Connect with us

    FILM

    ಸೋನು ಸೂದ್ ಗೆ ವಿಶ್ವಸಂಸ್ಥೆ ಪ್ರತಿಷ್ಠಿತ ಎಸ್‍ಡಿಜಿ ಪ್ರಶಸ್ತಿ

    ಮುಂಬೈ: ಲಾಕ್‍ಡೌನ್ ಸಮಯದಲ್ಲಿ ಬಾಲಿವುಡ್ ನಟ ಸೋನು ಸೂದ್ ಅಪಾರ ಜನರಿಗೆ ಸಹಾಯ ಮಾಡಿದ್ದಾರೆ. ಇಂದಿಗೂ ತಮ್ಮ ಬಳಿ ಸಹಾಯ ಕೇಳುವ ಮಂದಿಗೆ ಕೂಡಲೇ ಸ್ಪಂದಿಸುತ್ತಿದ್ದಾರೆ. ಹೀಗಾಗಿ ಅವರ ಲೋಕೋಪಕಾರಿ ಕೆಲಸಕ್ಕಾಗಿ ಅವರಿಗೆ ವಿಶ್ವಸಂಸ್ಥೆ ಪ್ರತಿಷ್ಠಿತ ಎಸ್‍ಡಿಜಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ.

    ಸೋನು ಸೂದ್ ಅವರಿಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‍ಡಿಪಿ)ದ ಪ್ರತಿಷ್ಠಿತ ಎಸ್‍ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿಯನ್ನು ನೀಡಲಾಗಿದೆ. ಸೋಮವಾರ ಸಂಜೆ ನಡೆದ ಸಮಾರಂಭ ಕಾರ್ಯಕ್ರಮದಲ್ಲಿ ಸೋನ್ ಸೂದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ತಮಗೆ ನೀಡಿದ ಗೌರವದ ಬಗ್ಗೆ ಸೋನು ಸೂದ್ ಸಂತೋಷ ವ್ಯಕ್ತಪಡಿಸಿದ್ದಾರೆ.

    ಯುಎನ್‍ಡಿಪಿ ನನ್ನ ಪ್ರಯತ್ನಗಳಿಗೆ ಸಂಪೂರ್ಣವಾಗಿ ಬೆಂಬಲಿಸಿದೆ. ಇದು ಅಪರೂಪದ ಗೌರವವಾಗಿದೆ. ಯುಎನ್ ಮಾನ್ಯತೆ ಬಹಳ ವಿಶೇಷವಾಗಿದೆ. ನಾನು ಯಾವುದೇ ನಿರೀಕ್ಷೆಗಳಿಲ್ಲದೆ ನನ್ನ ದೇಶವಾಸಿಗಳಿಗೆ ಅಲ್ಪಸ್ವಲ್ಪ ಕಾರ್ಯವನ್ನು ಮಾಡಿದ್ದೇನೆ. ಆದರೆ ಅದನ್ನು ಗುರುತಿಸಿ ಯುಎನ್‍ಡಿಪಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ. ನಿಜಕ್ಕೂ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.

    ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದವರಿಗೆ ಈ ಪ್ರಶಸ್ತಿಯ ನೀಡಿ ಗೌರವಿಸಲಾಗುತ್ತದೆ. ಈ ಹಿಂದೆ ಏಂಜಲೀನಾ ಜೋಲಿ, ಡೇವಿಡ್ ಬೆಕ್ಹ್ಯಾಮ್, ಲಿಯೊನಾರ್ಡೊ ಡಿಕಾಪ್ರಿಯೊ, ಎಮ್ಮಾ ವ್ಯಾಟ್ಸನ್ ಮತ್ತು ಲಿಯಾಮ್ ನೀಸನ್ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದರು.

    ಕೊರೊನಾ ಹಿನ್ನೆಲೆ ಲಾಕ್‍ಡೌನ್ ಮಾಡಿದ ಸಂದರ್ಭದಲ್ಲಿ ಸುಮಾರು 45,000ಕ್ಕೂ ಹೆಚ್ಚು ಜನರಿಗೆ ಆಹಾರ ಮತ್ತು ಆಶ್ರಯ ವ್ಯವಸ್ಥೆಗಳನ್ನು ಒದಗಿಸಿದ್ದರು. ಜೊತೆಗೆ 15,000ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಮನೆಗಳಿಗೆ ತಲುಪಲು ಸಹಾಯ ಮಾಡಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಈ ಮೂಲಕ ತಮ್ಮ ಸ್ವಂತ ಖರ್ಚಿನಲ್ಲಿ ಒಟ್ಟು ಹತ್ತು ಬಸ್‍ಗಳ ವ್ಯವಸ್ಥೆ ಮಾಡಿ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಳುಹಿಸಿಕೊಟ್ಟಿದ್ದರು.

    ಅಷ್ಟೇ ಅಲ್ಲದೇ ಸೋನು ಸೂದ್ ವೈಯಕ್ತಿಕವಾಗಿ ಸೋಶಿಯಲ್ ಮೀಡಿಯಾದ ಮೂಲಕ ಸಹಾಯವನ್ನು ಕೋರಿ ಕಳುಹಿಸಿದ ಕರೆಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿದ್ದರು. ಇದಲ್ಲದೆ ಲಾಕ್‍ಡೌನ್ ಸಮಯದಲ್ಲಿ ತಮ್ಮ ಬಳಿ ಸಹಾಯ ಕೇಳಿದ ಬಡ ಜನರಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದ ಅನೇಕರಿಗೆ ಉದ್ಯೋಗಾವಕಾಶವನ್ನು ನೀಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *