KARNATAKA
ತಂದೆ ಬೈದಿದ್ದಕ್ಕೆ ಮನೆ ಬಿಟ್ಟ ಅಕ್ಕ–ತಂಗಿ: ಧರ್ಮಸ್ಥಳದಲ್ಲಿ ಪತ್ತೆ
ಬೆಂಗಳೂರು, ಜೂನ್ 20: ಚಾಕೊಲೇಟ್ ತಿಂದಿದ್ದಕ್ಕೆ ತಂದೆ ಬೈದರೆಂಬ ಕಾರಣಕ್ಕೆ ಮನೆ ತೊರೆದು ನಾಪತ್ತೆಯಾಗಿದ್ದ ಅಕ್ಕ–ತಂಗಿ ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದು, ಕೋಣನಕುಂಟೆ ಠಾಣೆ ಪೊಲೀಸರು ಅವರಿಬ್ಬರನ್ನು ಪೋಷಕರ ಸುಪರ್ದಿಗೆ ಒಪ್ಪಿಸಿದ್ದಾರೆ.
‘9 ವರ್ಷ ಹಾಗೂ 11 ವರ್ಷ ವಯಸ್ಸಿನ ಅಕ್ಕ–ತಂಗಿ ಪೋಷಕರ ಜೊತೆ ವಾಸವಿದ್ದಾರೆ. ಚಾಕೊಲೇಟ್ ಖರೀದಿಸುವುದಕ್ಕಾಗಿ ಬಾಲಕಿಯರು, ತಂದೆ ಬಳಿ ಹಣ ಕೇಳಿದ್ದರು. ಹಣ ನೀಡದ ತಂದೆ, ಚಾಕೊಲೇಟ್ ತಿನ್ನದಂತೆ ತಾಕೀತು ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ತಂದೆಯ ವರ್ತನೆಯಿಂದ ಅಸಮಾಧಾನಗೊಂಡಿದ್ದ ಬಾಲಕಿಯರು, ಬೇರೆಯವರ ಬಳಿ ಹಣ ಪಡೆದು ಚಾಕೊಲೇಟ್ ಖರೀದಿಸಿ ತಿಂದಿದ್ದರು. ನಂತರ, ಚಾಕೊಲೇಟ್ ತಿಂದಿರುವುದಾಗಿ ತಂದೆಗೆ ತಿಳಿಸಿದ್ದರು. ಕೋಪಗೊಂಡ ತಂದೆ, ಮತ್ತಷ್ಟು ಬೈದಿದ್ದರು. ಅದರಿಂದ ನೊಂದ ಬಾಲಕಿಯರು, ಮನೆ ಬಿಟ್ಟು ಹೋಗಲು ತೀರ್ಮಾನಿಸಿದ್ದರು.’
‘ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣವೆಂಬುದನ್ನು ತಿಳಿದ ಬಾಲಕಿಯರು, ಗುರುತಿನ ಚೀಟಿ ಸಮೇತ ಜೂನ್ 16ರಂದು ರಾತ್ರಿ ಮೆಜೆಸ್ಟಿಕ್ ನಿಲ್ದಾಣಕ್ಕೆ ತೆರಳಿದ್ದರು. ಕೆಎಸ್‌ಆರ್‌ಟಿಸಿ ಬಸ್ ಹತ್ತಿ, ಧರ್ಮಸ್ಥಳಕ್ಕೆ ಹೋಗಿದ್ದರು. ಅವರ ಬಳಿ ಮೊಬೈಲ್ ಸಹ ಇತ್ತು’ ಎಂದು ಮೂಲಗಳು ತಿಳಿಸಿವೆ.
‘ಮಕ್ಕಳು ಮನೆಗೆ ಬಾರದಿದ್ದರಿಂದ ಗಾಬರಿಗೊಂಡಿದ್ದ ಪೋಷಕರು ಠಾಣೆಗೆ ದೂರು ನೀಡಿದ್ದರು. ಬಾಲಕಿಯರ ಬಳಿಯ ಮೊಬೈಲ್ ನೆಟ್‌ವರ್ಕ್ ಆಧರಿಸಿ ತನಿಖೆ ನಡೆಸಿದಾಗ, ಧರ್ಮಸ್ಥಳದಲ್ಲಿರುವ ಮಾಹಿತಿ ಲಭ್ಯವಾಗಿತ್ತು. ಅಲ್ಲೀಗೆ ಹೋಗಿದ್ದ ಪೊಲೀಸರ ತಂಡ, ಬಾಲಕಿಯರ ಮನವೋಲಿಸಿ ನಗರಕ್ಕೆ ಕರೆತಂದು ಪೋಷಕರಿಗೆ ಒಪ್ಪಿಸಿದೆ’ ಎಂದು ಮೂಲಗಳು ಹೇಳಿವೆ.