Connect with us

DAKSHINA KANNADA

ಸೌಜನ್ಯ ಪ್ರಕರಣ – ಯೂಟ್ಯೂಬರ್‌ ಸಮೀರ್‌ ಗೆ ನೊಟೀಸ್ ಕೊಟ್ಟ ಪೊಲೀಸರನ್ನ ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಬೆಂಗಳೂರು ಮಾರ್ಚ್ 07: ಬೆಳ್ತಂಗಡಿಯಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ ವಿಡಿಯೋ ಮಾಡಿದ್ದ ಯೂಟ್ಯೂಬರ್‌ ಸಮೀರ್‌ ಎಂಡಿ ಗೆ ವಿಚಾರಣೆಗೆ ಹಾಜರಾಗುವಂತೆ ಬಳ್ಳಾರಿ ಪೊಲೀಸರು ರಾತ್ರೊರಾತ್ರಿ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅಲ್ಲದೆ ಪೊಲೀಸರ ಕ್ರಮವನ್ನು ಹೈಕೋರ್ಟ್ ಕಟುವಾಗಿ ಟೀಕಿಸಿದೆ. ಬಳ್ಳಾರಿ ಪೊಲೀಸರು ಮಾರ್ಚ್ 5ರ ರಾತ್ರಿ ನೋಟಿಸ್‌ ಜಾರಿಗೊಳಿಸಿ, ಗುರುವಾರ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಬಿಎನ್‌ಎಸ್‌ಎಸ್‌ ಸೆಕ್ಷನ್‌ 35(3) ಅಡಿ ನೋಟಿಸ್‌ ನೀಡಿರುವುದನ್ನು ವಜಾ ಮಾಡುವಂತೆ ಕೋರಿ ಬೆಂಗಳೂರಿನ ಸಮೀರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ಪೀಠವು “ವಿಚಾರಣೆಗೆ ಹಾಜರಾಗುವಂತೆ ಬಿಎನ್‌ಎಸ್‌ಎಸ್‌ ಸೆಕ್ಷನ್‌ 35(3) ಅಡಿ ನೋಟಿಸ್‌ ಜಾರಿ ಮಾಡಿರುವುದನ್ನು ಸಮೀರ್‌ ಪ್ರಶ್ನಿಸಿದ್ದು, 30.12.2024ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ವಿರುದ್ಧವಾಗಿ ಬಳ್ಳಾರಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ಸ್ಥಾಪಿತ ಕಾನೂನಿನ ಪ್ರಕಾರ ನೋಟಿಸ್‌ ಜೊತೆಗೆ ಎಫ್‌ಐಆರ್‌ ಪ್ರತಿ ಲಗತ್ತಿಸಬೇಕು. ಇದನ್ನು ಉಲ್ಲಂಘಿಸಲಾಗಿದೆ. ಹೀಗಾಗಿ, ಮುಂದಿನ ವಿಚಾರಣೆವರೆಗೆ ನೋಟಿಸ್‌ಗೆ ತಡೆಯಾಜ್ಞೆ ನೀಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದ್ದು, ವಿಚಾರಣೆಯನ್ನು ಮಾರ್ಚ್‌ 12ಕ್ಕೆ ಮುಂದೂಡಿದೆ.


ಅರ್ಜಿದಾರರ ಪರ ವಕೀಲ ಎ ವೇಲನ್‌ ಅವರು “ಸಮೀರ್‌ ಯೂಟ್ಯೂಬರ್‌ ಆಗಿದ್ದು, ಸೌಜನ್ಯ ಕೊಲೆಗೆ ಸಂಬಂಧಿಸಿದಂತೆ ವಿಡಿಯೋ ಮಾಡಿ ಅಪ್‌ಲೋಡ್‌ ಮಾಡಿದ್ದರು. ಇದನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಇದನ್ನು ಆಧರಿಸಿ ಪೊಲೀಸರು ಸ್ವಯಂಪ್ರೇರಿತವಾಗಿ ಬಿಎನ್‌ಎಸ್‌ ಸೆಕ್ಷನ್‌ 299ರ (ಧಾರ್ಮಿಕ ಭಾವನೆಗೆ ಧಕ್ಕೆ) ಅಡಿ ಪ್ರಕರಣ ದಾಖಲಿಸಿದ್ದಾರೆ ಎಂದರು, ಅಲ್ಲದೆ ವಿಡಿಯೋದಲ್ಲಿ ಯಾವುದೇ ಧರ್ಮದ ಬಗ್ಗೆ ಮಾತನಾಡಿಲ್ಲ ಆದರೂ ಪೊಲೀಸರು ಅರೆಸ್ಟ್ ಮಾಡಲಿಕ್ಕೆ ಆಗಮಿಸಿದ್ದರು ಎಂದು ಹೇಳಿದರು.

ಈ ವೇಳೆ ಸರ್ಕಾರದ ಪರ ವಕೀಲರು “ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಮೀರ್‌ಗೆ ನೋಟಿಸ್‌ ಜಾರಿ ಮಾಡಿದ್ದಾರೆ ಎಂದರು. ಇದಕ್ಕೆ ಆಕ್ರೋಶಕೊಂಡ ನ್ಯಾಯಾಧೀಶರು ಇದು ಧರ್ಮಸ್ಥಳದ ಪ್ರಕರಣವೇ? ನೋಟಿಸ್‌ನೊಂದಿಗೆ ಲಗತ್ತಿಸಿರುವ ಎಫ್‌ಐಆರ್‌ ಎಲ್ಲಿ? ಇದೇ ನ್ಯಾಯಾಲಯದ ಆದೇಶ ಆಧರಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಸುತ್ತೋಲೆಯನ್ನು ನೋಡಿಲ್ಲವೇ? ಸುತ್ತೋಲೆಗೆ ವಿರುದ್ಧವಾಗಿ ಈ ವ್ಯಕ್ತಿ (ತನಿಖಾಧಿಕಾರಿ) ಹೇಗೆ ನಡೆದುಕೊಳ್ಳುತ್ತಾರೆ? ಬಿಎನ್‌ಎಸ್‌ ಸೆಕ್ಷನ್‌ 35(3)ರ ಅಡಿ ಯಾರನ್ನಾದರೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರೆ ಎಫ್‌ಐಆರ್‌ ಅನ್ನು ಅದರ ಜೊತೆಗೆ ಲಗತ್ತಿಸಬೇಕು. ಅಂಚೆ ಮೂಲಕ ಕಳುಹಿಸಿ ಅದನ್ನು ಖಾತರಿಪಡಿಸಿರಬೇಕು. ಇದೊಂದೇ ದಾರಿ ಇರುವುದು. ವಾಟ್ಸಾಪ್‌ ಮೂಲಕವೂ ನೋಟಿಸ್‌ ಕಳುಹಿಸುವಂತಿಲ್ಲ. ಅದನ್ನು ತನಿಖಾಧಿಕಾರಿ ಪಾಲಿಸಿದ್ದಾರೆಯೇ? ಇದರಲ್ಲಿ ಅಂಥ ತುರ್ತೇನಿತ್ತು? ಪ್ರಭಾವಿಯಾದವರನ್ನು ಯೂಟ್ಯೂಬರ್‌ ವಿಡಿಯೊದಲ್ಲಿ ಬಿಂಬಿಸಿದ್ದಾರೆ ಎಂದೇ? ಅದು ಬಿಟ್ಟು ಬೇರೇನು ಇರಲು ಸಾಧ್ಯ?” ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿತು.

ಮುಂದುವರಿದು, “ಬುಧವಾರ ರಾತ್ರಿ 10.45 ನೋಟಿಸ್‌ ನೀಡಿ, ಬೆಳಿಗ್ಗೆ ಎದ್ದು ಬನ್ನಿ ಎಂದರೆ ಹೇಗೆ? ಎಫ್‌ಐಆರ್‌ ಇಲ್ಲ, ಏನಿಲ್ಲ? ಇದು ಸುತ್ತೋಲೆಗೆ ವಿರುದ್ಧವಾದ ಕ್ರಮ. ವಿಡಿಯೊದಲ್ಲಿ ಮಾನಹಾನಿಕಾರಕ ಅಂಶಗಳಿವೆ ಎಂದು ಯಾರು ದೂರು ನೀಡಿದ್ದಾರೆ? ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಇದು ಯೂಟ್ಯೂಬರ್‌ ಮೂಲಭೂತ ಹಕ್ಕಿನ ವಿಚಾರವಾಗಿದೆ. ನೋಟಿಸ್‌ ಅನುಪಾಲಿಸಿಲ್ಲ ಎಂದರೆ ಮುಂದಿನ ಹಂತ ಬಂಧನವಾಗುತ್ತದೆ. ನಿಮ್ಮ ಉದ್ದೇಶ ಬಂಧಿಸಬೇಕೆಂಬುದಾಗಿದ್ದು, ಅವರು ವಿಚಾರಣೆಗೆ ಬಂದಿಲ್ಲ ಎಂಬ ಆಧಾರ ಸೃಷ್ಟಿಸುವ ಉದ್ದೇಶವನ್ನು ಹೊಂದಲಾಗಿದೆ. ಕಾನೂನಿನ ಅನ್ವಯ ನೋಟಿಸ್‌ ನೀಡದಿದ್ದರೆ ಸಮೀರ್‌ ವಿಚಾರಣೆಗೆ ಅನುಮತಿಸುವುದಿಲ್ಲ. ಕಾನೂನಿನ ಅನ್ವಯ ನೋಟಿಸ್‌ ನೀಡಿದಿದ್ದರೆ ಅದಕ್ಕೆ ಗೌರವ ನೀಡಲೇಬೇಕಿಲ್ಲ ಎಂಬುದು ಸ್ಥಾಪಿತ ಕಾನೂನಾಗಿದೆ. ಇನ್ನು ಬಂಧಿಸುವ ಪ್ರಶ್ನೆ ಎಲ್ಲಿದೆ? ಬಂಧನ ಇರಲಿ, ಸಮೀರ್‌ ವಿಚಾರಣೆಗೆ ಹಾಜರಾಗಬೇಕು ಎಂದು ನೀವು ಕೇಳುವಂತೆಯೂ ಇಲ್ಲ, ಅದು ದೂರದ ಮಾತು. ಕಾನೂನು ಏನಿದೆ ಎಂಬುದರ ಕುರಿತು ತನಿಖಾಧಿಕಾರಿಗೆ ತಿಳಿ ಹೇಳಬೇಕಿದೆ. ಕಾನೂನಿನ ಬಗ್ಗೆ ಅರಿವಿಲ್ಲದೇ ತನಿಖಾಧಿಕಾರಿ ಅಷ್ಟು ಅವಸರದಲ್ಲಿ ಅಧಿಕಾರ ಝಳಪಿಸಲು ಮುಂದಾಗಿದ್ದಾರೆ” ಎಂದು ಕಿಡಿಕಾರಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *