೆ.

ನೈಋತ್ಯ ರೈಲ್ವೆ ತನ್ನ ಉತ್ತಮ ಕಾರ್ಯಕ್ಷಮತೆಯನ್ನು ಮುಂದುವರಿಸಿಕೊಂಡು 2.26 ಮಿಲಿಯನ್ ಟನ್ ಖನಿಜ ತೈಲ ಲೋಡ್ ಮಾಡಿದೆ, ಇದರಿಂದ 2023-24ರ 2.11 ಮಿಲಿಯನ್ ಟನ್ ಗರಿಷ್ಠ ದಾಖಲೆಯನ್ನು ಮೀರಿಸುವಲ್ಲಿ ಯಶಸ್ವಿಯಾಗಿದೆ. ಉಕ್ಕು ತಯಾರಿಕಾ ಸ್ಥಾವರಗಳಿಗೆ ಕಚ್ಚಾ ವಸ್ತುಗಳ ಲೋಡ್ 1.31 ಮಿಲಿಯನ್ ಟನ್ ತಲುಪಿದ್ದು, ಇದೂ ಸಹ ಹಿಂದಿನ ವರ್ಷ 1.10 ಮಿಲಿಯನ್ ಟನ್ ಆಗಿದ್ದನ್ನು ಮೀರಿಸಿದೆ. ಡೋಲಮೈಟ್ ಲೋಡ್ ಕೂಡ ಗಣನೀಯ ಏರಿಕೆಯನ್ನು ಕಂಡು 0.113 ಮಿಲಿಯನ್ ಟನ್ ತಲುಪಿದ್ದು, ಹಿಂದಿನ ವರ್ಷ 0.052 ಮಿಲಿಯನ್ ಟನ್ ಆಗಿತ್ತು. ಮಾರ್ಚ್ 2025ರಲ್ಲಿ ಕಬ್ಬಿಣದ ಅದಿರು ಲೋಡ್ 2.02 ಮಿಲಿಯನ್ ಟನ್ ಆಗಿದ್ದು, ಇದು ಆರ್ಥಿಕ ವರ್ಷದ ಗರಿಷ್ಠ ದಾಖಲಾಗಿದ್ದು, ಮಾರ್ಚ್ 31, 2025ರಂದು, ನೈಋತ್ಯ ರೈಲ್ವೆ ಒಂದೇ ದಿನದಲ್ಲಿ 29 ರೇಕ್‌ಗಳು ಹಾಗೂ 1,539 ಯುನಿಟ್‌ಗಳನ್ನು ಲೋಡ್ ಮಾಡುವ ಮೂಲಕ ಉಕ್ಕು ಲೋಡಿಂಗ್‌ನಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ.

ಮೂಲಸೌಕರ್ಯ ಅಭಿವೃದ್ಧಿಯ ದೃಷ್ಟಿಯಿಂದಲೂ ನೈಋತ್ಯ ರೈಲ್ವೆ ಮಹತ್ವದ ಪ್ರಗತಿಯನ್ನೂ ಸಾಧಿಸಿದೆ. ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ತನ್ನ ಜಾಲವನ್ನು ಬಲಪಡಿಸುತ್ತಾ, 67.57 ಮಾರ್ಗ ಕಿಲೋಮೀಟರ್‌ಗಳ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಿದೆ. ಇದರಿಂದ ನೈಋತ್ಯ ರೈಲ್ವೆಯ ವ್ಯಾಪ್ತಿಯ 3,692 ಕಿಲೋಮೀಟರ್‌ನ ಪೈಕಿ 3,323 ಕಿಲೋಮೀಟರ್ ವಿದ್ಯುದ್ದೀಕರಣಗೊಂಡಿದೆ. ಅಲ್ಲದೇ, 26.5 ಕಿಲೋಮೀಟರ್ ಹೊಸ ರೈಲ್ವೆ ಮಾರ್ಗಗಳನ್ನು ಯಶಸ್ವಿಯಾಗಿ ನಿರ್ಮಾಣ ಮಾಡಿದ್ದು, 39.1 ಕಿಲೋಮೀಟರ್ ದ್ವಿಪಥ ಮಾರ್ಗವನ್ನೂ ಪೂರ್ಣಗೊಳಿಸಿದೆ . ಈ ಮೂಲಕ ರೈಲು ಸಂಚಾರ ಸಾಮರ್ಥ್ಯ ಮತ್ತು ಸಂಪರ್ಕವನ್ನು ಇನ್ನಷ್ಟು ಸುಧಾರಿಸಿದೆ.

ಸರಕು ಸಾಗಣೆ, ಆದಾಯ ಉತ್ಪಾದನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನೈಋತ್ಯ ರೈಲ್ವೆ ತೋರಿದ ಅಪೂರ್ವ ಸಾಧನೆಗಳು, ದಕ್ಷತೆ ಮತ್ತು ಸೇವಾ ಗುಣಮಟ್ಟದಲ್ಲಿ ಈ ವಲಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಈ ಸಾಧನೆಗಳೊಂದಿಗೆ, ನೈಋತ್ಯ ರೈಲ್ವೆ ಸರಕು ಹಾಗೂ ಪ್ರಯಾಣಿಕರ ಸೇವೆಗಳಲ್ಲಿ ತನ್ನ ಸೇವಾ ಮಟ್ಟವನ್ನು ಇನ್ನಷ್ಟು ಬಲಪಡಿಸುತ್ತಾ, ಭವಿಷ್ಯದ ಪ್ರಗತಿಗಾಗಿ ಉತ್ತಮ ಸಂಪರ್ಕ ಮತ್ತು ತಡೆರಹಿತ ಕಾರ್ಯಾಚರಣೆಯನ್ನು ಖಾತ್ರಿಪಡಿಸುತ್ತಿದೆ.

ಪ್ರಧಾನ ವ್ಯವಸ್ಥಾಪಕರಾದ ಶ್ರೀ ಮುಕುಲ್ ಸರನ್ ಮಾಥುರ್ ಅವರು ನೈಋತ್ಯ ರೈಲ್ವೆಯ ಉದ್ಯೋಗಿಗಳನ್ನು ಅವರ ಪ್ರಮುಖ ಕ್ಷೇತ್ರಗಳಲ್ಲಿನ ಅತ್ಯುತ್ತಮ ಸಾಧನೆಗಾಗಿ ಅಭಿನಂದಿಸಿದ್ದಾರೆ. ಅವರು ರೈಲ್ವೆಯ ಸೇವೆಯಲ್ಲಿ ಸುರಕ್ಷತೆಯನ್ನು ಅಗ್ರಗಣ್ಯ ಆದ್ಯತೆಯಾಗಿ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದು, ಮುಂದಿನ ವರ್ಷ ನೈಋತ್ಯ ರೈಲ್ವೆ ಇನ್ನಷ್ಟು ಉತ್ತಮ ಕಾರ್ಯಕ್ಷಮತೆಯನ್ನು ಸಾಧಿಸಲು ಎಲ್ಲರಿಗೂ ಪ್ರೋತ್ಸಾಹ ನೀಡಿವಂತೆ ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *