FILM
ಗಾಯಕಿ ಮಂಗ್ಲಿ ಬರ್ತಡೇ ಪಾರ್ಟಿಯಲ್ಲಿ ಗಾಂಜಾ ನಶೆ – ಪ್ರಕರಣ ದಾಖಲು

ಹೈದರಾಬಾದ್ ಜೂನ್ 11: ಗಾಯಕಿ ಮಂಗ್ಲಿ ಹುಟ್ಟುಹಬ್ಬದ ಆಚರಣೆ ಸದ್ಯ ವಿವಾದಕ್ಕೆ ಕಾರಣವಾಗಿದೆ. ಮಂಗಳವಾರ ರಾತ್ರಿ ಚೆವೆಲ್ಲಾದ ತ್ರಿಪುರಾ ರೆಸಾರ್ಟ್‌ನಲ್ಲಿ ನಡೆದ ಈ ಪಾರ್ಟಿಯ ಮೇಲೆ ಪೊಲೀಸರು ಹಠಾತ್ ದಾಳಿ ನಡೆಸಿದ್ದಾರೆ. ಈ ಶೋಧದ ವೇಳೆ ಅಪಾರ ಪ್ರಮಾಣದ ಗಾಂಜಾ ಮತ್ತು ವಿದೇಶಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಪಾರ್ಟಿಯಲ್ಲಿ ಭಾಗವಹಿಸಿದ್ದ 48 ಜನರ ಮೇಲೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದ್ದು, ಅವರಲ್ಲಿ 9 ಮಂದಿ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ. ಪಾರ್ಟಿ ಆಯೋಜಕರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಮಾದಕ ದ್ರವ್ಯ ಪೂರೈಕೆಯ ಹಿಂದಿನ ಸೂತ್ರಧಾರಿಗಳನ್ನು ಬಂಧಿಸಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಮಂಗ್ಲಿಯ ಹುಟ್ಟುಹಬ್ಬದಲ್ಲಿ ಹಲವಾರು ಮಂದಿ ಭಾಗಿಯಾಗಿದ್ದು, ಕೆಲ ವಿದೇಶಿ ಮದ್ಯಗಳು ಸಹ ಪಾರ್ಟಿ ಸ್ಥಳದಲ್ಲಿದ್ದು ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಬರ್ತ್ಡೇ ಪಾರ್ಟಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಗಾಯಕಿ ಮಂಗ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎನ್ನಲಾಗುತ್ತಿದೆ. ಘಟನಾ ಸ್ಥಳದ ವಿಡಿಯೋ ಮಾಡುತ್ತಿದ್ದ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದ ಗಾಯಕಿ ಮಂಗ್ಲಿ, ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಧಮ್ಕಿ ಹಾಕಿದ್ದಾರೆ ಎನ್ನಲಾಗುತ್ತಿದೆ.