KARNATAKA
ಹುಬ್ಬಳ್ಳಿ – ಬಾಲಕರಿಬ್ಬರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯ

ಹುಬ್ಬಳ್ಳಿ ಮೇ 13: ಇಬ್ಬರು ಬಾಲಕರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡ ಧಾರುಣ ಘಟನೆ ಹುಬ್ಬಳ್ಳಿ ನಗರದ ಮೂರು ಸಾವಿರ ಮಠದ ಬಳಿ ನಡೆದಿದೆ.
ಚೇತನ್ (12) ಹತ್ಯೆಯಾದ ಬಾಲಕ ಎಂದು ತಿಳಿದು ಬಂದಿದೆ.
ಮೇ 12 ಸಂಜೆ ಆಟವಾಡುವಾಗ ಇಬ್ಬರು ಸ್ನೇಹಿತರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಈ ಜಗಳದಲ್ಲಿ 13 ವರ್ಷದ ಬಾಲಕ ಚೇತನ್‌ಗೆ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡ ಚೇತನ್ ನನ್ನು ಹುಬ್ಬಳ್ಳಿ ಕಿಮ್ಸ್‌ಗೆ ರವಾನಿಸಲಾಗಿದೆ. ಆದರೆ, ಮಾರ್ಗ ಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, “ಗುರುಸಿದ್ದೇಶ್ವರ ನಗರದಲ್ಲಿ ಬಾಲಕರಿಬ್ಬರ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಓರ್ವ ಬಾಲಕ ಮನೆಗೆ ಹೋಗಿ ಚಾಕು ತಂದು ಇನ್ನೊಬ್ಬನಿಗೆ ಇರಿದಿದ್ದಾನೆ. ಕೂಡಲೇ ಇರಿದ ಬಾಲಕನ ತಾಯಿ ಇರಿತಕ್ಕೊಳಗಾದ ಬಾಲಕನ್ನು ಆಸ್ಪತ್ರೆಗೆ ಕರೆತಂದಿದ್ದಾಳೆ. ಕಿಮ್ಸ್ ಗೆ ಕರೆ ತಂದಾಗ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ಹೃದಯ ವಿದ್ರಾವಕ ಘಟನೆ” ಎಂದು ಹೇಳಿದರು.