LATEST NEWS
ಜೂನ್ 21 ರಂದು ಭಾರತದಲ್ಲಿ ಅಪರೂಪದ ಸೂರ್ಯ ಗ್ರಹಣ

ಉಡುಪಿ ಜೂನ್ 20: ಈ ವರ್ಷದ ಮೊದಲ ಸೂರ್ಯಗ್ರಹಣ ಜೂನ್ 21ರಂದು ಭಾನುವಾರ ನಡೆಯಲಿದೆ. ಡಿಸೆಂಬರ್ 26, 2019ರ ಗ್ರಹಣವಾದ ಮೇಲೆ,ಈ ಗ್ರಹಣವು ಸುಮಾರು ಆರು ತಿಂಗಳ ನಂತರ ನಡೆಯಲಿದೆ. ಅಪರೂಪದ ಸೂರ್ಯ ಗ್ರಹಣ ನಮ್ಮ ದೇಶದ ರಾಜಸ್ಥಾನ, ಹರ್ಯಾಣ, ಉತ್ತರ ಖಂಡಗಳ ಕೆಲ ಪ್ರದೇಶಗಳಲ್ಲಿ ಕಂಕಣ ಸೂರ್ಯ ಗ್ರಹಣವಾಗಿ ಗೋಚರಿಸಲಿದೆ. ಇನ್ನು ಉಳಿದ ಪ್ರದೇಶಗಳಲ್ಲಿ ಪಾರ್ಶ್ವ ಸೂರ್ಯ ಗ್ರಹಣ ಗೋಚರಿಸಲಿದೆ.
ದೇಶದ ಕುರುಕ್ಷೇತ್ರ, ಡೆಹ್ರಾಡೂನ್ ನಗರಗಳಲ್ಲಿ ಸಂಪೂರ್ಣ ಕಂಕಣ ಗ್ರಹಣವಾಗಿ ಕಂಡರೆ ಅಲ್ಲಿಂದ ದಕ್ಷಿಣಕ್ಕೆ ವ್ಯಾಪಿಸುತ್ತಿದ್ದಂತೆ ಪಾರ್ಶ್ವ ಸೂರ್ಯ ಗ್ರಹಣವಾಗಿ ಮಾರ್ಪಾಡಾಗಲಿದೆ. ಅದರಲ್ಲೂ ಗ್ರಹಣವಾಗುವ ಅಂಶ ಕಡಿಮೆಯಾಗುತ್ತಾ ಕರಾವಳಿ ಜಿಲ್ಲೆಗಳಲ್ಲಿ ಪಾರ್ಶ್ವ ಸೂರ್ಯ ಗ್ರಹಣ ಮಾತ್ರ ಕಾಣ ಸಿಗಲಿದೆ.

ಜೂನ್ 21 ರ ಬೆಳಿಗ್ಗೆ 10ಗಂಟೆ 04 ನಿಮಿಷಕ್ಕೆ ಪ್ರಾರಂಭಾಗುವ ಈ ಗ್ರಹಣ ಮಧ್ಯಾಹ್ನ 1 ಗಂಟೆ 22 ನಿಮಿಷ ಕ್ಕೆ ಮುಕ್ತಾಯವಾಗಲಿದೆ. 11 ಗಂಟೆ 37 ನಿಮಿಷಕ್ಕೆ ಸೂರ್ಯ ಗ್ರಹಣವನ್ನು ವೀಕ್ಷಿಸಬಹುದಾಗಿದೆ.
ಸೂರ್ಯ ಭೂಮಿಯ ನಡುವೆ ಚಂದ್ರ ನೇರ ಬಂದಾಗ ಸೂರ್ಯ ಗ್ರಹಣ ವಾಗುತ್ತದೆ. ಅದು ಕೆಲವೇ ಪ್ರದೇಶಗಳಲ್ಲಿ ಖಗ್ರಾಸ ಅಥವಾ ಕಂಕಣ ವಾಗಬಹುದು. ಚಂದ್ರ ಭೂಮಿಗಿಂತ ಸುಮಾರು 20 ಪಟ್ಟು ಚಿಕ್ಕವನಾದುದರಿಂದ ಸೂರ್ಯ ಗ್ರಹಣ ಹೆಚ್ಚೆಂದರೆ 7.5 ನಿಮಿಷ ಮಾತ್ರ.
ಇನ್ನು ಚಂದ್ರ ಗ್ರಹಣ ನನ್ನು ನೇರ ಬರಿಗಣ್ಣಿನಿಂದ ನೋಡ ಬಹುದು. ಆದರೆ ಸೂರ್ಯ ಗ್ರಹಣ ಬರಿಗಣ್ಣಿನಿಂದ ನೋಡಲೇ ಬಾರದು. ಅದಕ್ಕೆ ತಯಾರಿಸಿದ ಕನ್ನಡದಿಂದ ಅಥವಾ ಪಿನ್ ಹೋಲ್ ಉಪಕರಣಗಳಿಂದ ಪರೋಕ್ಷವಾಗಿ ನೋಡಬಹುದು. ಸಾಮಾನ್ಯವಾಗಿ ಗ್ರಹಣ ಕಂಡು ಬಂದ ನಂತರದ ಸಂದರ್ಭಗಳಲ್ಲಿ ಹಲವಾರು ಪ್ರಕೃತಿ ವೈಪರೀತ್ಯಗಳು ಕಂಡು ಬರುತ್ತವೆ. ಹಾಗಾಗಿ ಈ ಗ್ರಹಣದ ನಂತರ ಜನರಿಗೆ ಯಾವ ತೊಂದರೆ ಕಾದಿದೆಯೋ ಎಂಬ ಚಿಂತೆ ಎಲ್ಲರನ್ನು ಕಾಡುತ್ತಿದೆ. ಗ್ರಹಣದ ಸಂದರ್ಭದಲ್ಲಿ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸಾಕಷ್ಟು ಅನಾಹುತಗಳನ್ನು ತಪ್ಪಿಸಬಹುದು.