KARNATAKA
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಮ್ಮನನ್ನೇ ಮುಗಿಸಿದ ಅಕ್ಕಂದಿರು..!

ಕಲಬುರಗಿ, ಆಗಸ್ಟ್ 08: ಅಕ್ರಮ ಸಂಬಂಧದ ಮೂಲಕ ದಾರಿ ತಪ್ಪುತ್ತಿದ್ದ ಸಹೋದರಿಯರಿಗೆ ಬುದ್ದಿವಾದ ಹೇಳಿದ್ದಕ್ಕೆ ಕೋಪಗೊಂಡ ಸಹೋದರಿಯರೇ ಸುಪಾರಿ ಕೊಟ್ಟು ಸ್ವಂತ ತಮ್ಮನನ್ನು ಕೊಲೆ ಮಾಡಿದ ಭಯಾನಕ ಘಟನೆ ಗುಲ್ಬರ್ಗದಲ್ಲಿ ನಡೆದಿದೆ. ಕೊಲೆಯಾದವನನ್ನು ನಾಗರಾಜ್ ಎಂದು ಗುರುತಿಸಲಾಗಿದೆ.
ನಾಗರಾಜ್‌ಗೆ ಅನಿತಾ ಹಾಗೂ ಮೀನಾಕ್ಷಿ ಎಂಬ ಇಬ್ಬರು ಸಹೋದರಿಯರಿದ್ದರು. ಅವರಿಬ್ಬರಿಗೂ ಮದುವೆಯಾಗಿತ್ತು. ಆದರೆ ಇಬ್ಬರಿಗೂ ತಮ್ಮ ಗಂಡಂದಿರೊಂದಿಗೆ ಸಂಬಂಧ ಸರಿಹೊಂದದ ಕಾರಣ ತವರು ಮನೆಯಲ್ಲಿದ್ದರು. ಈ ವೇಳೆ ಓರ್ವ ಸಹೋದರಿ ಅವಿನಾಶ್ ಎಂಬುವನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳಂತೆ. ಅದಕ್ಕಾಗಿ ಸಹೋದರ ನಾಗರಾಜ್ ಸಹೋದರಿಗೆ ಸಾಕಷ್ಟು ಬಾರಿ ಬುದ್ದಿವಾದ ಹೇಳಿದ್ದನು ಎನ್ನಲಾಗಿದೆ.

ನಾಗರಾಜ್ ಹೇಳುತ್ತಿದ್ದ ಬುದ್ದಿವಾದ, ಬೈಗುಳಗಳನ್ನು ಕೇಳಿಕೇಳಿ ಕೋಪಗೊಂಡಿದ್ದ ಸಹೋದರಿಯರು ನಾಗರಾಜನಿಗೆ ಒಂದು ಗತಿ ಕಾಣಿಸಬೇಕೆಂದು ಯೋಚಿಸಿ ಅವಿನಾಶನಿಗೆ 50 ಸಾವಿರ ರೂಪಾಯಿ ನೀಡಿ ಸಹೋದರನನ್ನು ಮುಗಿಸುವಂತೆ ಹೇಳಿದ್ದಾರೆ. ಅದರಂತೆ ಅವಿನಾಶ್ ತನ್ನ ಸಹಚರರಾದ ಆಸಿಫ್, ರೋಹಿತ್, ಮೋಸಿನ್ ಸೇರಿದಂತೆ ಆರು ಜನರೊಂದಿಗೆ ನಗರದ ಹೊರವಲಯದ ಕೆರೆಭೋಸ್ಗಾ ಕ್ರಾಸ್ ಬಳಿಯ ಜಮೀನೊಂದರ ಬಳಿ ಥಳಿಸಿದ್ದಾರೆ.
ನಂತರ ಬಿಯರ್ ಬಾಟಲಿ ಹಾಗೂ ಕಲ್ಲಿನಿಂದ ತಲೆಗೆ ಜಜ್ಜಿ ಕೊಂದಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ತನಿಖೆಯ ಜಾಡು ಹಿಡಿದ ಪೊಲೀಸರಿಗೆ ಸುಪಾರಿ ಕಿಲ್ಲಿಂಗ್‌ನ ವಾಸನೆ ಬಡಿದಿದೆ. ಇದೀಗ ಪ್ರಕರಣ ಸಂಬಂಧ ಇಬ್ಬರು ಸಹೋದರಿಯರು ಹಾಗೂ ಅವಿನಾಶ್ ಮತ್ತು ಸಹಚರರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.