LATEST NEWS
ಸರಳ ಜೀವನ ಪಾಲಿಸಿ ಎಂದು ಭೋದನೆ ಮಾಡಿದ್ದ ಆಧ್ಯಾತ್ಮಿಕ ವಾಗ್ಮಿ ಜಯ ಕಿಶೋರಿ ಕೈಯಲ್ಲಿ 2 ಲಕ್ಷ ಬೆಲೆ ಬಾಳುವ ಬ್ಯಾಗ್
ಮುಂಬೈ ಅಕ್ಟೋಬರ್ 29: ಟಿವಿ ಸಾಮಾಜಿಕ ಜಾಲತಾಣದಲ್ಲಿ ಸರಳ ಜೀವನದ ಬಗ್ಗೆ ಉದ್ದುದ್ದ ಭಾಷಣ ಬೀಡುತ್ತಿದ್ದ ಆಧ್ಯಾತ್ಮಿಕ ವಾಗ್ಮಿ ಮತ್ತು ಭಕ್ತಿಗೀತೆ ಗಾಯಕಿ ಜಯ ಕಿಶೋರಿ ಮಾತ್ರ ಕೈಯಲ್ಲಿ 2 ಲಕ್ಷ ಬೆಲೆ ಬಾಳುವ ಕರುವಿನ ಚರ್ಮದಿಂದ ಮಾಡಿದ ಬ್ಯಾಗ್ ಇಟ್ಟುಕೊಂಡು ತಿರುಗಾಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರು ತಿರುಗಾಡುತ್ತಿದ್ದ ವಿಡಿಯೋ ಇದೀಗ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಜಯ ಕಿಶೋರಿ ಅವರು ತಮ್ಮ ಆಧ್ಯಾತ್ಮಿಕ ಪ್ರವಚನಗಳು ಮತ್ತು ಗಾಯನದಿಂದ ಖ್ಯಾತಿ ಪಡೆದಿದ್ದಾರೆ. ತಮ್ಮನ್ನು ಶ್ರೀಕೃಷ್ಣನ ಭಕ್ತೆ ಎಂದು ಹೇಳುವ ಅವರ ಪ್ರವಚನ ಕೇಳಲು ಲಕ್ಷಾಂತರ ಜನ ಆಗಮಿಸುತ್ತಾರೆ. ತಮ್ಮ ಪ್ರವಚನದಲ್ಲಿ ಸರಳ ಜೀವನವೇ ಸುಂದರ, ನಿಜವಾದ ಸಂತೋಷ ಬೇಕು ಎಂದರೆ ಭೌತಿಕ ಸುಖ ತ್ಯಜಿಸಬೇಕು’ ಎಂದು ಆಗಾಗ ಹೇಳುತ್ತಿರುತ್ತಾರೆ. ಆದರೆ, ಇದೇ ಜಯಾ ಕಿಶೋರಿ ಅವರು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ವಿಮಾನ ನಿಲ್ದಾಣದ ವಿಡಿಯೋವನ್ನು ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ತೆಗೆದು ಹಾಕಿದ್ದಾರೆ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಜಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಹಳೆಯ ವಿಡಿಯೊಗಳ ಜೊತೆ ಐಷಾರಾಮಿ ಬ್ಯಾಗ್ ಇರುವ ವಿಡಿಯೊ ಹಾಕಿಕೊಂಡು ಟೀಕಿಸಿದ್ದಾರೆ. ಹೇಳಿದಂತೆ ನಡೆದುಕೊಳ್ಳದಿದ್ದರೇ ನಿಮ್ಮ ಮಾತಿಗೆ ಬೆಲೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ 27 ವರ್ಷದ ಜಯಾ ಕಿಶೋರಿ ಅವರು ತಮ್ಮ ಆಧ್ಯಾತ್ಮಿಕ ಭಾಷಣದಿಂದ ಹಾಗೂ ಶ್ರೀಕೃಷ್ಣನ ಭಜನೆಗಳಿಂದ ಉತ್ತರ ಭಾರತದಲ್ಲಿ ಸಾಕಷ್ಟು ಬೆಂಬಲಿಗರನ್ನು ಹೊಂದಿದ್ದಾರೆ.