KARNATAKA
ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ,ಮನೆಗೆ ಕರೆದೊಯ್ದು ಸುಲಿಗೆ: ಆರು ಮಂದಿ ಬಂಧನ

ಬೆಂಗಳೂರು, ಜುಲೈ 29: ಡೇಟಿಂಗ್ ಆ್ಯಪ್‌ನ ಮೂಲಕ ಪರಿಚಯವಾಗಿದ್ದ ಉದ್ಯೋಗಿಯನ್ನು ಭೇಟಿಗೆ ಆಹ್ವಾನಿಸಿ, ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಯಲಹಂಕ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸಂಗೀತಾ ಸಹಾನಿ (36), ಬೀರಬಲ್ ಮಜ್ಜಗಿ(21), ಅಭಿಷೇಕ್(19), ಶ್ಯಾಮ್ ಸುಂದರ್ ಪಾಂಡೆ (20), ರಾಜು ಮಾನೆ (34) ಹಾಗೂ ಶರಣಬಸಪ್ಪ ಬಾಳಿಗೆರ್ (50) ಬಂಧಿತರು. ತೆಲಂಗಾಣ ರಾಜ್ಯದ ರಾಕೇಶ್ ರೆಡ್ಡಿ ಅವರು ನೀಡಿದ ದೂರು ಆಧರಿಸಿ ನಗರದ ವಿವಿಧ ಸ್ಥಳಗಳಲ್ಲಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

15 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ರಾಕೇಶ್ ರೆಡ್ಡಿ ಅವರು ಮಹದೇವಪುರದಲ್ಲಿ ಇರುವ ಬೋಯಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಂದ ಆರೋಪಿಗಳು ₹2 ಲಕ್ಷ ಸುಲಿಗೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದರು. ‘ದೂರುದಾರರಿಗೆ ಡೇಟಿಂಗ್ ಆ್ಯಪ್‌ವೊಂದರ ಮೂಲಕ ತಿಂಗಳ ಹಿಂದೆ ಆರೋಪಿ ಸಂಗೀತಾ ಪರಿಚಯವಾಗಿತ್ತು. ಆಕೆ ತನ್ನನ್ನು ರಾಜಸ್ಥಾನದ ರಾಕಿ ಎಂದು ಪರಿಚಯಿಸಿಕೊಂಡಿದ್ದಳು.
ತಾನು ಅವಿವಾಹಿತಳಾಗಿದ್ದು, ಏಳೆಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಬ್ಯುಸಿನೆಸ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಳು. ಇಬ್ಬರೂ ವಾಟ್ಸ್ಆ್ಯಪ್‌ನಲ್ಲಿ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದರು. ಜುಲೈ 17ರಂದು ಭೇಟಿಗೆ ಆಹ್ವಾನಿಸಿದ್ದಳು. ಆದರೆ, ದೂರುದಾರರಿಗೆ ಆಕೆಯನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಮರುದಿನ ಸಂಜೆ 5.30ರ ಸುಮಾರಿಗೆ ಯಲಹಂಕದ ಗ್ಯಾಲರಿಯಾ ಬಾಲ್‌ನಲ್ಲಿರುವ ಸ್ಟಾರ್ ಬಕ್ಸ್‌ನಲ್ಲಿ ಇಬ್ಬರೂ ಭೇಟಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.
‘ಬಳಿಕ ಇಬ್ಬರೂ ಆಟೊದಲ್ಲಿ ಸಂಗೀತಾಳ ಮನೆಗೆ ತೆರಳಿದ್ದರು. ಮನೆಯಲ್ಲಿ ಮದ್ಯಪಾನ ಮಾಡುತ್ತಾ ಕುಳಿತಿದ್ದಾಗ ಉಳಿದ ಆರೋಪಿಗಳು ಆ ಮನೆಗೆ ಪ್ರವೇಶಿಸಿದ್ದರು. ‘ನಾವು ಮನೆಯ ಮಾಲೀಕರು, ಮನೆಯಲ್ಲಿ ಮದ್ಯಪಾನ ಮಾಡುವಂತಿಲ್ಲ’ ಎನ್ನುತ್ತಾ ಸಂಗೀತಾ ಹಾಗೂ ದೂರುದಾರರ ಬ್ಯಾಗ್‌ಗಳನ್ನು ಪರಿಶೀಲಿಸಲು ಮುಂದಾಗಿದ್ದರು. ಆಗ ಬ್ಯಾಗ್‌ನಲ್ಲಿ ಬಿಳಿ ಬಣ್ಣದ ಪೌಡರ್ ಸಿಕ್ಕಿತ್ತು. ಆ ಪೌಡರ್ ಅನ್ನು ಡ್ರಗ್ಸ್ ಎಂದು ತೋರಿಸಿ ಹಣ ಸುಲಿಗೆ ಮಾಡಲು ಪ್ರಯತ್ನಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಬಂಧಿತರ ಪೈಕಿ, ಒಬ್ಬ ಆರೋಪಿಯ ವಿರುದ್ಧ 2023ರಲ್ಲಿ ಪುಟ್ಟೇನಹಳ್ಳಿ ಠಾಣೆಯಲ್ಲಿ ಇಂಥಹದ್ದೇ ಪ್ರಕರಣ ದಾಖಲಾಗಿತ್ತು. ಆರೋಪಿ ಸಂಗೀತಾ ಸಹಾನಿ ಉತ್ತರ ಪ್ರದೇಶ ಮೂಲದವಳಾಗಿದ್ದು, ಈ ಹಿಂದೆ ಡಾನ್ಸ್ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದಳು’ ಎಂದು ಪೊಲೀಸರು ಹೇಳಿದರು.
₹15 ಲಕ್ಷಕ್ಕೆ ಬೇಡಿಕೆ ₹2 ಲಕ್ಷ ಸುಲಿಗೆ:‘ಈ ವಿಷಯವನ್ನೂ ಯಾರಿಗೂ ತಿಳಿಸುವುದಿಲ್ಲ ಎಂದು ಹೇಳಿದ್ದ ಆರೋಪಿಗಳು ₹15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಆಗ ದೂರುದಾರರು ತಮ್ಮ ಬಳಿ ಅಷ್ಟು ಹಣವಿಲ್ಲ ಎಂದು ಹೇಳಿದ್ದರು. ಕೊನೆಗೆ ₹2 ಲಕ್ಷ ಕೊಡುವುದಾಗಿ ರಾಕೇಶ್ ರೆಡ್ಡಿ ಹೇಳಿದರು. ಆರೋಪಿಗಳ ಮಾತಿನಂತೆ ಹಂತ ಹಂತವಾಗಿ ದೂರುದಾರರು ಒಟ್ಟು ₹2 ಲಕ್ಷ ವರ್ಗಾಯಿಸಿದ್ದರು. ಬಳಿಕ ರಾಕೇಶ್ ಅವರನ್ನು ಬೈಕ್‌ನಲ್ಲಿ ಕರೆದೊಯ್ದು ವೀರಸಂದ್ರ ಬಳಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.
ಪೂರ್ವನಿಯೋಜಿತ ಕೃತ್ಯ: ‘ಬ್ಯಾಗ್‌ನಲ್ಲಿ ಅಡುಗೆ ಸೋಡಾವನ್ನು ಸಂಗೀತಾ ಸಹಾನಿ ಮೊದಲೇ ಬಚ್ಚಿಟ್ಟುಕೊಂಡಿದ್ದಳು. ದೂರುದಾರರನ್ನು ಕೊಠಡಿಗೆ ಕರೆತಂದಾಗ ನಾಟಕವಾಡುವಂತೆ ಪ್ರಕರಣದ ಸೂತ್ರಧಾರ ಶರಣಬಸಪ್ಪ ಬಾಳಿಗೆರ್ ಸೂಚಿಸಿದ್ದ. ಬ್ಯಾಗ್‌ನಲ್ಲಿದ್ದ ಬಿಳಿ ಪೌಡರ್ ತೋರಿಸಿ ‘ಎಂಡಿಎಂಎ ಸೇವನೆ ಮಾಡುತ್ತಿದ್ದೀರಿ ಪೊಲೀಸರಿಗೆ ಮಾಹಿತಿ ನೀಡುತ್ತೇವೆ’ ಎಂದು ಆರೋಪಿಗಳು ಬೆದರಿಸಿದ್ದರು. ಇದರಿಂದ ದೂರುದಾರ ಆಘಾತಕ್ಕೆ ಒಳಗಾಗಿದ್ದರು.
ಆಗ ಸಂಗೀತಾ ಸಹಾನಿ ಈ ವಿಷಯ ಹೊರಗೆ ಗೊತ್ತಾದರೆ ನನ್ನ ಮರ್ಯಾದೆ ಹೋಗುತ್ತದೆ ಎಂದು ಕಣ್ಣೀರು ಹಾಕಿದ್ದಳು’ ಎಂದು ಪೊಲೀಸರು ಹೇಳಿದರು. ಪೂರ್ವನಿಯೋಜಿತವಾಗಿ ಆರೋಪಿಗಳು ಕೃತ್ಯ ಎಸಗಿದ್ದರು. ಮಹಿಳೆಯ ಬ್ಯಾಗ್‌ನಲ್ಲಿ ಅಡುಗೆ ಸೋಡಾವನ್ನು ಇಟ್ಟು ಎಂಡಿಎಂಎ ಎಂದು ಬೆದರಿಸಲಾಗಿತ್ತು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.