BELTHANGADI
ಧರ್ಮಸ್ಥಳ ಪ್ರಕರಣ – ಎಸ್ಐಟಿ ಯಿಂದ ತಲೆಬುರುಡೆ ದೊರೆ ಸ್ಥಳದ ಸ್ಥಳ ಮಹಜರು ಪ್ರಕ್ರಿಯೆ ಆರಂಭ

ಬೆಳ್ತಂಗಡಿ ಜುಲೈ 28: ಧರ್ಮಸ್ಥಳ ಗ್ರಾಮದಲ್ಲಿ ಅನೇಕ ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಧೇಯ ವ್ಯಕ್ತಿಯ ಹೇಳಿದ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಇಂದು ಧರ್ಮಸ್ಥಳದಲ್ಲಿ ಆತ ಹೇಳಿದ ಜಾಗಗಳ ಸ್ಥಳ ಮಹಜರು ಪ್ರಾರಂಭಿಸಿದೆ.
ಎಸ್.ಐ.ಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಅನುಚೇತ್, ಮತ್ತು ಎಸ್ಪಿ ಸಿ.ಎ.ಸೈಮನ್ ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಮುಂಜಾನೆಯೇ ಆಗಮಿಸಿದ್ದರು. ದೂರುದಾರ ಬೆಳಗ್ಗೆ 11 ಗಂಟೆಗೆ ಕಚೇರಿಗೆ ಹಾಜರಾಗಿದ್ದಾನೆ.

ಕೆಲವು ತಾಸು ಮಾತುಕತೆ ನಡೆಸಿದ ಬಳಿಕ ದಾಖಲೆ ಪಡೆದು ದೂರುದಾರನ ಸಹಿ ಹಾಕಿ ಬಳಿಕ ಬಿಗಿ ಭದ್ರತೆಯಲ್ಲಿ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿ ಆಗಮಿಸಿದರು. ಅರಣ್ಯ ಇಲಾಖೆಯ ಜಾಗಕ್ಕೆ ಸೇರಿದ ಸ್ಥಳದಲ್ಲಿ ತಲೆ ಬರುಡೆ ಅಗೆದಿರುವ ಮಾಹಿತಿಯಿದ್ದು, ಅದೇ ಜಾಗದಲ್ಲಿ ಮಹಜರು ನಡೆಸಲಾಯಿತು.
ಕಳೆದ ಎರಡು ದಿನಗಳಿಂದ ಎಸ್‌ಐಟಿ ತಂಡ ದೂರುದಾರನ ವಿಚಾರಣೆ ನಡೆಸಿದ್ದು, ಸುಮಾರು 14 ಗಂಟೆಗಳ ಕಾಲ ವಿಚಾರಣೆ ನಡೆಸಿ ಹಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಇಂದಿನಿಂದ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಯಿಂದ ಕಾರ್ಯಾಚರಣೆ ನಡೆಸಲಿದ್ದು. ದೂರುದಾರನ ಹೇಳಿಕೆ ಆಧಾರದ ಮೇಲೆ ಪ್ರಣವ್ ಮೊಹಂತಿ ತಂಡ ತನಿಖೆ ಚುರುಕುಗೊಳಿಸಲಿದ್ದಾರೆ.
ಸ್ಥಳ ಮಹಜರು ಬಳಿಕ ದೂರುದಾರನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಯಿದ್ದು, ನಂತರ ಆತ ಹೂತ್ತಿದ್ದೇನೆ ಎನ್ನಲಾಗುತ್ತಿರುವ ಪ್ರದೇಶಗಳ ಪರಿಶೀಲನೆ ಮಾಡುವ ಸಾಧ್ಯತೆಯಿದೆ