KARNATAKA
ಸೌಜನ್ಯ ಪ್ರಕರಣದ ಕುರಿತ ವಿಡಿಯೋ – ಯೂಟ್ಯೂಬರ್ ಸಮೀರ್ ಗೆ ಪೊಲೀಸ್ ನೊಟೀಸ್

ಬೆಂಗಳೂರು ಮಾರ್ಚ್ 06: ಬೆಳ್ತಂಗಡಿಯಲ್ಲಿ ನಡೆದ ವಿಧ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವಿಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಗೆ ಬಳ್ಳಾರಿಯಿಂದ ಪೊಲೀಸರು ಆಗಮಿಸಿ ಅರೆಸ್ಟ್ ಮಾಡಲು ಮುಂದಾಗಿದ್ದರು ಎಂದು ಹೇಳಲಾಗಿದ್ದು, ವಿಚಾರಣೆಗೆ ಸಹಕರಿಸೋದಾಗಿ ಭರವಸೆ ನೀಡಿದ್ಮೇಲೆ ನೋಟಿಸ್ ನೀಡಿ ಹಿಂದಿರುಗಿದ್ದಾರೆ ಎಂದು ಫೇಸ್‌ಬುಕ್ ಲೈವ್‌ನಲ್ಲಿ ಸಮೀರ್ ಹೇಳಿದ್ದಾರೆ.

ಬೆಳ್ತಂಗಡಿಯಲ್ಲಿ ವಿಧ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ಯೂಟ್ಯೂಬ್ ನಲ್ಲಿ ವಿಡಿಯೋ ಒಂದನ್ನು ಸಮೀರ್ ಮಾಡಿದ್ದರು, ಸದ್ಯ ಆ ವಿಡಿಯೋ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಕೋಟಿಗಟ್ಟಲೇ ವೀಕ್ಷಣೆ ಪಡೆದುಕೊಂಡಿರುವ ಈ ವಿಡಿಯೋದಿಂದಾಗಿ ಸಮೀರ್ ಗೆ ಸಂಕಷ್ಟ ಎದುರಾಗಿದೆ. ಈ ಬಗ್ಗೆ ವಿಡಿಯೋ ಮಾಡಿ ಹೇಳಿರುವ ಅವರು ಈ ವಿಡಿಯೋಗೆ ಒಂದು ಮಿಲಿಯನ್ ವ್ಯೂವ್ ಪಡೆದುಕೊಳ್ಳುತ್ತಲೇ ನನಗೆ ಭಯ ಶುರುವಾಯ್ತು. ಕೆಲವರು ನನ್ನ ವೈಯಕ್ತಿಕ ಮಾಹಿತಿ ಮತ್ತು ನನ್ನ ವಿಳಾಸವನ್ನು ಸೋಶಿಯಲ್ ಮೀಡಿಯದಲ್ಲಿ ಲೀಕ್ ಮಾಡಲಾಯ್ತು. ನಂತರ ನನಗೆ ಹಲವು ಜೀವಬೆದರಿಕೆ ಕರೆಗಳ ಬರಲು ಆರಂಭಿಸಿದವು. ಪೊಲೀಸರ ಬಳಿ ಹೋದ್ರೆ ರಕ್ಷಣೆ ಸಿಗುತ್ತೆ ಎಂಬ ನಂಬಿಕೆಯೂ ನನಗಿರಲಿಲ್ಲ. ನಂತರ ನಾನು ಕೂಡಲೇ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ತಂಡದ ಸದಸ್ಯರನ್ನು ಸಂಪರ್ಕಿಸಿದೆ. ನಂತರ ಅವರೇ ವಕೀಲರ ಸಹಾಯವನ್ನು ನೀಡಿದ್ದಾರೆ ಎಂದು ಸಮೀರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ನನಗೆ ಜೀವ ಬೆದರಿಕೆ ಬರುತ್ತಿರುವ ಹಿನ್ನೆಲೆ ಸೌಜನ್ಯ ಪ್ರಕರಣದ ಮತ್ತೋರ್ವ ಹೋರಾಟಗಾರ ಗಿರಿಶ್ ಮಟ್ಟನವರ್ ಅವರನ್ನು ಮನೆಗೆ ಬರುವಂತೆ ಹೇಳುವಂತೆ ಮನವಿ ಮಾಡಿಕೊಂಡೆ. ಗಿರೀಶ್ ಮಟ್ಟನವರ್ ಮನೆಗೆ ಬಂದ ಸಂದರ್ಧದಲ್ಲಿಯೇ ಪೊಲೀಸರು ನಮ್ಮ ಮನೆಗೆ ಬಂದರು ಎಂದು ಸಮೀರ್ ಎಂಡಿ ಹೇಳಿದ್ದಾರೆ.

ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿರುವ ಗಿರೀಶ್ ಮಟ್ಟನವರ್, ಸಮೀರ್ ತಮ್ಮ ವಿಡಿಯೋದಲ್ಲಿ ಯಾರ ಹೆಸರನ್ನು ಬಳಸಿಲ್ಲ. ಇನ್ನು ದೇವಸ್ಥಾನದ ಕುರಿತು ಯಾವುದೇ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿಲ್ಲ. ಸುಪ್ರೀಂಕೋರ್ಟ್‌ಗೆ ಅವರೇ ಬರೆದುಕೊಟ್ಟಂತಹ ಹೇಳಿಕೆಯನ್ನು ಸಮೀರ್ ತಮ್ಮ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ. ಸೌಜನ್ಯಳನ್ನು ನಿಮ್ಮ ಮನೆ ಮಗಳು ಎಂದು ತಿಳಿದುಕೊಳ್ಳಿ ಎಂದು ಮನವಿ ಮಾಡಿಕೊಡರು. ಸಮೀರ್ ಅವರನ್ನು ಬಂಧಿಸಬೇಕು ಎಂಬ ಉದ್ದೇಶದಿಂದಲೇ ಪೊಲೀಸರು ಬಳ್ಳಾರಿಯಿಂದ ಆಗಮಿಸಿದ್ದರು. ಬಳ್ಳಾರಿ ಕೌಲ್ ಬಜಾರ್ ಠಾಣೆಯ ಅಧಿಕಾರಿಗಳು, ಬಳ್ಳಾರಿ ಎಸ್‌ಪಿ, ಬೆಂಗಳೂರು ಗ್ರಾಮಾಂತರ ಎಸ್‌ಪಿ ಮತ್ತು ಇಲ್ಲಿಯ ಸ್ಥಳೀಯ ಆವಲಹಳ್ಳಿಯ ಪೊಲೀಸರೊಂದಿಗೂ ನಾವು ಮಾತನಾಡಿದ್ದೇವೆ. ತನಿಖೆಗೆ ಸಹಕರಿಸೋದಾಗಿ ಹೇಳಿದ್ಮೇಲೆ ನೋಟಿಸ್ ನೀಡಿ ಹಿಂದಿರುಗಿದ್ದಾರೆ. ತನಿಖೆಯಿಂದ ತಪ್ಪಿಸಿಕೊಳ್ಳುವ ಮಾತೇ ಇಲ್ಲ. ತನಿಖೆಗೆ ಸಮೀರ್ ಬರುತ್ತಾನೆ ಎಂದು ಹೇಳಿದ್ದೇವೆ. ನಮ್ಮ ಮಾತನ್ನು ಒಪ್ಪಿಕೊಂಡಿರೋದಕ್ಕೆ ಪೊಲೀಸರಿಗೆ ಧನ್ಯವಾದ ಹೇಳುತ್ತೇವೆ ಎಂದಿದ್ದಾರೆ.