LATEST NEWS
ಸರಕಾರಿ ವಾಹನಕ್ಕೆ ಕಾಯದೇ ಬೈಕ್ ಏರಿ ಸಭೆಗೆ ತೆರಳಿದ ಪುತ್ತೂರು ಸಹಾಯಕ ಆಯುಕ್ತ

ಸರಕಾರಿ ವಾಹನಕ್ಕೆ ಕಾಯದೇ ಬೈಕ್ ಏರಿ ಸಭೆಗೆ ತೆರಳಿದ ಪುತ್ತೂರು ಸಹಾಯಕ ಆಯುಕ್ತ
ಪುತ್ತೂರು ಮಾರ್ಚ್ 7: ಸರ್ಕಾರಿ ಅಧಿಕಾರಿಗಳು ಸಾಮಾನ್ಯವಾಗಿ ಸರ್ಕಾರದ ವಾಹನವನ್ನೇ ಕಾದು ಸಭೆ ಸಮಾರಂಭಗಳಿಗೆ ತೆರಳುವುದನ್ನು ಗಮನಿಸಿದ್ದೇವೆ. ಆದರೆ ಸರಳ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿರುವ ಪುತ್ತೂರಿನ ಸಹಾಯಕ ಆಯುಕ್ತರು ಕಡಬ ತಾಲೂಕು ಉದ್ಘಾಟನಾ ಪೂರ್ವಭಾವಿ ಸಭೆಗೆ ಬೈಕ್ ನಲ್ಲಿ ಬರುವ ಮೂಲಕ ಸುದ್ದಿಯಾಗಿದ್ದಾರೆ.
ಮಾರ್ಚ್ 8ಕ್ಕೆ ಕಡಬ ತಾಲೂಕು ಉದ್ಘಾಟನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆಯನ್ನು ಮಾರ್ಚ್6 ರಂದು ಏರ್ಪಡಿಸಲಾಗಿತ್ತು. ಬೆಳಿಗ್ಗೆ 11.00 ಗಂಟೆಗೆ ಸಭೆ ನಿಗದಿಯಾಗಿದ್ದರೂ ಸುಮಾರು 12:30 ರ ವರೆಗೂ ಸಭೆ ನಡೆಯಲಿಲ್ಲ. ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ ಕೃಷ್ಣ ಮೂರ್ತಿಯವರ ನೇತೃತ್ವದಲ್ಲಿ ಪೂರ್ವಭಾವಿ ನಡೆಯಲಿರುವ ಹಿನ್ನೆಲೆಯಲ್ಲಿ ಜನರು ಅಧಿಕಾರಿಗಳು, ಜನಪ್ರತಿನಿಧಿಗಳು ಅವರನ್ನು ಕಾಯುತ್ತಿದ್ದರು.

ಪುತ್ತೂರಿನಲ್ಲಿ ತುರ್ತು ಕಾರ್ಯಕ್ರಮ ಇದ್ದ ಕಾರಣ ಎ.ಸಿ ಯವರು ಸ್ವಲ್ಪ ತಡವಾಗಿ ಪುತ್ತೂರಿನಿಂದ ಹೊರಟಿದ್ದರು. ಕಡಬಕ್ಕೆ ತಲುಪುತ್ತಿದ್ದ ವೇಳೆ ದಾರಿಮಧ್ಯೆ ಅವರ ವಾಹನ ಕೆಟ್ಟು ಹೋಯಿತು.
ಆಗ ಕಡಬದ ಕಂದಾಯ ಅಧಿಕಾರಿಗಳು ತಡಬಡಿಸಿ ತಹಶಿಲ್ದಾರರ ವಾಹನವನ್ನು ಕಳುಹಿಸಿಕೊಟ್ಟರು. ಆದರೆ ಇದಕ್ಕೆಲ್ಲಾ ಕಾಯದ ಎ.ಸಿ ಯವರು ಅದೇ ದಾರಿಯಿಂದ ಸಭೆಗೆ ತರಾತುರಿಯಲ್ಲಿ ಬರುತ್ತಿದ್ದ ಸ್ಥಳೀಯ ಪರ್ತಕರ್ತರೊಬ್ಬರ ಬೈಕ್ ಏರಿ ಸಭೆ ನಡೆಯುವ ಸ್ಥಳಕ್ಕೆ ಆಗಮಿಸಿ ಸರಳತೆ ಮೆರೆದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.