DAKSHINA KANNADA
ಮೋದಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ – ಕಾಂಗ್ರೇಸ್ ಮುಖಂಡನ ವಿರುದ್ದ ದೂರು

ಪುತ್ತೂರು ಮೇ 14: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರೋಪದ ಮೇಲೆ ಕಾಂಗ್ರೇಸ್ ಮುಖಂಡ ಪುತ್ತೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ವಿರುದ್ಧ ಬಿಜೆಪಿ ನಿಯೋಗ ಬುಧವಾರ ಪೊಲೀಸರಿಗೆ ದೂರು ಸಲ್ಲಿಸಿದೆ.
” ದೇಶದ ಸಹೋದರತೆಗೆ, ಸಾರ್ವಭೌಮತೆಗೆ ಕಾರ್ಕೋಟಕ ವಿಷ” “ಇವರು ವಿಶ್ವ ಗುರು ಅಲ್ಲಾ, ವಿಷ ಗುರು” ಎಂಬಿತ್ಯಾದಿ ಬರಹಗಳನ್ನು ದೇಶದ ಪ್ರಧಾನಿಯವರನ್ನು ಅಣಕಿಸುವ ಅನೇಕ ಪೋಸ್ಟರ್ ಗಳನ್ನು ಅವರು ತಮ್ಮ “Amala Ramachandra” ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದು, ಇದು ದೇಶದ ಉನ್ನತ ಹುದ್ದೆಯಲ್ಲಿರುವ ಪ್ರಧಾನಿಯವರಿಗೆ ಮಾಡಿದ ಅವಮಾನವಾಗಿದೆ.

ದೇಶದಲ್ಲಿ ಸಂವಿಧಾನಿಕವಾಗಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕೀಳು ಭಾವನೆಯನ್ನು ಹಬ್ಬಿಸುವುದು, ಪ್ರಚಾರ ಮಾಡುವುದು ದೇಶದ ಭದ್ರತೆಯ ಬಗ್ಗೆ ಕೀಳು ಭಾವನೆಯನ್ನು ಬಿಂಬಿಸುವುದು ದೇಶ ದ್ರೋಹದ ಕೆಲಸವಾಗಿರುತ್ತದೆ. ಇದನ್ನು ನೋಡಿದ ಭಾರತೀಯ ಜನತಾ ಪಾರ್ಟಿಯ ಅನೇಕ ಕಾರ್ಯಕರ್ತರಾದ ನಮಗೆ ಬೇಸರ ಉಂಟಾಗಿರುತ್ತದೆ. ಅಲ್ಲದೆ, ದೇಶದ ಪ್ರಧಾನಿಗಳ ಅವಮಾನ ಮಾಡಿದ್ದಾಗಿರುತ್ತದೆ.
ಆದುದರಿಂದ ದೇಶದ ಪ್ರಧಾನಿಯವರ ಬಗ್ಗೆ ಅವಹೇಳನ ಮಾಡಿದ ಅಮಳರಾಮಚಂದ್ರ ಅವರ ಬಗ್ಗೆ ತನಿಖೆ ನಡೆಸಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ನಿಯೋಗ ಆಗ್ರಹಿಸಿದೆ.
ಮಾಜಿ ಶಾಸಕ ಸಂಜೀವ ಮಟಂದೂರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ. ಬಿ., ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಮತ್ತಿತರ ಪ್ರಮುಖರು ನಿಯೋಗದಲ್ಲಿದ್ದರು.