Connect with us

    DAKSHINA KANNADA

    ಮಂಗಳೂರು : ಡಿವೈಎಫ್ಐ ರಾಜ್ಯ ಸಮ್ಮೇಳನದಲ್ಲಿ ಕೆಲವು ಪ್ರಮುಖ ನಿರ್ಣಯಗಳ ಅಂಗೀಕಾರ ..!

    ಮಂಗಳೂರು : ಮಂಗಳೂರಿನಲ್ಲಿ ನಡೆದ ಭಾರತೀಯ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮ್ಮೇಳನದಲ್ಲಿ ಕೆಲವು ಪ್ರಮುಖ ನಿರ್ಣಯಗಳ ಅಂಗೀಕಾರವಾಗಿದೆ.  ಅದರ ಡಿಟೇಲ್ಸ್ ಇಲ್ಲಿದೆ.


    ಉದ್ಯೋಗ ಮೂಲಭೂತ ಹಕ್ಕಿಗಾಗಿ, ಉದ್ಯೋಗ ಸೃಷ್ಟಿಸಲು ಹಾಗೂ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ನಿರ್ಣಯ:

    ರಾಜ್ಯದ 7 ಕೋಟಿ ಜನತೆಗೆ ಜಾರಿಯಾಗುವ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು 7.73 ಲಕ್ಷ ಮಂಜೂರಾದ ಹುದ್ದೆಗಳಿವೆ. ಈ ಪೈಕಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಕೇವಲ 5.20 ಲಕ್ಷ. ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳು 2.80 ಲಕ್ಷದಷ್ಟಿದೆ. ಹಾಗೇಯೇ ಕೇಂದ್ರ ಸರಕಾರದಡಿಯಿರುವ ವಿವಿಧ ಇಲಾಖೆಗಳಲ್ಲಿ 40 ಲಕ್ಷ ಮಂಜೂರಾದ ಹುದೆಗಳಲ್ಲಿ 9.64 ಲಕ್ಷ ಹುದ್ದೆಗಳು ಖಾಲಿಯಿವೆ. ಇದು ಸೇರಿದಂತೆ ದೇಶದಲ್ಲಿ ಒಟ್ಟಾರೆ ಅರವತ್ತು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ 5.1ಕೋಟಿಯಷ್ಟಿದೆ!

    ರಾಜ್ಯದಲ್ಲಿ ವಿದ್ಯಾವಂತ ಯುವಜನತೆ ಉದ್ಯೋಗಕ್ಕಾಗಿ ಪರಿಪಾಟಲು ಪಡುತ್ತಿದ್ದರೆ ಮಾದರಿ ಉದ್ಯೋಗದಾತ ಸಂಸ್ಥೆಯಾದ ಸರ್ಕಾರವು ಅತಿ ಕಡಿಮೆ ವೇತನ ನೀಡುವ ಗುತ್ತಿಗೆ, ಹೊರಗುತ್ತಿಗೆ, ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರನ್ನು, ನೇಮಿಸಿಕೊಂಡು ಸರ್ಕಾರವೇ ಯುವಕರನ್ನು ಶೋಷಿಸುತ್ತಿರುವುದು ಘನಘೋರ ಅನ್ಯಾಯವಾಗಿದೆ. ಮತ್ತೊಂದೆಡೆ, 2016ರಲ್ಲಿ ಸುಪ್ರೀಂಕೋರ್ಟ್ ಆದೇಶವಿದ್ದರೂ ರಾಜ್ಯದಲ್ಲಿ ಗುತ್ತಿಗೆ, ದಿನಗೂಲಿ, ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ಹೊರಗುತ್ತಿಗೆ ಏಜೆನ್ಸಿಗಳು ಶೋಷಣೆ ಮಾಡಲು ಸರ್ಕಾರವೇ ಅವಕಾಶ ನೀಡಿದಂತಾಗಿದೆ.

    2016ರಲ್ಲಿ ಸುಪ್ರೀಂ ಕೋರ್ಟ್ ಆದೇಶವಿತ್ತರೂ ರಾಜ್ಯದಲ್ಲಿ ದಿನಗೂಲಿ, ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ಶೋಷಣೆಗೆ ಒಳಗಾಗುತ್ತಿದ್ದಾರೆ. ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ಸರ್ಕಾರದ ಹುದ್ದೆಗಳು ಇರುವುದಿಲ್ಲ. ಭಾರತದಲ್ಲಿ 1 ಲಕ್ಷಕ್ಕೆ 139 ಸರ್ಕಾರಿ ನೌಕರರು ಕಾರ್ಯನಿರ್ವಹಿಸುತ್ತಿದ್ದರೆ, ಅಮೇರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಕ್ರಮವಾಗಿ ಒಂದು ಲಕ್ಷಕ್ಕೆ 668 ಮತ್ತು 1000 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.

    ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿದವರ ಸಂಖ್ಯೆ ನವೆಂಬರ್ 2020ರಲ್ಲಿ 3ಲಕ್ಷದ 21 ಸಾವಿರ ಇದ್ದು, ರಾಜ್ಯ ಉದ್ಯೋಗ ವಿನಿಮಯ ಕೇಂದ್ರಗಳಿಂದ 3,454, ಉದ್ಯೋಗಾವಕಾಶಗಳನ್ನು ಏಪ್ರಿಲ್ 2020 ರಿಂದ ನವೆಂಬರ್ 2020ರ ಅವಧಿಯಲ್ಲಿ ಕಲ್ಪಿಸಲಾಗಿದೆ. ಆದರೆ ಉದ್ಯೋಗಕ್ಕಾಗಿ ನೋಂದಣಿಯಾಗುತ್ತಿರುವವರ ಸಂಖ್ಯೆಗೆ ಏನೇನು ಸಾಲದಾಗಿದೆ.

    ನವೆಂಬರ್ 2020ರ ಅಂತ್ಯಕ್ಕೆ ಕೌಶಲ್ಯ ಕರ್ನಾಟಕ ಡಾಟ್ ಕಾಮ್ನಲ್ಲಿ ಉದ್ಯೋಗ ಆಕಾಂಕ್ಷಿಗಳ ನೋಂದಣಿಯು (ವಯಸ್ಸು 18 ರಿಂದ 50 ವರ್ಷಗಳು) ರಾಜ್ಯದಲ್ಲಿ ಒಟ್ಟು 10,71,038 (4,36,415 ಮಹಿಳೆಯರು, 6,34,623 ಪುರುಷರು) ನೋಂದಣಿ ಆಗಿದ್ದಾರೆ ಎಂದು ಆರ್ಥಿಕ ಸಮೀಕ್ಷೆ 2020-21ರಲ್ಲಿ ವರದಿ ಮಾಡಲಾಗಿದೆ. ಅವರಲ್ಲಿ 2.5 ಲಕ್ಷ ಪರಿಶಿಷ್ಟ ಜಾತಿ ಮತ್ತು 87,817 ಪರಿಶಿಷ್ಟ ಪಂಗಡ ಹಾಗೂ 11,303 ಅಂಗವಿಕಲರು ನೋಂದಾಯಿಸಿಕೊಂಡಿದ್ದಾರೆ. ಇದು ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.

    ರಾಜ್ಯದಲ್ಲಿ ಪ್ರತಿ ಒಂದು ಸಾವಿರ ಜನರಲ್ಲಿ ಒಟ್ಟಾರೆ 36 ಜನರು ನಿರುದ್ಯೋಗಿಗಳಾಗಿದ್ದರೆ, ನಗರ ಪ್ರದೇಶದಲ್ಲಿ 51 ಜನರು ಮತ್ತು ಗ್ರಾಮೀಣ ಪ್ರದೇಶದಲ್ಲಿ 27 ಜನರು ನಿರುದ್ಯೋಗಿಗಳಾಗಿದ್ದಾರೆ. ಪ್ರತಿ ಸಾವಿರ ಮಹಿಳೆಯರಲ್ಲಿ ಒಟ್ಟಾರೆ 28 ಮಹಿಳೆಯರು ನಿರುದ್ಯೋಗಿಗಳಾಗಿದ್ದರೆ, ನಗರದಲ್ಲಿ 61 ಮತ್ತು ಗ್ರಾಮೀಣದಲ್ಲಿ 14 ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ ಎಂದು 2018-19 ವಾರ್ಷಿಕ ವರದಿ ಗುರುತಿಸಿದೆ.
    ಕರ್ನಾಟಕ ಸರಕಾರವು ಐದು ಗ್ಯಾರಂಟಿಗಳನ್ನು ಘೋಷಿಸಿದ್ದು ಅದರಲ್ಲಿ ಪ್ರಮುಖವಾಗಿ ಯುವಜನರಿಗೆ ಸಂಬಂಧಿಸಿದ ಯುವನಿಧಿ ಗ್ಯಾರಂಟು ಸ್ಕೀಂ ಸ್ವಾಗತಾರ್ಹವಾಗಿದೆಯಾದರೂ, ಅದರಲ್ಲಿ ಕಳೆದ ವರ್ಷ ಪಾಸಾದ ಪದವೀಧರರು ಹಾಗೂ ಡಿಪ್ಲೋಮಾ ಪದವೀಧರರಿಗೆ ಮಾತ್ರ ಕ್ರಮವಾಗಿ ಮಾಸಿಕ ರೂ. 3000 ಹಾಗೂ ರೂ. 1500 ಗಳನ್ನು ನಿಗದಿಗೊಳಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಅಧ್ಯಯನ ಮುಗಿಸಿ ಹತ್ತಾರು ವರ್ಷಗಳಿಂದ ಉದ್ಯೋಗ ಅರಸಿ, ಉದ್ಯೋಗ ಸಿಗದಿರುವ ನೈಜ ನಿರುದ್ಯೋಗಿಗಳನ್ನು ಈ ಯೋಜನೆಗೆ ಒಳಗೊಳಿಸಬೇಕು ಹಾಗೂ ಇವತ್ತಿನ ಬೆಲೆ ಏರಿಕೆಯ ಸಂದರ್ಭದಲ್ಲಿ ಮೂರು ಸಾವಿರ, ಹದಿನೈದು ನೂರು ರೂಪಾಯಿಗಳ ಪುಡಿಗಾಸಿನ ಮೂಗಿಗೆ ತುಪ್ಪ ಸವರುವ ಬದಲಾಗಿ ಮಾಸಿಕ ಕನಿಷ್ಠ ರೂ.12,000/- ಗಳನ್ನು ನೀಡಬೇಕು.

    ಇಂತಹ ಕಠಿಣ ಸಂದರ್ಭದಲ್ಲಿ ರಾಜ್ಯದಲ್ಲಿ ಖಾಲಿ ಇರುವ 2.80 ಲಕ್ಷ ಹುದ್ದೆಗಳನ್ನು ರಾಜ್ಯ ಸರಕಾರ ಭರ್ತಿ ಮಾಡಲು, ಸ್ಥಳೀಯವಾಗಿ ಕೃಷಿ ಪೂರಕ ಉದ್ದಿಮೆ ಸೇರಿದಂತೆ ಕೈಗಾರಿಕೆ-ಉದ್ದಿಮೆಗಳ ಸ್ಥಾಪನೆ ಮಾಡುವ ಮೂಲಕ ಉದ್ಯೋಗ ಸೃಷ್ಠಿಸಲು ಮುಂದಾಗಬೇಕು. ಸೃಷ್ಟಿಯಾಗುವ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆಯನ್ನು ನೀಡಬೇಕು ಅದಕ್ಕಾಗಿ ಸರೋಜಿನಿ ಮಹಿಷಿ ವರದಿಯನ್ನು ರಾಜ್ಯ ಸರಕಾರ ಸಮರ್ಪಕವಾಗಿ ಜಾರಿಗೆ ತರಲು ಒತ್ತಾಯ, ಕಲ್ಯಾಣ ಕರ್ನಾಟಕ ಮಂಡಳಿಯಲ್ಲಿ ಹಾಗೂ ರಾಜ್ಯದ ಬೊಕ್ಕಸದಲ್ಲೂ ಸಾವಿರಾರು ಕೋಟಿ ರೂಪಾಯಿಗಳು ಹಾಗೆಯೇ ಇದೆ. ರಾಜ್ಯದ ನಿರುದ್ಯೋಗಿ ಯುವಜನರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅಗತ್ಯ ಯೋಜನೆಗಳ ಜಾರಿಗಾಗಿ ಈ ಹಣವನ್ನು ಸರಕಾರ ಬಳಸಬೇಕಿದೆ, ಉದ್ಯೋಗ ಕೊಡಿ ಇಲ್ಲವೇ ಮಾಸಿಕ ರೂ. 12,000/- ಗಳನ್ನು ನಿರುದ್ಯೋಗ ಭತ್ಯೆಯನ್ನು ಕೊಡಲು ಒತ್ತಾಯಿಸಿ ಇದಕ್ಕಾಗಿ ರಾಜ್ಯವ್ಯಾಪಿ ಪ್ರಬಲ ಚಳುವಳಿ ಹಾಗೂ ಕಾರ್ಯಕ್ರಮಗಳನ್ನು ರೂಪಿಸಲು ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನವು ನಿರ್ಣಯವನ್ನು ಅಂಗೀಕರಿಸುತ್ತದೆ.

    =============

    ಯುವತಿಯರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸಿ ನಿರ್ಣಯ

    ದೇಶದಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷಾ ವರದಿಯ ಪ್ರಕಾರ ಕರ್ನಾಟಕವು ಮಹಿಳೆಯರಿಗೆ ಸುರಕ್ಷತೆಯನ್ನು ನೀಡುವಲ್ಲಿ ವಿಫಲವಾಗಿದೆ. 44% ವಿವಾಹಿತ ಯುವತಿಯರು ಸೇರಿದಂತೆ ಮಹಿಳೆಯರು ಕೌಟುಂಬಿಕ ದೌರ್ಜನ್ಯವನ್ನು ಅನುಭವಿಸುತ್ತಿದ್ದಾರೆ. ಕೌಟುಂಬಿಕ ದೌರ್ಜನ್ಯ 2015 ರಲ್ಲಿ 20.6% ಇದ್ದರೆ 2019-20 ರವರೆಗೆ ಇದು 24% ಹೆಚ್ಚಾಗಿದೆ. 2019-20 ರಲ್ಲಿ ಕೋವಿಡ್ ಸಂದರ್ಭದಲ್ಲಿ ಶಾಲೆಗಳು ಇಲ್ಲದೆ ಇರುವ ಸಂದರ್ಭದಲ್ಲಿ ಅನೇಕ ಬಾಲ್ಯ ವಿವಾಹಗಳು ನಡೆದಿವೆ. ದೇಶದಲ್ಲಿ ನಡೆದ ಬಾಲ್ಯ ವಿವಾಹಗಳ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯವು ಮೊದಲ ಸ್ಥಾನವನ್ನು ಪಡೆದಿದೆ.

    ಮರ್ಯಾದೆಯ ಹೆಸರಿನಲ್ಲಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳ ಮತ್ತು ಅವಳ ಆಯ್ಕೆಯ ಹಕ್ಕುಗಳನ್ನ ಕೊಲ್ಲಲಾಗುತ್ತಿದೆ. ದಿನದಿಂದ ದಿನಕ್ಕೆ ಯುವತಿಯರ ಮೇಲಿನ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಲೇ ಇವೆ. ಪ್ರತಿ ತಿಂಗಳು ಸರಿಸುಮಾರು 40 ರಿಂದ 45 ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರದ ಪ್ರಕರಣಗಳು ಕರ್ನಾಟಕದಲ್ಲಿ ಘಟಿಸುತ್ತಿವೆ. ಎನ್ಸಿಆರ್ಬಿ ಪ್ರಕಾರ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದೇಶದ 53 ನಗರಗಳ ಪೈಕಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ನೋಡಿದಾಗ ಕರ್ನಾಟಕವು ಐದನೇ ಸ್ಥಾನವನ್ನು ಪಡೆದುಕೊಂಡಿದೆ.

    ಲಾಕ್ ಡೌನ್ ಅವಧಿಯಲ್ಲಿ ಮಕ್ಕಳು ಮಹಿಳೆಯರ ಮೇಲಿನ ದೌರ್ಜನ್ಯಗಳು ಕಡಿಮೆಯಾಗಿದ್ದವು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿರುವುದು ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ. ಪ್ರಭುತ್ವದ ಕೋಮುವಾದ ಮತ್ತು ಕಾರ್ಪೋರೇಟ್ ಪರವಾದ ನೀತಿಗಳು ಮಹಿಳೆಯರ ಮೇಲೆ ಮತ್ತು ಯುವಜನರ ಮೇಲೆ ಸಾಮಾಜಿಕ ಹಾಗೂ ಆರ್ಥಿಕ ದೌರ್ಜನ್ಯಗಳನ್ನು ಹಲವು ಪಟ್ಟು ಹೆಚ್ಚು ಮಾಡಿದೆ. ಇಂತಹ ದೌರ್ಜನ್ಯ ಅತ್ಯಾಚಾರ ಪ್ರಕರಣಗಳ ಮಧ್ಯೆಯೂ ಕೋಮು ರಾಜಕೀಯಕ್ಕೆ ಸಂಘ ಪರಿವಾರದ ಶಕ್ತಿಗಳು ಮುಂದಾಗುತ್ತಿವೆ ಎಂಬುದು ಅವರ ಕೀಳು ಮಟ್ಟದ ರಾಜಕೀಯವನ್ನು ತೋರಿಸುತ್ತದೆ. ಇವೆಲ್ಲವೂ ರಾಜ್ಯದಲ್ಲಿ ಮಹಿಳೆಯರ ಯುವಜನರ ಅಸುರಕ್ಷತೆಗೆ ಹಿಡಿದ ಕನ್ನಡಿ ಆಗಿವೆ.

    ಈ ಹಿನ್ನೆಲೆಯಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) 12ನೇ ಕರ್ನಾಟಕ ರಾಜ್ಯ ಸಮ್ಮೇಳನವು ಯುವತಿಯರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಸರಕಾರ ಪರಿಹರಿಸಲು ಒತ್ತಾಯಿಸಿ ನಿರ್ಣಯನ್ನು ತೆಗೆದುಕೊಳ್ಳುತ್ತಿದೆ.

    1. ನ್ಯಾಯಮೂರ್ತಿ ವರ್ಮಾ ಕಮಿಟಿಯ ಶಿಫಾರಸುಗಳನ್ನು ಜಾರಿಗೆ ತರಬೇಕು.
    2. ರಾಜ್ಯದಲ್ಲಿ ಮರ್ಯಾದೆಯ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆಗಳ ಬಗ್ಗೆ ನಿಷ್ಪಕ್ಷಪಾತವಾದ ತನಿಖೆಯನ್ನು ನಡೆಸಬೇಕು. ಈ ಹತ್ಯೆಗಳನ್ನು ನಿಷೇಧಿಸುವ ಕಾನೂನನ್ನು ತರಬೇಕು. ತಪ್ಪಿತಸ್ತರಿಗೆ ಕಠಿಣವಾದ ಶಿಕ್ಷೆ ವಿಧಿಸಬೇಕು. ಶೀಘ್ರಗತಿಯಲ್ಲಿ ನ್ಯಾಯ ದೊರಕಿಸಲು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ತ್ವರಿತ ನ್ಯಾಯಾಲಯಗಳನ್ನು ಅಗತ್ಯ ಸಂಖ್ಯೆಯಲ್ಲಿ ಹೆಚ್ಚಿಸಬೇಕು.
    3. ಸ್ತ್ರೀ ಭ್ರೂಣ ಹತ್ಯೆ ತಡೆಗೆ ಪಿಸಿ ಅಂಡ್ ಪಿಎನ್ಡಿಟಿ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರಬೇಕು.
    4. ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು.
    5. ಯುವಜನರ ಆಯ್ಕೆಯ ಹಕ್ಕನ್ನು ರಕ್ಷಿಸುವಲ್ಲಿ ಸರ್ಕಾರ ಮುಂದಾಗಬೇಕು.
    6. ಮಹಿಳೆಯರು ಮತ್ತು ಯುವತಿಯರು ಕೆಲಸ ಮಾಡುವಂತಹ ಸ್ಥಳಗಳಲ್ಲಿ ಆಂತರಿಕ ದೂರು ಸಮಿತಿಗಳನ್ನು ರಚಿಸಿ, ಸುರಕ್ಷತೆಯನ್ನು ಖಾತ್ರಿಗೊಳಿಸಬೇಕು.
    7. ಸಂವಿಧಾನಬದ್ಧ ಆಯ್ಕೆ ಹಕ್ಕುಗಳ ಕುರಿತು ಪ್ರಚಾರ ನೀಡಬೇಕು.
    8. ಮಹಿಳೆಯರಿಗೆ, ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಘನತೆಯ ಬದುಕನ್ನು ಖಾತ್ರಿ ಗೊಳಿಸಬೇಕು.
    9. ಯುವತಿಯರು ಮತ್ತು ಮಹಿಳೆಯರ ಸುರಕ್ಷತೆಯು ಸರ್ಕಾರದ ಆಧ್ಯ ಕರ್ತವ್ಯವಾಗಬೇಕು.
    10. ದೌರ್ಜನ್ಯಗಳ ತಡೆಗಾಗಿ ಉಗ್ರಪ್ಪ ಸಮಿತಿಯ ಶಿಘಾರಸ್ಸುಗಳನ್ನು ಜಾರಿಗೊಳಿಸಬೇಕು.
    11. ನೇಮಕಾತಿ ವಯೋಮಿತಿಯೊಳಗಿರುವ ಪ್ರತಿಯೊಬ್ಬ ನಿರುದ್ಯೋಗಿ ಯುವತಿಯರಿಗೆ ನಿರುದ್ಯೋಗ ಭತ್ಯೆ ನೀಡಬೇಕು.

    ======================

    ಮೀಸಲಾತಿಯ ಸಮರ್ಪಕವಾಗಿ ಅನುಷ್ಠಾನಕ್ಕಾಗಿ ಹಾಗೂ ಖಾಸಗೀ ರಂಗದಲ್ಲಿ ಮೀಸಲಾತಿ ಜಾರಿಗೆ ಒತ್ತಾಯಿಸಿ ನಿರ್ಣಯ

    ಶತ ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಸಮಾನತೆಯನ್ನು ಅನುಭವಿಸುತ್ತಲೇ ಬಂದಿದ್ದಾರೆ. ಈ ಎಲ್ಲ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ ಗುರಿ. ಈ ಗುರಿಯನ್ನು ಸಾಧಿಸಲು ಮೀಸಲಾತಿ ಒಂದು ತಾತ್ಕಾಲಿಕ ಮಾರ್ಗ ಮಾತ್ರ.

    ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸಮಸ್ಯೆ ಮತ್ತು ಸವಾಲುಗಳು ಎದುರಾಗಿವೆ. ಒಳ ಮೀಸಲಾತಿ, ಕೆನಪದರ, ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗೀ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಸಮಸ್ಯೆಗಳಿಗೆ ವಾಲುಗಳಿಗೆ ಮತ್ತು ಪ್ರಶ್ನೆಗಳಿಗೆ ಸ್ಪಷ್ಟವಾದ ನೀತಿ ನಮ್ಮ ಸರ್ಕಾರಗಳ ಮುಂದೆ ಇಲ್ಲ.

    ದೇಶದಲ್ಲಿ ದಿನೇ ದಿನೇ ನಿರುದ್ಯೋಗ ಸಮಸ್ಯೆಯು ಹೆಚ್ಚುತ್ತಿದೆ. ಕೃಷಿ ಬಿಕ್ಕಟ್ಟಿನ ಪರಿಣಾಮವಾಗಿ ಗ್ರಾಮಾಂತರ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗಿದೆ. ಕೈಗಾರಿಕಾ ವಲಯದಲ್ಲಿಯೂ ನಿರುದ್ಯೋಗ ಹೆಚ್ಚುತ್ತಲೇ ಇದೆ. ಇದರಿಂದಾಗಿ ದಲಿತ ಸಮುದಾಯದ ಯುವಜನತೆ ತೀರಾ ಸಂಕಷ್ಠದ ಸ್ಥಿತಿಯನ್ನು ಅನುಭವಿಸುವಂತಾಗಿದೆ.

    ಸರ್ಕಾರದ ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿ 2016 ರಲ್ಲಿ ಸರ್ಕಾರದ ಮಂಜೂರಾದ ಒಟ್ಟು ಹುದ್ದೆಗಳಲ್ಲಿ ಪರಿಶಿಷ್ಠ ಜಾತಿ ಪ್ರಾತಿನಿಧ್ಯವು ಶೇ. 10.65 ರಷ್ಟಿದ್ದರೆ, ಪರಿಶಿಷ್ಠ ಪಂಗಡದ ಪ್ರಾತಿನಿಧ್ಯವು ಶೇ. 2.92 ರಷ್ಟಿದೆ. ಅಂದರೆ ಇಲ್ಲಿ ಅಗತ್ಯವಿರುವಷ್ಟು ಪ್ರಾತಿನಿಧ್ಯ ಪರಿಶಿಷ್ಟರಿಗೆ ದೊರೆತಿಲ್ಲವೆಂಬುದು ಖಾತ್ರಿಯಾಗಿದೆ. ಪರಿಶಿಷ್ಠ ಜಾತಿ ಯಲ್ಲಿ ಮೀಸಲಾತಿ ಕೊರತೆಯು ಶೇ. 4.35 ರಷ್ಟಿದ್ದರೆ ಪರಿಶಿಷ್ಠ ಪಂಗಡದಲ್ಲಿ ಕೊರತೆಯು ಶೇ. 0.07 ರಷ್ಟಿದೆ. ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಹಲವು ವರ್ಷಗಳಿಂದ ತುಂಬಿಕೊಳ್ಳಲಾಗಿಲ್ಲ.

    ಸರ್ಕಾರಿ ಮತ್ತು ಸಾರ್ವಜನಿಕ ವಲಯಗಳ ಉದ್ಯೋಗಗಳಲ್ಲಿ ಪ.ಜಾ ಮತ್ತು ಪ. ಪಂ ಗಳಿಗೆ ಮೀಸಲಾತಿ ಅವಕಾಶವಿದೆ. ಆದರೆ ಅಸಂಘಟಿತ ವಲಯದಲ್ಲಿ ಮೀಸಲಾತಿ ಸೌಲಭ್ಯವು ದೊರೆಯುತ್ತಿಲ್ಲ. ನಮ್ಮ ಆರ್ಥಿಕತೆಯಲ್ಲಿ ಬಹುಪಾಲು ದುಡಿಮೆಗಾರರು ಅಸಂಘಟಿತ ವಲಯವನ್ನು ಅವಲಂಬಿಸಿಕೊಂಡಿದ್ದಾರೆ. ಅರ್ಜುನ್ ಸೇನ್ ಗುಪ್ತ ವರದಿಯ ಪ್ರಕಾರ 1999-2000 ದಲ್ಲಿನ ಒಟ್ಟು ಕಾರ್ಮಿಕರಲ್ಲಿ ಅಸಂಘಟಿತ ವಲಯದ ಕಾರ್ಮಿಕರ ಪ್ರಮಾಣ ಶೇ.91.2 ರಷ್ಟಿದೆ 2004-05ರಲ್ಲಿ ಅವರ ಪ್ರಮಾಣ ಶೇ. 92.4ರಷ್ಟಿತ್ತು. ಇಂದು ಅದರ ಪ್ರಮಾಣ ಕಡಿಮೆಯಾಗಿದೆ ಎಂದರೂ ಅದು ಶೇ. 75ಕ್ಕಿಂತ ಕಡಿಮೆಯಾಗಿಲ್ಲ.

    ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳಿಂದಾಗಿ ಸರ್ಕಾರಿ ಮತ್ತು ಸರ್ಕಾರದ ಸ್ವಾಧೀನದಲ್ಲಿರುವ ಸಾರ್ವಜನಿಕ ಉದ್ದಿಮೆಗಳಲ್ಲಿನ ಖಾಯಂ ಉದ್ಯೋಗದ ಜಾಗಕ್ಕೆ ಗುತ್ತಿಗೆ, ಹೊರಗುತ್ತಗೆ, ದಿನಗೂಲಿ, ಅತಿಥಿ ಶಿಕ್ಷಕರು, ಉಪನ್ಯಾಸಕರುಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಮೀಸಲಾತಿ ವ್ಯವಸ್ಥೆಯನ್ನೇ ಅಪ್ರಸ್ತುತವಾಗಿಸುವ ಹುನ್ನಾರ ನಡೆಯುತ್ತಿದೆ.

    ಒಟ್ಟರೆ ಈ ಎಲ್ಲಾ ಬೆಳವಣಿಗೆಗಳಿಂದಾಗಿ ದಲಿತ ಸಮುದಾಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ನಿರಂತರವಾಗಿ ಶೋಷಣೆಗೊಳಗಾದ ಈ ಸಮುದಾಯ ಮತ್ತಷ್ಠು ದಮನಕ್ಕೊಳಗಾಗುತ್ತಿದೆ. ಆದ್ದರಿಂದ ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನವು ಕರ್ನಾಟಕದಲ್ಲಿ ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು, ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಅಲ್ಲದೇ ಖಾಸಗೀ ವಲಯದಲ್ಲಿಯೂ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸುತ್ತದೆ.

    ==============

    ಜಾತಿವಾದ, ಕೋಮುವಾದ ವಿರೋಧಿಸಿ ನಿರ್ಣಯ

    ಭಾರತದ ಸಮಾಜವು ಜಾತಿ ಜಾತಿಗಳಾಗಿ, ಮತ ಪಂತಗಳಾಗಿ ಒಡೆದು ಹೋಗಿರುವ ಸಮಾಜವಾಗಿದೆ. ಈ ಎರಡೂ ಪದ್ಧತಿಗಳು ದೇಶದ ಜನತೆಯನ್ನು ವಿಭಜಿಸುವ ಪದ್ಧತಿಗಳಾಗಿವೆ. ಜಾತೀವಾದವು ಸಮಾಜದಲ್ಲಿ ಅಸಮಾನತೆಯನ್ನು ಪ್ರತಿಪಾದಿಸುತ್ತಾ ಬಂದಿರುವ ಸಾಮಾಜಿಕ ಅನಿಷ್ಠವಾಗಿದೆ. ಕೋಮುವಾದವು ವಿಭಿನ್ನ ಮತ ಪಂಥಗಳ ಜನರ ನಡುವೆ ದ್ವೇಷವನ್ನು ಸಾಧಿಸುತ್ತಾ ಬಂದಿದೆ.

    ಆನತೆಯ ನಡುವೆ ತಾರತಮ್ಯ, ಅಸಮಾನತೆಯನ್ನು ಪ್ರತಿಪಾದಿಸುವ ಶ್ರೇಣೀಕೃತ ಸಮಾಜ ವ್ಯವಸ್ಥೆ ಇತಿಹಾಸ ಪೂರ್ವ ಕಾಲದಲ್ಲಿ ಅಸ್ತಿತ್ವದಲ್ಲಿ ಇರಲಿಲ್ಲ. ಅಂದು ಜಾತಿಗಳಿರಲಿಲ್ಲ. ಅಂದಿನ ಸಮಾಜ ಒಂದು ಬುಡಕಟ್ಟು ಸಮಾಜವಾಗಿತ್ತು. ಅವರ ನಡುವೆ ಮೇಲು-ಕೀಳು ಎಂಬ ತಾರತಮ್ಯ ಇರಲಿಲ್ಲ. ಎಲ್ಲರು ಪರಸ್ಪರ ಸಮಾನರಾಗಿದ್ದರು. ಅಮದು ಒಂದು ಬಗೆಯ ಸಮತಾ ಸಮಾಜ ಅಸ್ತಿತ್ವದಲ್ಲಿತ್ತು. ಶ್ರಮ ವಿಭಜನೆಯ ಆಧಾರದಲ್ಲಿ ತಾರತಮ್ಯ ಮಾಡುವ ಪದ್ಧತಿ ಆರಂಬವಾಯಿತು. ಹುಟ್ಟಿನ ಆಧಾರದಲ್ಲಿ ತಾರತಮ್ಯ ಮಾಡುವ ಪದ್ಧತಿಯು ಆರಂಬವಾಯಿತು. ಈ ಅಮಾನವೀಯ ಜಾತಿ ಪದ್ಧತಿ ಒಂದು ದಮನಕಾರಿ ಸಮಾಜ ಪದ್ಧತಿಯಾಗಿ ಭಾರತ ಉಪ ಖಂಡದಲ್ಲಿ ಮಾತ್ರ ಮುಂದುವರೆದಿರುವ ಅನಿಷ್ಠ ಪದ್ಧತಿಯಾಗಿದೆ.

    ಆಸ್ತಿಯ ಉಗಮದೊಂದಿಗೆ ಜಾತಿ ಪದ್ಧತಿ ಬೆಳೆದು ಬಂದಿತು. ಮನಸ್ಮøತಿ ಮೊದಲಾದ ಧಾರ್ಮಿಕ ಗ್ರಂಥಗಳಿಂದಾಗಿ ಈ ಅನಿಷ್ಠ ಪದ್ದತಿಗೆ ಧಾರ್ಮಿಕ ಸಮರ್ಥನೆ ನೀಡಲಾಯಿತು. ಬುಡಕಟ್ಟಿನ ನಡುವೆ ಇದ್ದ ಸಮಾನತೆಯು ಕ್ರಮೇನ ಮಾಯವಾಯಿತು. ಕೃಷಿಯ ಬೆಳವಣಿಗೆಯೊಂದಿಗೆ ಜಾತಿಗಳು ಹುಟ್ಟಿಕೊಂಡವು. ಆಸ್ತಿಯ ಒಡೆತನ ಹೊಂದಿದವರು ಮೇಲ್ಜಾತಿಗಳಿಗೆ ಸೇರಿದವರಾದರು. ಅವರ ಹಕ್ಕು ಅನುವಂಶಿಕವಾಯಿತು. ಆಸ್ತಿಯ ಹಕ್ಕು ನಿರಾಕರಿಸ್ಲಪಟ್ಟವರು ಕೆಳ ಜಾತಿಗಳಿಗೆ ಸೆರಿದ ಅಸ್ಪೃಶ್ಯರೆನಿಸಿಕೊಂಡರು. ಪೌರೋಹಿತ್ಯ, ಕೃಷಿ, ಪಶುಪಾಲನೆ, ಯುದ್ಧವಿದ್ಯೆ, ವ್ಯಾಪಾರ ಮುಂತಾದ ವೃತ್ತಿಗಳು ವಂಸ ಪರಂಪರಾಗತವಾದವು. ಕೆಳ ಜಾತಿಗಳಿಗೆ ಸೇರಿದವರು ಗುಲಾಮರಂತೆ, ಕೀಳು ಮಟ್ಟದ ವೃತ್ತಿಗಳನ್ನು ಮಾಡುತ್ತಾ ಜೀವನ ನಡೆಸುವವರು ಅಸ್ಪೃಶ್ಯರು. ಈ ದಮನಕಾರಿ ಸಮಾಜ ವ್ಯವಸ್ಥೆಯು ಒಂದಲ್ಲಾ ಒಂದು ರೀತಿಯಲ್ಲಿ ಇಂದಿಗೂ ಅಸ್ತಿತ್ವದಲ್ಲಿದೆ.

    ಜಾತಿ ಪದ್ದತಿ ಮತ್ತು ವರ್ಗ ವ್ಯವಸ್ಥೆ ಪರಸ್ಪರ ತಳಕು ಹಾಕಿಕೊಂಡಿದೆ. ವರ್ಗ ವ್ಯವಸ್ಥೆಯನ್ನು ನಿರ್ಮೂಲನೆ ಮಾಡದೇ ಈ ಅವಮಾನಕಾರಿ ಜಾತಿ ವ್ಯವಸ್ಥೆಯನ್ನು ನಿಮೂಲನೆ ಮಾಡಲು ಸಾಧ್ಯವಿಲ್ಲ. ಮನುಷ್ಯರನ್ನು ಪಶುಗಳಿಗಿಂತ ಕೀಳಾಗಿ ಕಾಣುವ ಪದ್ಧತಿಯನ್ನು ನಿರ್ಮೂಲನೆ ಮಾಡದೇ ಈ ಅವಮಾನಕಾರಿ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಡಾ. ಬಿ.ಆರ್ ಅಂಬೇಡ್ಕರ್ ರವರು ಹೇಳಿದಂತೆ ಜಾತಿ ಪದ್ಧತಿ ಶ್ರಮದ ವಿಭಜನೆ ಮಾಡುತ್ತದೆ ಮಾತ್ರವಲ್ಲ ಅದು, ಶ್ರಮಿಕರನ್ನೂ ವಿಭಜಿಸುತ್ತದೆ. ಆರ್ಥಿಕ ಶೋಷಣೆಯ ವಿರುದ್ಧ ಹೋರಾಡಿ ಗೆಲ್ಲಬೇಕಾದರೆ ಎಲ್ಲ ಶ್ರಮಿಕರು, ಎಲ್ಲ ಶೋಷಿತರು ಒಗ್ಗಟ್ಟಾಗಿ ಹೋರಾಡಬೇಕು. ಜಾತಿ ಪದ್ಧತಿ ವಿರುದ್ಧ ಹೋರಾಡುವುದು, ವರ್ಗ ಹೋರಾಟದ ಭಾಗವಾಗಿದೆ. ಭಾರತದ ಪ್ರಖ್ಯಾತ ಸಮಾಜ ವಿಜ್ಞಾನಿಗಳಲ್ಲೊಬ್ಬರಾದ ಡಿ.ಡಿ ಕೋಸಾಂಬಿ ಅವರು ಹೇಳಿರುವಂತೆ ಉತ್ಪಾದನೆಯ ಪ್ರಾಚೀನ ಘಟ್ಟದಲ್ಲಿ ಜಾತಿಗಳೇ ವರ್ಗಗಳಾಗಿದ್ದವು.

    ಕೋಮುವಾದ ಅಥವ ಮತೀಯವಾದ ಎಂಬುದು ನಮ್ಮನ್ನು ಕಾಡುತ್ತಿರುವ ಇನ್ನೊಂದು ಅಪಾಯಕಾರಿ ರಾಜಕೀಯ ಪ್ರವೃತ್ತಿ. ಒಂದು ಕೋಮಿನ ಶ್ರೇಷ್ಠತೆಯನ್ನು ಪ್ರದಿಪಾದಿಸುತ್ತ ಇನ್ನುಳಿದ ಕೋಮುಗಳ ಬಗ್ಗೆ ದ್ವೇಷವನ್ನು, ಅಸಹನೆಯನ್ನು ಹಾಗೂ ಅಪನಂಬಿಕೆಯನ್ನು ಬೆಳೆಸುವುದು ಕೋಮುವಾದವಾಗಿದೆ. ಒಂದು ಕೋಮಿನ ಭಾವನೆಗಳನ್ನು ಕೆರಳಿಸಿ, ಅವರ ಮತ ಬ್ಯಾಂಕ್ ರಚಿಸಿಕೊಂಡು ರಾಜಕೀಯ ಅಧಿಕಾರವನ್ನು ಗಿಟ್ಟಿಸಿಕೊಳ್ಳುವುದು ಕೋಮುವಾದ. ರಾಜಕೀಯದಲ್ಲಿ ಮತ ಪಂತಗಳ ವಿಚಾರಗಳನ್ನು ಬೆರೆಸುವುದು ಕೂಡ ಕೋಮುವಾದವಾಗಿದೆ. ಇತ್ತೀಚಿನ ದಿನಗಳಲ್ಲಿ ಕೋಮುವಾದವನ್ನು ವ್ಯವಸ್ಥಿತವಾಗಿ ಬೆಳೆಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

    ಒಡೆದು ಆಳುವ ನೀತಿಯನ್ನು ಅನುಸರಿಸಿದ ಬ್ರಿಟಿಷರು ಜನರ ನಡುವೆ ವ್ಯವಸ್ಥಿತವಾಗಿ ದ್ವೇಷದ ಬೀಜ ಬಿತ್ತಿದರು. ಕೋಮು ದಂಗೆಗಳನ್ನು ಪ್ರೋತ್ಸಾಹಿಸಿದರು. ಕಳೆದ ದಶಕದಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷ ಬ್ರಿಟಿಷ್ ಮಾದರಿಯ ಒಡೆದು ಆಳುವ ನೀತಿಯನ್ನು ವ್ಯವಸ್ಥಿತವಾಗಿ ಬೆಳೆಸುತ್ತಿದೆ. ಅಲ್ಪ ಸಂಖ್ಯಾತ ಕೋಮುಗಳ ಬಗ್ಗೆ ಅವರ ಆಹಾರ, ಆಚಾರ-ವಿಚಾರಗಳು, ಉಡುಗೆ-ತೊಡುಗೆಗಳ ಬಗ್ಗೆ ಸುಳ್ಳುಗಳನ್ನು ಪ್ರಚಾರ ಮಾಡಲಾಗುತ್ತಿದೆ. ಅವರ ಧರ್ಮಗ್ರಂಥಗಳನ್ನು, ಮಸೀದಿಗಳನ್ನು ನಿರ್ಮೂಲನೆ ಮಾಡಿ ಅವರಲ್ಲಿ ದೇಶದ ಬಗ್ಗೆ ಪರಕೀಯ ಭಾವನೆಯನ್ನು ಬೆಳೆಸಲಾಗುತ್ತಿದೆ. ದೇಶದ ಐಕ್ಯತೆ, ಸೌಹಾರ್ದತೆಗೆ ಬಾರೀ ದೊಡ್ಡ ಅಪಾಯ ಬೆಳೆದು ಬರುತ್ತಿದೆ. ಇದರ ಪರಿಣಾಮವಾಗಿ ಅಲ್ಪಸಂಖ್ಯಾತರಲ್ಲಿ ಮೂಲಭೂತವಾದವು ಸಹ ತಲೆ ಎತ್ತುತ್ತಿದೆ. ಎರಡೂ ಬಗೆಯ ಮೂಲಭೂತವಾದದಿಂದಾಗಿ ಪ್ರಾಣ, ಮಾನ ಹಾನಿಗಳು ನಡೆಯುತ್ತಿವೆ.

    ಜಾತಿವಾದದಿದಂ ಹಾಗೂ ಕೋಮುವಾದದಿಂದ ದೇಶದ ಜನರನ್ನು ಕಾಪಾಡುವುದು ದೇಶಪ್ರೇಮಿ ಯುವಜನ ಸಂಘಟನೆಯಾದ ಡಿವೈಎಫ್ಐ ನ ಸಂಗಾತಿಗಳಾದ ನಮ್ಮ ಆದ್ಯ ಕರ್ತವ್ಯವಾಗಿದೆ. ಭಾರತ ಪ್ರಜಾಸತ್ತಾತ್ಮಕ ತಯುವಜನ ಫೆಡರೇಷನ್ 12 ನೇ ರಾಜ್ಯ ಸಮ್ಮೇಳನವು ದೇಶದ ಜನತೆಯನ್ನು ಜಾತೀವಾದ ಹಾಗೂ ಕೋಮುವಾದದಿಂದ ರಕ್ಷಿಸುವ ಮತ್ತು ಜಾಗೃತಗೊಳಿಸುವ ಜೊತೆಯಲ್ಲೇ ಈ ಕಂಟಕಗಳ ವಿರುದ್ಧ ದೃಢ ಹೋರಾಟಗಳನ್ನು ನಡೆಸುವ ನಿರ್ಣಯವನ್ನು ಕೈಗೊಳ್ಳುತ್ತದೆ.

    ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಏಕರೂಪ ನಾಗರೀಕ ಸಂಹಿತೆ (ಯುಸಿಸಿ) ಜಾರಿ ವಿರೋಧಿಸಿ ನಿರ್ಣಯ

    ನರೇಂದ್ರ ಮೋದಿ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ 2019 (ಸಿಎಎ) ಹಾಗೂ ಬಿಜೆಪಿ ನೇತೃತ್ವದ ಉತ್ತರಾಖಂಡ ರಾಜ್ಯ ಸರ್ಕಾರದ ಏಕರೂಪ ನಾಗರಿಕ ಸಂಹಿತೆ ಕಾಯ್ದೆ(ಯುಸಿಸಿ) ಕಾಯ್ದೆಗಳು, ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಗಂಭೀರ ಧಕ್ಕೆ ಹಾಗೂ ಅಪಾಯವನ್ನು ಉಂಟು ಮಾಡುವ ಕಾಯ್ದೆಗಳಾಗಿವೆ. ಈ ಕಾಯ್ದೆಗಳ ಸಾರಾಂಶ ಮತ್ತು ಉದ್ದೇಶವು ಅಸಾಂವಿಧಾನಿಕ ಮಾತ್ರವಲ್ಲ ಸಂವಿಧಾನ ವಿರೋಧಿಯಾಗಿವೆ. ಈ ಕಾಯ್ದೆಗಳನ್ನು ರದ್ದುಪಡಿಸಲು ಡಿವೈಎಫ್ಐ 12 ನೇ ರಾಜ್ಯ ಸಮ್ಮೇಳನ ಆಗ್ರಹಿಸುತ್ತದೆ.

    ಸಿಎಎ ಕಾಯ್ದೆಯು ಪೌರತ್ವವನ್ನು ನಿರ್ಧರಿಸಲು, ಮತ ಧರ್ಮವನ್ನು ಆಧಾರವಾಗಿ ಇಟ್ಟುಕೊಂಡಿದೆ. ಯಾವುದೇ ನಾಗರಿಕರನ್ನು ಜಾತಿ, ಮತ ಧರ್ಮ, ವರ್ಗ, ಲಿಂಗ ಸೇರಿದಂತೆ ಯಾವುದೇ ನೆಲೆಯಲ್ಲಿ ತಾರತಮ್ಯ ಮಾಡದಿರುವ ನಮ್ಮ ಸಂವಿಧಾನದ ಉದ್ದೇಶ ಮತ್ತು ಆಶಯಗಳಿಗೆ ಸಂಪೂರ್ಣ ವಿರುದ್ದವಾಗಿದೆ. ನಾಗರಿಕರನ್ನು ಮತ ಧರ್ಮ, ದೇಶ, ಭಾಷೆಗಳ ಆಧಾರದಲ್ಲಿ ಅಸಮಾನತೆ ಮತ್ತು ತಾರತಮ್ಯ ಮಾನದಂಡಗಳ ಮೂಲಕ ವರ್ಗೀಕರಣ ಮಾಡುವ ಈ ಕಾಯ್ದೆಯು ಭಾರತದ ಸಂವಿಧಾನದ ಮೇಲೆ ನಡೆಸಿರುವ ಗಂಭೀರ ಹಲ್ಲೆಯಾಗಿದೆ ಹಾಗೂ ನಮ್ಮ ಸಂವಿಧಾನದ ಮೂಲಭೂತ ಆಧಾರಸ್ಥಂಭವಾದ ಧರ್ಮನಿರಪೇಕ್ಷ (ಜಾತ್ಯತೀತ) ಪರಿಕಲ್ಪನೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವಂತಹದ್ದಾಗಿದೆ ಎಂದು ಡಿವೈಎಫ್ ಐ ನ 12 ನೇ ರಾಜ್ಯ ಸಮ್ಮೇಳನ ಅಭಿಪ್ರಾಯ ಪಡುತ್ತದೆ.

    ಲೋಕಸಭಾ ಚುನಾವಣೆಗೆ ಮುನ್ನ ಸಿಎಎ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರವರ ಹೇಳಿಕೆಯು ಸಮಾಜವನ್ನು ಕೋಮು ಆಧಾರದಲ್ಲಿ ವಿಭಜಿಸುವ ದುರುದ್ದೇಶದಿಂದ ಕೂಡಿದೆ. ಸಿಎಎ ಕಾಯ್ದೆಯನ್ನು ಎನ್ಆರ್ಸಿ ಮತ್ತು ಎನ್ಪಿಆರ್ ಜೊತೆ ಇಟ್ಟು ನೋಡಿದಾಗ, ಇಡೀ ದೇಶದ ನಾಗರಿಕರು ತಮ್ಮ ನಾಗರಿಕತ್ವ ಸಾಬೀತು ಪಡಿಸಬೇಕಾದ ಪರಿಸ್ಥಿತಿ ಮತ್ತು ಒತ್ತಡ ವನ್ನು ಅನುಭವಿಸಬೇಕಾಗುತ್ತದೆ. ನೋಟು ರದ್ದತಿ ರೀತಿಯಲ್ಲಿ ಇಡೀ ದೇಶದ ನಾಗರಿಕರ ನಾಗರಿಕತ್ವವನ್ನೇ ರದ್ದುಗೊಳಿಸುವ, ಕೋಮು ಆಧಾರದಲ್ಲಿ ಅಶಾಂತಿ ಸೃಷ್ಟಿ ಮಾಡುವ ಕಸರತ್ತಾಗಿದೆ. ಅಲ್ಲದೇ ಇದು ಮಾನವ ಹಕ್ಕು ಹಾಗೂ ನಾಗರಿಕ ಹಕ್ಕುಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಈ ಕಾಯ್ದೆ ಜಾರಿಯನ್ನು ಡಿವೈಎಫ್ಐ 12 ನೇ ರಾಜ್ಯ ಸಮ್ಮೇಳನ ವಿರೋಧಿಸುತ್ತದೆ.

    ಬಿಜೆಪಿ ನೇತೃತ್ವದ ಉತ್ತರಾಖಂಡ ರಾಜ್ಯ ಸರ್ಕಾರ, ಆದಿವಾಸಿ ಸಮುದಾಯಗಳನ್ನು ಹೊರಗಿಟ್ಟು ತಂದಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕಾಯ್ದೆಯು, ವಿವಿಧ ಮತ ಧರ್ಮಗಳ ಜನತೆಯ ಮೇಲೆ ಹಿಂದೂ ಮತ ಧರ್ಮದ ಸಂಹಿತೆಯನ್ನು ಏಕರೂಪವಾಗಿ ಅನ್ವಯಿಸುವ ಅಸಂವಿಧಾನಿಕ ಹಾಗೂ ಸಂವಿಧಾನ ವಿರೋಧಿ ಕಾಯ್ದೆಯಾಗಿದೆ ಎಂದು ಡಿವೈಎಫ್ ಐ 12 ನೇ ರಾಜ್ಯ ಸಮ್ಮೇಳನ ಟೀಕಿಸುತ್ತದೆ.

    ಇತ್ತೀಚಿನ ಕಾನೂನು ಆಯೋಗ, ಏಕರೂಪ ನಾಗರಿಕ ಸಂಹಿತೆಯ ಜಾರಿ ಅನಗತ್ಯ ಮತ್ತು ಅನಪೇಕ್ಷಿತ ಎಂದು ಬಹಳ ಸ್ಪಷ್ಟವಾಗಿ ತಿರಸ್ಕರಿಸಿದೆ. ವಿವಿಧತೆಯಲ್ಲಿ ಏಕತೆ ಸಾಧಿಸಿರುವ ಭಾರತೀಯರು, ಮದುವೆ, ವಿಚ್ಛೇದನ, ಆಸ್ತಿ ವಾರಸುದಾರಿಕೆ, ದತ್ತು ಪದ್ದತಿ, ಜೀವಾನಾಂಶ ಮುಂತಾದ ಕೌಟುಂಬಿಕ ವಿಷಯಗಳಲ್ಲಿ ತಮ್ಮದೇ ಆದ ರೀತಿ ರಿವಾಜು ಪದ್ದತಿಗಳನ್ನು ಅನುಸರಿಸುತ್ತಿವೆ. ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನಲ್ಲಿ ಇಂತಹ ಪದ್ದತಿ-ಆಚರಣೆಗೆ ಸಂವಿಧಾನ ರಕ್ಷಣೆ ಒದಗಿಸಿದೆ. ಸಂವಿಧಾನದ ನಿರ್ದೇಶಕ ತತ್ವದ 44 ನೇ ಆರ್ಟಿಕಲ್ ನಲ್ಲಿ ಪ್ರಸ್ತಾಪಿಸಿರುವ ”ಪ್ರಭುತ್ವವು ತನ್ನ ನಾಗರಿಕರಿಗೆ ದೇಶದಾದ್ಯಂತ ಸಮಾನ ನಾಗರಿಕ ಸಂಹಿತೆಯ ಭದ್ರತೆ ಒದಗಿಸಲು ಪ್ರಯತ್ನಿಸುತ್ತದೆ” ಎಂಬ ಗುರಿಯನ್ನು ಬಿಜೆಪಿ-ಆರ್ ಎಸ್ ಎಸ್ ವಿರೂಪಗೊಳಿಸಿ, ಮತೀಯ ಹಾಗೂ ಧಾರ್ಮಿಕ ಬಹುಸಂಖ್ಯಾತವಾದದ ಕಣ್ಣೋಟದಲ್ಲಿ ಅಪವಾಖ್ಯಾನಗೊಳಿಸಿದೆ. ಈ ಸಂವಿಧಾನ ವಿರೋಧಿ ಬಿಜೆಪಿ-ಆರ್ಎಸ್ಎಸ್ ಕಣ್ಣೋಟವನ್ನು ಡಿವೈಎಫ್ಐ 12 ನೇ ರಾಜ್ಯ ಸಮ್ಮೇಳನ ತಿರಸ್ಕರಿಸುತ್ತದೆ.

    ವಿವಿಧ ಧಾರ್ಮಿಕ ಹಾಗೂ ಸಂಸ್ಕøತಿ ಆಚರಣೆಯ ಸಮುದಾಯಗಳಲ್ಲಿ ಧಾರ್ಮಿಕ ಸುಧಾರಣೆಗಳು ಹಾಗೂ ವೈಜ್ಞಾನಿಕ ಮನೋಭಾವಗಳು, ತಾರತಮ್ಯದ ಹಾಗೂ ಧಾರ್ಮಿಕ ಹಕ್ಕು ನಿರಾಕರಣೆಯ ಭಾವನೆಗಳು ಉಂಟಾಗದಂತೆ ಸಮ್ಮತಿಯಿಂದ ಸಾಧಿಸಬೇಕಾದ ಬಹು ಸೂಕ್ಷ್ಮ ಹಾಗೂ ಜಟಿಲ ಸಂಗತಿಗಳಾಗಿವೆ. ಸಂಪ್ರದಾಯ-ಪರಂಪರೆ ಹೆಸರಿನಲ್ಲಿ ಧಾರ್ಮಿಕ ಸುಧಾರಣೆಗಳನ್ನು ಹಾಗೂ ವೈಜ್ಞಾನಿಕ ಮನೋಭಾವಗಳನ್ನು ವಿರೋಧಿಸುವ ಬಿಜೆಪಿ-ಆರ್ಎಸ್ಎಸ್ ಗಳಿಗೆ ಸಮಾನ ನಾಗರಿಕ ಹಕ್ಕುಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಏಕರೂಪ ನಾಗರಿಕ ಸಂಹಿತೆ ಹೆಸರಿನಲ್ಲಿ ವಿವಿಧ ಧರ್ಮಗಳ ಜನರ ನಡುವೆ ಕೋಮು ವಿಭಜನೆ ಉಂಟು ಮಾಡುವ ಮೂಲಕ ಸಾಮಾಜಿಕ ಸಾಮರಸ್ಯ ಹಾಗೂ ಸೌಹಾರ್ದತೆಯನ್ನು ಹಾಳು ಮಾಡುವ ಕೆಲಸದಲ್ಲಿ ತೊಡಗಿಕೊಂಡಿವೆ. ಡಿವೈಎಪ್ಐ ಇಂತಹ ದುಷ್ಟ ಪ್ರಯತ್ನಗಳನ್ನು ದೃಢವಾಗಿ ಹಿಮ್ಮೆಟ್ಟಿಸಲು ಶ್ರಮಿಸುತ್ತದೆ ಎಂದು ಡಿವೈಎಫ್ಐ ನ 12 ನೇ ರಾಜ್ಯ ಸಮ್ಮೇಳನ ನಿರ್ಣಯವನ್ನು ಕೈಗೊಳ್ಳುತ್ತದೆ.

    =========================

    ಗಲ್ಫ್ ಸೇರಿದಂತೆ ವಿದೇಶದಲ್ಲಿ ದುಡಿಯುವ ಕರ್ನಾಟಕದ ಉದ್ಯೋಗಿ, ವ್ಯಾಪಾರಿಗಳಿಗೆ ಕಲ್ಯಾಣ ಯೋಜನೆ ಜಾರಿಗೆ ಆಗ್ರಹಿಸಿ ನಿರ್ಣಯ

    ವಿದೇಶಗಳಲ್ಲಿ ಅದರಲ್ಲೂ ಪ್ರಧಾನವಾಗಿ ಗಲ್ಪ್ ರಾಷ್ಟ್ರಗಳಲ್ಲಿ ಕರಾವಳಿ ಕರ್ನಾಟಕ ಸೇರಿದಂತೆ ಕರ್ನಾಟಕ ರಾಜ್ಯದ ಲಕ್ಷಾಂತರ ಜನರು ಉದ್ಯೋಗ, ವ್ಯಾಪಾರ, ಉದ್ದಿಮೆಗಳಲ್ಲಿ ತೊಡಗಿಕೊಂಡಿದ್ದಾರೆ. ತಾಯ್ನೆಲದಲ್ಲಿ ಉತ್ತಮ ಉದ್ಯೋಗಾವಕಾಶಗಳ ತೀವ್ರಕೊರತೆ, ನಿರುದ್ಯೋಗದಿಂದ ಕಂಗೆಟ್ಟು ಉತ್ತಮ ವೇತನ, ಘನತೆಯ ಬದುಕಿನ ಕನಸುಗಳೊಂದಿಗೆ ನಮ್ಮ ಯುವಜನರು ಗಲ್ಫ್ ರಾಷ್ಟ್ರಗಳಿಗೆ ತೆರಳುತ್ತಾರೆ. ಈ ರೀತಿ ತೆರಳಿದ ಬಹುತೇಕರು ಶ್ರಮವನ್ನು ಬೇಡುವ, ದೊಡ್ಡ ಮಟ್ಟಿಗಿನ ವೇತನ, ಭದ್ರತೆಯಿಲ್ಲದ ಅಕುಶಲ ಉದ್ಯೋಗಗಳನ್ನೆ ಅವಲಂಬಿಸಿದ್ದಾರೆ.  ತಮ್ಮ ದುಡಿಮೆಯ ಬಹುತೇಕ ಭಾಗವನ್ನು ತಮ್ಮನ್ನು ಅವಲಂಬಿಸಿರುವ ಕುಟುಂವಕ್ಕಾಗಿ ಪ್ರತಿ ತಿಂಗಳು ಕಳುಹಿಸಿ ಕೊಡುತ್ತಾರೆ.

    ಈ ರೀತಿ ದಶಕಗಳ ಕಾಲ ಗಲ್ಫ್ ರಾಷ್ಟ್ರ ಗಳಲ್ಲಿ ದುಡಿದು ತಮ್ಮ ಗಳಿಕೆಯನ್ನು ಪೂರ್ತಿಯಾಗಿ ತಮ್ಮ ಕುಟುಂಬದ ನಿರ್ವಹಣೆಗೆ ಕಳುಹಿಸುತ್ತಾರೆ. ತಮ್ಮ ಯೌವ್ವನ ಪೂರ್ತಿಯಾಗಿ ಹೀಗೆ ವಿದೇಶಿ ನೆಲದಲ್ಲಿ ಕಳೆಯುವ ಇವರಲ್ಲಿ ಬಹುತೇಕರು ತಮ್ಮ ದುಡಿಮೆಯ ಕಾಲಾವಧಿ ಮುಗಿಸಿ ತಾಯ್ನೆಲಕ್ಕೆ ಮರಳಿದಾಗ ಇವರಲ್ಲಿ ಬಹುತೇಕರಲ್ಲಿ ಉಳಿತಾಯ ಎಂಬುದು ಇರುವುದಿಲ್ಲ.  ಗಲ್ಫ್ ರಾಷ್ಟ್ರಗಳಲ್ಲಿ ಕಾಲ ಕಾಲಕ್ಕೆ ಬದಲಾಗುವ ನಿಯಮಗಳಿಂದಲೂ ಹೆಚ್ಚಿನವರು ತಮ್ಮ ಉದ್ಯೋಗ ಕಳೆದು ಕೊಂಡು ದಿಢೀರನೆ ಭಾರತಕ್ಕೆ ಹಿಂದಿರುಗುವ ಸ್ಥಿತಿಯೂ ಉದ್ಭವವಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಅನಿವಾಸಿ ಭಾರತೀಯರ ಸ್ಥಿತಿ ದಾರುಣವಾಗಿರುತ್ತದೆ.
    ಇಂದು ಕರಾವಳಿ ಕರ್ನಾಟಕ, ಮಲೆನಾಡಿನ ಆರ್ಥಿಕತೆ ಗಲ್ಫ್ ಮನಿಯನ್ನು ಅವಲಂಬಿಸಿದೆ. ಇದು ಅಲ್ಲಿ ಕಡಿಮೆ ವೇತನಕ್ಕೆ ದುಡಿಯುವ, ಸಣ್ಣಪುಟ್ಟ ವ್ಯಾಪಾರದಲ್ಲಿ ತೊಡಗಿರುವವರು ತಮ್ಮ ಕುಟುಂಬಳ ನಿರ್ವಹಣೆಗೆ ಕಳುಹಿಸಿದ ಶ್ರಮದ ಗಳಿಕೆಯೇ ಆಗಿದೆ.

    ಈ ರೀತಿ ಇಲ್ಲಿನ ನಿರುದ್ಯೋಗದಿಂದ ಬೇಸತ್ತು ಅನಿವಾರ್ಯವಾಗಿ ವಿದೇಶಗಳಿಗೆ ತೆರಳಿ ದುಡಿದು ವಾಪಾಸಾಗುವ ಆರ್ಥಿಕವಾಗಿ ದುರ್ಬಲ ವಿಭಾಗಗಳಿಗೆ ನೆರವಾಗುವುದು ಸರಕಾರದ ಕರ್ತವ್ಯ. ಅವರು ಕಳುಹಿಸಿದ ವಿದೇಶಿ ಹಣ ಇಲ್ಲಿನ ಸರಕಾರದ ಖಜಾನೆಯನ್ನೂ ಬಲಗೊಳಿಸಿದೆ. ಮಾರುಕಟ್ಟೆ ಆರ್ಥಿಕತೆಗೆ ದೊಡ್ಡ ಶಕ್ತಿ ನೀಡಿದೆ. ಶಿಕ್ಷಣ, ಆರೋಗ್ಯ, ರಿಯಲ್ ಎಸ್ಟೇಟ್ ವ್ಯವಹಾರಗಳು ಬಹುತೇಕ ಅನಿವಾಸಿಗಳು ಕಳುಹಿಸುವ ಕರೆನ್ಸಿಯನ್ನೆ ಅವಲಂಬಿಸಿದೆ.
    ಈ ರೀತಿ ತಮ್ಮ ವಿಶ್ರಾಂತಿ ರಹಿತ ಶ್ರಮದ ದುಡಿಮೆಯಿಂದ ಮಲೆನಾಡು, ಕರಾವಳಿ ಕರ್ನಾಟಕ ಮಾತ್ರವಲ್ಲದೆ ರಾಜ್ಯದ ಆರ್ಥಿಕತೆಗೆ ದೊಡ್ಡ ಶಕ್ತಿನೀಡಿರುವ ಅನಿವಾಸಿ ದುಡಿಮೆಗಾರರು, ವ್ಯಾಪಾರಿಗಳಿಗೆ ನೆರವು, ಪ್ರೋತ್ಸಾಹ, ಪುನರ್ವಸತಿ ಒದಗಿಸುವುದು, ವಿಶೇಷ ಪ್ಯಾಕೇಜ್ ಘೋಷಿಸುವುದು ಸರಕಾರದ ಕರ್ತವ್ಯ. ಈ ಕುರಿತು ಅನಿವಾಸಿ ಭಾರತೀಯರು ಹಲವು ವರ್ಷಗಳಿಂದ ಸರಕಾರದ ಮುಂದೆ ಹಕ್ಕೊತ್ತಾಯ ಸಲ್ಲಿಸುತ್ತಾ ಬಂದಿದ್ದಾರೆ. ಇತ್ತೀಚೆಗಷ್ಟೆ ದೊಡ್ಡ ನಿಯೋಗದೊಂದಿಗೆ ಬಂದು ಮುಖ್ಯಮಂತ್ರಿಗಳ ಸಹಿತ ವಿರೋಧ ಪಕ್ಷಗಳ ನಾಯಕರನ್ನೂ ಭೇಟಿಯಾಗಿ ಮನವಿ ಸಲ್ಲಿಸಿರುತ್ತಾರೆ. ಕರ್ನಾಟಕ ರಾಜ್ಯ ಸರಕಾರ ತಕ್ಷಣವೇ ಅನಿವಾಸಿ ಭಾರತೀಯ ದುಡಿಮೆಗಾರರ, ವ್ಯಾಪಾರಿಗಳ ಬೇಡಿಕೆಯನ್ನು ಈಡೇರಿಸಬೇಕು, ಕೇರಳ ಸರಕಾರ ಈಗಾಗಲೆ ಅನಿವಾಸಿಗಳಿಗಾಗಿ ವಿಶೇಷಯೋಜನೆ, ಪುನರ್ವಸತಿ ಪ್ಯಾಕೇಜ್ ಗಳನ್ನು ಕಾರ್ಯಗತಗೊಳಿಸಿದೆ. ಕರ್ನಾಟಕ ಸರಕಾರವೂ ಕನಿಷ್ಟ ಕೇರಳ ಮಾದರಿಯಲ್ಲಾದರೂ ಯೋಜನೆಯನ್ನು ಘೋಷಿಸಬೇಕು ಎಂದು ಫೆಬ್ರವರಿ 25,26, 27 ಮೂರು ದಿನಗಳ ಕಾಲ ಮಂಗಳೂರಿನಲ್ಲಿ ನಡೆಯುತ್ತಿರುವ ಡಿವೈಎಫ್ಐ ಕರ್ನಾಟಕ ರಾಜ್ಯ 12 ನೇ ಸಮ್ಮೇಳನ ಸರ್ವಾನುಮತದಿಂದ ಆಗ್ರಹಿಸುತ್ತದೆ.

    ===============

    ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಖಂಡಿಸಿ ನಿರ್ಣಯ

    ಭಾರತವು ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ವಿಮೋಚನೆಗೊಂಡು, ಸ್ವಾತಂತ್ರ್ಯ ಹೊಂದಿದ ನಂತರ ಹಲವರ ತ್ಯಾಗ ಬಲಿದಾನದಿಂದಾಗಿ ಪಡೆದ ಸ್ವಾತಂತ್ರ್ಯವನ್ನು ದೇಶದ ಪ್ರತಿಯೊರ್ವ ಪ್ರಜೆಯು ಅನುಭವಿಸಲು ಮತ್ತು ಸಮಾನ ಅವಕಾಶಗಳನ್ನು ಹೊಂದಲು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿ ಅದರ ಜಾರಿಗಾಗಿ ಸಂವಿಧಾನವನ್ನು ಹೊಂದಿರುತ್ತದೆ. ಸಂವಿಧಾನವು ತನ್ನ ಪೀಠಿಕೆಯಲ್ಲಿ ತಿಳಿಸಿರುವಂತೆ ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸುತ್ತಾ ಅದರ ಎಲ್ಲಾ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ವಿಚಾರ ಅಭಿವ್ಯಕ್ತಿ ನಂಬಿಕೆ ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ; ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ, ಮತ್ತು ಅದನ್ನು ಎಲ್ಲರಿಗೂ ಹಂಚುವುದು; ವೈಯುಕ್ತಿಕ ಘನತೆ ಮತ್ತು ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಎಲ್ಲರಲ್ಲೂ ಸಹೋದರತ್ವವನ್ನು ಪ್ರೋತ್ಸಾಹಿಸಲು ನಿರ್ಧರಿಸಿ, ಸಂವಿಧಾನವನ್ನು ಅಳವಡಿಸಿಕೊಂಡು, ಜಾರಿಗೊಳಿಸಿ ನಾವಾಗಿಯೇ ವಿಧಿಸಿಕೊಂಡಿರುತ್ತೇವೆ.

    ದೇಶದಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಗುಜರಾತ್ ನರಮೇಧದ ಕುಖ್ಯಾತಿಯನ್ನು ಹೊಂದಿರುವ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದ ನಂತರ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವೂ ಅಪಾಯವನ್ನು ಎದುರಿಸುತ್ತಿದೆ. ಇತ್ತೀಚೆಗೆ ಸಂವಿಧಾನದ ಪ್ರತಿಗಳನ್ನು ದೆಹಲಿಯ ಜಂತರ್ ಮಂತರ್ನಲ್ಲಿ ಸುಟ್ಟಿದ್ದು, ಸಂವಿಧಾನವನ್ನು ಬದಲಾಯಿಸುವುದಕ್ಕೆ ನಾವು ಅಧಿಕಾರಕ್ಕೆ ಬಂದಿರುವುದು ಎಂದು ಕೇಂದ್ರ ಸರ್ಕಾರದ ಮಂತ್ರಿಯೋಬ್ಬರು ಮಾತನಾಡುವುದು, ಸಂವಿಧಾನಕ್ಕಿಂತ ಧರ್ಮ ಶಾಸ್ತ್ರಗಳೇ ನಮಗೆ ಮುಖ್ಯ ಎನ್ನುವುದು ಎಲ್ಲವೂ ಸಂವಿಧಾನದ ಮೇಲಿನ ದಾಳಿಯಾಗಿವೆ.

    ಹಾಗೆಯೇ ಸಂಸತ್ತಿನಲ್ಲಿ ತಮಗಿರುವ ಬಹುಮತವನ್ನು ದುರ್ಬಳಕೆ ಮಾಡಿಕೊಂಡು ಯಾವುದೇ ಚರ್ಚೆಗಳಿಲ್ಲದೆ, ಪ್ರತಿಪಕ್ಷಗಳ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳದೇ ಕಾನೂನುಗಳನ್ನು ಜಾರಿಗೆ ತರುತ್ತಿರುವುದು, ದೇಶದಲ್ಲಿ ಪ್ರತಿಪಕ್ಷಗಳು ಅಧಿಕಾರ ನಡೆಸುತ್ತಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ಕಿರುಕುಳ ನೀಡುತ್ತಿರುವುದು, ಅಯಾ ರಾಜ್ಯಗಳ ತೆರಿಗೆ ಪಾಲನ್ನು ಸರಿಯಾಗಿ ಕೊಡದೇ ತಾರತಮ್ಯ ಮಾಡುತ್ತಿರುವುದು, ಸರ್ಕಾರದ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷಗಳ ನಾಯಕರ ಮೇಲೆ ದಾಳಿ ಮಾಡಿಸುತ್ತಿರುವುದು, ಜನಪ್ರತಿನಿಧಿಗಳಿಗೆ ಅಮೀಷವೊಡ್ಡಿ, ಎದುರಿಸಿ ಖರೀದಿಸಿ ಸರ್ಕಾರಗಳನ್ನು ಉರುಳಿಸುವುದು, ರಾಜ್ಯಗಳಲ್ಲಿ ಅಸ್ಥಿರತೆಯನ್ನು ಸೃಷ್ಟಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಿ ಸರ್ವಾಧಿಕಾರಿ ವ್ಯವಸ್ಥೆಯನ್ನು ಜಾರಿಗೆ ತರಲು ಮೋದಿ ಸರ್ಕಾರ ಮುಂದಾಗಿದೆ.

    ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಚಿಂತಕರು, ಸಾಹಿತಿಗಳು, ಹೋರಾಟಗಾರರನ್ನು, ವಿದ್ಯಾರ್ಥಿ ಯುವಜನರನ್ನು ದೇಶ ವಿರೋಧಿಗಳೆಂದು ಬಿಂಬಿಸಿ ಅವರುಗಳ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಜೈಲಿಗೆ ನೂಕಲಾಗುತ್ತಿದೆ. ಅಲ್ಪಸಂಖ್ಯಾತರು, ದಲಿತರ ವಿರುದ್ಧ ನಿರಂತರವಾಗಿ ಬಹುಸಂಖ್ಯಾತರಲ್ಲಿ ದ್ವೇಷ ಬಿತ್ತುವುದು, ಬಹು ಸಂಸ್ಕೃತಿಯನ್ನು ವಿರುದ್ಧವಾಗಿ ಏಕೆ ಸಂಸ್ಕೃತಿಯನ್ನು ಏರುತ್ತಿರುವುದು, ಜನರ ಹಬ್ಬ ಆಚರಣೆಗಳಲ್ಲಿ ಧಾರ್ಮಿಕ ಕೋಮುವಾದವನ್ಪು ಪ್ರಚೋದಿಸುತ್ತಿರುವುದು, ತಮ್ಮ ವಿಚಾರಗಳನ್ನು ಒಪ್ಪದಿರುವವರ ಮೇಲೆ ಶೂಟೌಟ್ ಮಾಡಿಸುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ.

    ಈ ನಿಟ್ಟಿನಲ್ಲಿ ಡಿವೈಎಫ್ಐ ನಾ 12 ನೇ ರಾಜ್ಯ ಸಮ್ಮೇಳನದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಖಂಡಿಸಿ ನಿರ್ಣಯವನ್ನು ಮಂಡಿಸಲಾಗುತ್ತಿದೆ.
    ============

    ಅಲ್ಪಸಂಖ್ಯಾತರು ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳ ಮೇಲೆ ದಾಳಿ ಖಂಡಿಸಿ ಹಾಗೂ ರಕ್ಷಣೆಗೆ ಒತ್ತಾಯಿಸಿ ನಿರ್ಣಯ

    ಸಮಾಜದಲ್ಲಿ ನಿರಂತರವಾಗಿ ಜನತೆಯ ನಡುವೆ ವಿಭಜನೆಯನ್ನು ತಂದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಜೀವ ವಿರೋಧಿ ಕೋಮುವಾದಿ ಶಕ್ತಿಗಳು ತಮ್ಮ ದ್ವಂಶಕ ಹಾಗೂ ಭೀತಿ ಉಂಟು ಮಾಡುವ ನಡೆಗಳಿಂದಾಗಿ ಅಲ್ಪಸಂಖ್ಯಾತರು ಹಾಗೂ ಅಲ್ಪಸಂಖ್ಯಾತ ಸಂಸ್ಥೆಗಳ ಮೇಲೆ ದಾಳಿ ದಬ್ಬಾಳಿಕೆ ನಡೆಸುತ್ತಿದ್ದಾರೆ.

    ಆಹಾರ ಉಡುಗೆ ತೊಡುಗೆ ಆಚಾರ ವಿಚಾರಗಳಲ್ಲಿನ ವೈವಿಧ್ಯತೆಗೆ ಭಾರತದ ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ.  ಆದರೆ ಇದನ್ನು ಒಪ್ಪದ ಸಂವಿಧಾನವನ್ನು ವಿರೋಧಿಸುವ ಪುಂಡಾಟಿಕೆಯ ಗುಂಪುಗಳಿವೆ. ಈ ಗುಂಪುಗಳು ಕಾನೂನನ್ನು ಕೈಗೆತ್ತಿಕೊಂಡು ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ದನದ ಮಾಂಸ, ಹಿಜಾಬ್, ಹಲಾಲ್ ಕಟ್ ಹೀಗೆ ವಿವಿಧ ಪ್ರಶ್ನೆಗಳಲ್ಲಿ ತಾವೇ ಕಾನೂನನ್ನು ಕೈಗೆತ್ತಿಕೊಂಡು ನ್ಯಾಯಾಂಗದ ಕೆಲಸವನ್ನು ಬೀದಿಯಲ್ಲಿ ನಡೆಸಿ ತಾವೇ ಶಿಕ್ಷೆ ನೀಡುತ್ತಿವೆ. ಇಂತಹ ಅನಾಗರಿಕ ಅರಾಜಕತೆಯ ನಡೆಗಳು ಒಪ್ಪತಕದ್ದಲ್ಲ. ಕೊಪ್ಪಳದ ಯುವಕನ ಮೇಲಿನ ಹಲ್ಲೆ, ಮಂಡ್ಯದಲ್ಲಿ ದನದ ಮಾಂಸ ರವಾನೆ ಯನ್ನು ನೆಪವಾಗಿಸಿಕೊಂಡು ಬಜರಂಗದಳದವರು ನಡೆಸುತ್ತಿರುವ ಗುಂಡಾಗಿರಿ, ಮಂಗಳೂರಿನಲ್ಲಿ ನಿತ್ಯ ನಡೆಯುತ್ತಿರುವ ದಬ್ಬಾಳಿಕೆಗಳು, ಅಲ್ಪಸಂಖ್ಯಾತ ಕ್ರಿಶ್ಚಿಯನ್ – ಮುಸ್ಲಿಂ ವಿದ್ಯಾಸಂಸ್ಥೆಗಳ ಮೇಲೆ ನಡೆಸುತ್ತಿರುವ ದಾಳಿಗಳು ಖಂಡನಾರ್ಹ.

    DYFI ನ 12ನೇ ರಾಜ್ಯ ಸಮ್ಮೇಳನವು ಜೀವ ವಿರೋಧಿ, ಸಂವಿಧಾನ ವಿರೋಧಿ ದಾಳಿಗಳನ್ನು ತೀವ್ರವಾಗಿ ಖಂಡಿಸುತ್ತದೆ. ನಾಗರಿಕ ಸಮಾಜ, ದೇಶದ ಸಂವಿಧಾನ ಮತ್ತು ಸಂವಿಧಾನದತ್ತ ಕಾರ್ಯ ವಿಧಾನಗಳನ್ನು ತಿರಸ್ಕರಿಸಿ ಪುಂಡಾಟಿಕೆ ನಡೆಸುವ ಗುಂಪುಗಳನ್ನು  ತಿರಸ್ಕರಿಸಲು ಹಾಗೂ ಸರಕಾರಗಳು ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸಲು ಡಿವೈಎಫ್ಐ ನ  12ನೇ ರಾಜ್ಯ ಸಮ್ಮೇಳನ ಒತ್ತಾಯಿಸುತ್ತದೆ.

    ===================

    ಸೌಹಾರ್ದತೆ, ಐಕ್ಯತೆ, ಸಮಗ್ರತೆ ರಕ್ಷಣೆಗಾಗಿ ಯುವಜನ ಸಮ್ಮೇಳನ ನಿರ್ಣಯ

    ಹಲವು ದಶಕಗಳಿಂದಲೂ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಹೆಮ್ಮೆಯಿಂದ ಕರೆಯುತ್ತಾ ಬಂದ ಹಿರಿಮೆಗೆ ಈಗಾಗಲೇ ಗಂಭೀರ ಧಕ್ಕೆ ಬಂದೊದಗಿರುವುದು  ನಿಚ್ಚಳವಾಗಿದೆ. ಜನರನ್ನು ಮತಾಂಧತೆಯ ಆಧಾರದಲ್ಲಿ ಜಾತಿ-ಧರ್ಮಗಳ ಹೆಸರಿನಲ್ಲಿ ವಿಭಜಿಸುವ ಶಕ್ತಿಗಳಿಂದ ನಮ್ಮ ಸಾಮಾಜಿಕ ಸೌಹಾರ್ದತೆಗೆ ತೀವ್ರವಾದ ಹಾನಿಯಾಗಿದೆ. ಮತೀಯ ದ್ವೇಷ-ಹಗೆತನದ ಭಾವನೆಗಳು ಸಾಮಾನ್ಯ ಜನರ ಮನಸ್ಸನ್ನು ಆವರಿಸಿಕೊಳ್ಳುತ್ತಿರುವ ವಿಷಮ ಗಳಿಗೆಯಲ್ಲಿ ನಾವು ಹಾದು ಹೋಗುತ್ತಿದ್ದೇವೆ. ದೇವರು, ಮತಧರ್ಮ ಮುಂತಾದವುಗಳನ್ನು ಸಂಕುಚಿತ ಉದ್ದೇಶಗಳಿಗೆ ಎಗ್ಗಿಲ್ಲದೇ ಬಳಸಿಕೊಂಡು ಯುವಜನರನ್ನು ಬಲಿಪಶು ಮಾಡುವ ಪ್ರಯತ್ನಗಳನ್ನು ಮಂಗಳೂರಿನಲ್ಲಿನಡೆಯುತ್ತಿರುವ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿ.ವೈ.ಎಫ್.ಐ.)ನ 12ನೆಯ ಕರ್ನಾಟಕ ರಾಜ್ಯ ಸಮ್ಮೇಳನವು ತೀವ್ರವಾಗಿ ಖಂಡಿಸುತ್ತದೆ.
    ದಿನ ನಿತ್ಯದ ದ್ವೇಷ ಭಾಷೆಯಿಂದ ನಮ್ಮ ಸಾಮಾಜಿಕ, ಮತೀಯ ದ್ವೇಷದ ಜೊತೆಗೆ ಅಸ್ಪೃಶ್ಯತೆ, ಜಾತೀಯ ದಮನ,  ಮಹಿಳೆಯರ ಮೇಲಿನ ದೌರ್ಜನ್ಯ, ಆರ್ಥಿಕ ಅಸಮಾನತೆಗಳ ತೀವ್ರತೆಯೂ ಸೌಹಾರ್ದದ ವಾತಾವರಣವನ್ನು ಮತ್ತಷ್ಟು ಕಲುಷಿತ ಗೊಳಿಸುತ್ತಿರುವುದನ್ನು ಸಮ್ಮೇಳನವು ಆತಂಕದಿಂದ ಗಮನಿಸುತ್ತದೆ.
    ಇಂತಹ ಸಂದರ್ಭದಲ್ಲಿ ಶತ ಶತಮಾನಗಳ ಇತಿಹಾಸವುಳ್ಳ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಹಾಗೂ ಜನ ಸಂಸ್ಕೃತಿಯನ್ನು ಗುರುತಿಸಿ ಅದನ್ನು ಮುನ್ನೆಲೆಗೆ ತರುವ ಐತಿಹಾಸಿಕ ಅವಶ್ಯಕತೆ ಉಂಟಾಗಿದೆ. ‘ಸೌಹಾರ್ದ ಕರ್ನಾಟಕ’ದ ಪರಂಪರೆಯನ್ನು ಉಳಿಸುವ, ಬೆಳೆಸುವ ಮಹತ್ತರವಾದ ಕಾರ್ಯದಲ್ಲಿ ಡಿ.ವೈ.ಎಫ್.ಐ. ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತದೆ.
    ನಮ್ಮ ಜನಜೀವನದಲ್ಲಿ,  ಹಾಸುಹೊಕ್ಕಾಗಿರುವ ಸೌಹಾರ್ದತೆಯ ಪರಂಪರೆಯನ್ನು ಅರಿಯುವುದು, ಅಂತಹ ಮನೋಭಾವವನ್ನು ಸಮಕಾಲಿಕವಾಗಿ ರೂಪಿಸಲು ಮತ್ತು ಅದನ್ನು ಬಲಪಡಿಸಲು ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಡಿ.ವೈ.ಎಫ್.ಐ. ನಿರ್ಧರಿಸುತ್ತದೆ.
    ಅನೇಕ ಸಾಧಕರ ಅಭಿಮತ ಮತ್ತು ವ್ಯಾಖ್ಯಾನಗಳಲ್ಲಿ ಸೌಹಾರ್ದತೆಯ ಸಂದೇಶ ಇರುವುದನ್ನು ಗಮನಿಸಬೇಕು. ಈ ಎಲ್ಲರ ವಿವೇಕದಲ್ಲಿ ಇರುವುದು ನಾವಿಂದು ‘ಜಾತ್ಯತೀತ’ವೆಂದು ಕರೆಯುತ್ತಿರುವ ಪರಿಕಲ್ಪನೆಯ ಸಾರಸತ್ವವೇ ಆಗಿದೆ. ನಿಜವಾದ ಜಾತ್ಯತೀತತೆಯಲ್ಲಿ ಇರುವುದು ಸಾಮಾಜಿಕ ಸಹನೆ. ಆದರೆ, ಮತೀಯವಾದಿ, ಕೋಮುವಾದಿ ಶಕ್ತಿಗಳಿಗೆ ‘ಜಾತ್ಯತೀತ’ ಎಂಬ ಪದವನ್ನು ಕಂಡರೆ ಅಸಹನೆ ಇದೆ.
    ಜಾತ್ಯತೀತ ಎನ್ನುವುದು ನಮ್ಮ ಭಾರತದ ಸಂವಿಧಾನದ ಒಂದು ಮುಖ್ಯ ಅಡಿಪಾಯದ ಅಂಶ.  ಮತಧರ್ಮಾನುಸರಣೆ, ಪಾಲನೆ ಎಂಬುದು  ಎಂಬುದು ವ್ಯಕ್ತಿಯ ಖಾಸಗಿ ವೈಯುಕ್ತಿಕ ಹಕ್ಕು, ಅವಕಾಶ. ಅದು ಈ ಮಟ್ಟದಲ್ಲಿಯೇ ಇರಬೇಕು ಹೊರತು ಸಾರ್ವಜನಿಕ ಆಚರಣೆಯಾಗಿ ಅಲ್ಲ ಮತ್ತು ಮತ್ತೊಂದು ಧರ್ಮದ ವಿರುದ್ದ ಬಳಸುವ ಅಸ್ತ್ರವಲ್ಲ. ಯಾವುದೇ ಮತಧರ್ಮ ಎಂಬುದು ಪ್ರಭುತ್ವದ, ಸರಕಾರದ ಲಕ್ಷಣವಲ್ಲ, ಮತಧರ್ಮ ಎಂಬುದು ಪ್ರಭುತ್ವದಿಂದ ಪ್ರತ್ಯೇಕವಾಗಿರಬೇಕು, ರಾಜಕೀಯ ಅಧಿಕಾರಕ್ಕೆ ಮತಧರ್ಮವನ್ನು ಬಳಸಕೂಡದು ಎನ್ನುವುದನ್ನು ಭಾರತದ ಸರ್ವೋಚ್ಛ ನ್ಯಾಯಾಲಯವು ತನ್ನ ಮಹತ್ವದ ತೀರ್ಪಿನಲ್ಲಿ ಸ್ಪಷ್ಟ ಪಡಿಸಿದೆ ಎನ್ನುವುದನ್ನು ನೆನಪಿಅಉತ್ತದೆ.
    ಜಾತ್ಯಾತೀತತೆ ಎಂಬ ಪದವನ್ನು ಕಂಡರಾಗದವರು ‘ದ್ವೇಷಾತೀತ’ ಎಂಬ ಪದವನ್ನು ಅಂಗೀಕರಿಸಬಹುದು, ದ್ವೇಷಾತೀತ ದೇಶವೆಂಬುದು ನಮ್ಮ ಭಾವಕೋಶದ ಬಂಧುವಾಗಬೇಕು ಎಂದು ಡಿ.ವೈ.ಎಫ್.ಐ ಆಶಿಸುತ್ತದೆ. ಜಾತಿ ಮತ್ತು ಮತಧರ್ಮಗಳ ಹೆಸರಲ್ಲಿ ದ್ವೇಷವನ್ನು ಹುಟ್ಟುಹಾಕುವ ಪ್ರವೃತ್ತಿಗೆ ಪ್ರತಿರೋಧಿಯಾಗುತ್ತ ಶಾಂತಿ, ಸೌಹಾರ್ದ, ಸಮತೆ, ಮಮತೆಗಳ ದ್ವೇಷಾತೀತ ಭಾರತವನ್ನು ನಾವೆಲ್ಲರೂ ಒಟ್ಟಾಗಿ ಉಳಿಸಬೇಕು ಮತ್ತು ಮತಧರ್ಮ ಕುರಿತಾಗಿ ಭಾರತದ ಸಂವಿಧಾನ ಪ್ರಸ್ತಾಪಿಸಲಾದ ಅಂಶಗಳು ಹಾಗೂ ನಮ್ಮ ಸಮಾಜದಲ್ಲಿರುವ ಸೌಹಾರ್ದತೆಯ ಸಾರವನ್ನು ನಾಡಿನ ಯುವಜನರ ನಡುವೆ ಜಾಗೃತಿ ಅಭಿಯಾನ ಕೈಗೊಳ್ಳಲು ಶ್ರಮಿಸಬೇಕೆಂದು ತನ್ನೆಲ್ಲ ಘಟಕಗಳಿಗೆ ಮಂಗಳೂರಿನಲ್ಲಿ ನಡೆಯುತ್ತಿರುವ  ಡಿ.ವೈ.ಎಫ್.ಐ. ಸಮ್ಮೇಳನವು ಕರೆ ನೀಡುತ್ತದೆ.
    ಮತನಿರಪೇಕ್ಷತೆ, ಪ್ರಜಾಪ್ರಭುತ್ವ, ಸಾರ್ವಭೌಮತೆ, ಸಾಮಾಜಿಕ ನ್ಯಾಯದ ಆಧಾರವಾಗಿರುವ ಭಾರತದ ಸಂವಿಧಾನವನ್ನು ಬದಲಾಯಿಸುವ ಹುನ್ನಾರಗಳನ್ನು ಸೋಲಿಸಲು, ಸಂವಿಧಾನವನ್ನು ರಕ್ಷಿಸಿಕೊಳ್ಳಲು ಹೋರಾಟವನ್ನು ಮುಂದುವರಿಸಲು ನಿರ್ಧರಿಸುತ್ತದೆ.
    ==================

    ಸಮಾನ ಗುಣಮಟ್ಟದ ಶಿಕ್ಷಣ ಜಾರಿಯಾಗಲಿ

    ಶಿಕ್ಷಣ ಕ್ಷೇತ್ರದಲ್ಲಿ ಅಸಮಾನತೆಯ ಕಂದಕ ಹೆಚ್ಚಾಗುತ್ತಿದೆ. ಆಳುವ ವರ್ಗದ ನವಉದಾರವಾದಿ ನೀತಿಗಳು ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣಕ್ಕೆ ದೂಡಿದೆ. ಕಾಂಗ್ರೆಸ್ ಆಡಳಿತ ಖಾಸಗೀಕರಣವನ್ನು ಉತ್ತೇಜಿಸಿದರೆ ಬಿಜೆಪಿಯ ಆಡಳಿತ ಖಾಸಗೀಕರಣದ ಜೊತೆಗೆ ಕೋಮುವಾದೀಕರಣಕ್ಕೆ ಅವಕಾಶವನ್ನು ನೀಡಿ ಶಿಕ್ಷಣದ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

    ಕರ್ನಾಟಕದಲ್ಲಿ ಬಹುತೇಕ ಶಿಕ್ಷಣ ಸಂಸ್ಥೆಗಳು ಖಾಸಗಿಯವರ ಕೈಯಲ್ಲಿದೆ. ಅದು ಪ್ರತಿಶತ 65 ಅನ್ನು ದಾಟಿರುವುದು ಅಪಾಯದ ಸೂಚನೆಯಾಗಿದೆ. ಎಲ್ಕೆಜಿಯಿಂದ ಪಿಜಿಯವರೆಗೆ ಖಾಸಗಿ ಪಾಲು ದೊಡ್ಡದಿದೆ. ರಾಜ್ಯದ ಬಹುತೇಕ ಶಾಸಕರು, ಮಠಾಧೀಶರು ಶಾಲೆಗಳನ್ನು ತೆರೆಯುವ ಮೂಲಕ ಶಿಕ್ಷಣವನ್ನು ಮಾರುಕಟ್ಟೆಯ ಸರಕನ್ನಾಗಿಸಿದೆ.

    ಕೇಂದ್ರ ಸರ್ಕಾರವು ಶಿಕ್ಷಣದ ವಿಚಾರದಲ್ಲಿ ಉದ್ಧಟತನ ಮೆರೆಯುತ್ತಿದ್ದು, ರಾಜ್ಯಕ್ಕಿರುವ ಸ್ವಾತಂತ್ರ್ಯವನ್ನು ಕಸಿಯುತ್ತಿದೆ. ಶಿಕ್ಷಣ ಕ್ಷೇತ್ರದ ಸುಧಾರಣೆಯ ಹೆಸರಿನಲ್ಲಿ “ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020” ನ್ನು ಜಾರಿ ಮಾಡಿ ಖಾಸಗೀಕರಣಕ್ಕೆ, ಕೋಮುವಾದಿಕರಣಕ್ಕೆ ರತ್ನಗಂಬಳಿಯನ್ನು ಹಾಸಿದೆ. ಹೊಸ ಶಿಕ್ಷಣ ನೀತಿ ಜಾರಿ ಮಾಡಿದ ಮೊದಲ ರಾಜ್ಯ ಎಂದು ಈ ಹಿಂದೆ ಕರ್ನಾಟಕದಲ್ಲಿ ಇದ್ದ ಬಿಜೆಪಿ ಸರ್ಕಾರ ಬೆನ್ನು ತಟ್ಟಿಕೊಂಡಿತ್ತು. ಇದರ ಜಾರಿಯ ಮೂಲಕ ಕೋರ್ಸ್ನಲ್ಲಿ ಗೊಂದಲ, ಅಂಕಪಟ್ಟಿಯಲ್ಲಿ ಸಮಸ್ಯೆ, ಶುಲ್ಕ ಏರಿಕೆ ಇತ್ಯಾದಿ ಗೊಂದಲಗಳನ್ನು ಸೃಷ್ಟಿಸಿತು.

    ಈಗ ಇರುವ ಕಾಂಗ್ರೆಸ್ ಸರ್ಕಾರ ಕರ್ನಾಟಕ ಶಿಕ್ಷಣ ನೀತಿ (ಎಸ್ಇಪಿ) ಜಾರಿ ಮಾಡುವುದಾಗಿ ಘೋಷಿಸಿತು. ದುರಂತವೆಂಬಂತೆ ಎನ್ಇಪಿ ಹಲವು ಅಂಶಗಳನ್ನು ಜಾರಿ ಮಾಡಲು ಬಜೆಟ್ನಲ್ಲಿ ಸೂಚಿಸಿದೆ. ಸರಿಯಾದ ನಿಯಮ, ಗೊತ್ತು ಗುರಿ ಸಿಗದೆ “ಎಸ್ಇಪಿ” ಎಂಬ ಕೂಸಿಗೆ ಕುಲಾದಿ ಹೊಲಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.

    ಕಾಲೇಜು ಶಿಕ್ಷಣ, ಉನ್ನತ ಶಿಕ್ಷಣ, ಸಂಶೋಧನಾ ಶಿಕ್ಷಣವನ್ನು ಬಲಪಡಿಸಲು ಯೋಜನೆಗಳು ಜಾರಿಯಾಗುತ್ತಿಲ್ಲ. ಹಾಗಾಗಿ ಹತ್ತನೇ ತರಗತಿ ನಂತರ ಶಿಕ್ಷಣದಿಂದ ವಂಚಿತರಾಗುವ ಪುಮಾಣ ಹೆಚ್ಚಾಗುತ್ತದೆ.

    ಪಠ್ಯದಲ್ಲಿ ಮತೀಯ ವಿಚಾರಗಳನ್ನು ತುರುಕುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ನಡೆಸಿತ್ತು. ಎಸ್ಎಫ್ಐ ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದರಿಂದ ಬಿಜೆಪಿ ಈ ಸಮಿತಿಯನ್ನು ವಜಾಗೊಳಿಸಿತು. ಆದರೆ ಖಾಸಗಿ ಶಿಕ್ಷಣ ಸಂಸ್ಥೆಯ ಮೂಲಕ “ಕೇಸರಿ ಹಿಜಾಬ್” ವಿಚಾರವನ್ನು ಜೀವಂತವಗಿಟ್ಟು ತನ್ನ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಡೆಸುತ್ತದೆ.

    ಈ ಎಲ್ಲಾ ಅಪಾಯಕಾರಿ ಅಂಶಗಳು ಸರಿಯಾಗಬೇಕಾದರೆ ಸಮಾನ ಗುಣಮಟ್ಟದ ಶಿಕ್ಷಣ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿ – ಯುವಜನ ಸಂಘಟನೆಗಳು ಹೋರಾಟ ರೂಪಿಸಲಿದೆ ಎಂದು 12ನೇ ಡಿವೈಎಫ್ಐ ರಾಜ್ಯ ಸಮ್ಮೇಳನದಲ್ಲಿ ನಿರ್ಣಯ ಮಂಡನಎಯಾಗಿದೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *