Connect with us

LATEST NEWS

ಸಿಎಂ ಸಿದ್ದರಾಮಯ್ಯ ಹೇಳಿಕೆ ದೇಶಕ್ಕೆ ಮಾಡಿದ ಅಪಮಾನ – ಸಂಸದ ಕ್ಯಾ. ಚೌಟ

ಮಂಗಳೂರು ಎಪ್ರಿಲ್ 27: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ರಣಹೇಡಿ ಭಯೋತ್ಪಾದಕ ದಾಳಿಯ ವಿರುದ್ದ ದೇಶವೇ ಒಗ್ಗಟ್ಟಿನಿಂದ ನಿಂತಿರುವಾಗ ಸಾರ್ವಜನಿಕ ಸ್ಥಾನದಲ್ಲಿರುವ ಸಿಎಂ ಸಿದ್ದರಾಮಯ್ಯನವರು ಸಂವೇದನೆ ರಹಿತರಂತೆ, ಬೇಜವಾಬ್ದಾರಿಯುತ, ಬಾಲಿಶ ಮತ್ತು ರಾಜಕೀಯ ಅಭದ್ರತೆಯಿಂದ ಕೂಡಿದ ಹೇಳಿಕೆ ನೀಡಿರುವುದು ನಿಜಕ್ಕೂ ವಿಷಾದನೀಯ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

“ಪಾಕಿಸ್ತಾನದ ಜೊತೆ ಯುದ್ಧ ಸಾರುವ ಅಗತ್ಯ ಇಲ್ಲ” ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡಿಸಿರುವ ಕ್ಯಾ. ಚೌಟ ಅವರು, ಪಹಲ್ಗಾಮ್‌ ನಲ್ಲಿ ನಡೆದ ಘಟನೆ ನಮ್ಮ ರಾಷ್ಟ್ರದ ಮೇಲೆ ನಡೆದ ಹೇಡಿತನ ದಾಳಿ. ಜವಾಬ್ದಾರಿಯುತ ಸ್ಥಾನದಲ್ಲಿ ಅದರಲ್ಲೂ ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ‘ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವವರನ್ನು ಶಿಕ್ಷಿಸುವುದು ಬೇಡ ನಮ್ಮ ಭದ್ರತೆಯನ್ನು ಬಲಪಡಿಸಿ’ ಎಂಬ ರೀತಿಯ ಹೇಳಿಕೆ ನೀಡಿರುವುದು ಅಕ್ಷಮ್ಯ. ಇಂತಹ ಹೇಳಿಕೆಗಳು ದಾಳಿಯಲ್ಲಿ ಹುತಾತ್ಮರಾದ ನಮ್ಮ ಭದ್ರತಾ ಸಿಬ್ಬಂದಿಯ ಶೌರ್ಯ ಮತ್ತು ಬಲಿದಾನ ಕಡೆಗಣಿಸಿದಂತಾಗುತ್ತದೆ. ಪುಲ್ವಾಮವಿರಲಿ ಪಹಲ್ಗಾಮ್‌ ಆಗಿರಲಿ ಈ ಎರಡೂ ಘಟನೆಗಳನ್ನು ಕೇವಲ ಗುಪ್ತಚರ ವೈಫಲ್ಯಗಳೆಂದು ಸರಳೀಕರಿಸುವುದು ಉಗ್ರರೊಂದಿಗೆ ಕೆಚ್ಚೆದೆಯಲ್ಲಿ ಹೋರಾಡಿ ಹುತಾತ್ಮರಾದ ಯೋಧರ ತ್ಯಾಗ ಅತ್ಯಲ್ಪವೆಂದು ಪರಿಗಣಿಸಿ ಅವರ ಸರ್ವೋಚ್ಚ ಬಲಿದಾನಕ್ಕೆ ನೀಡುವ ಅಗೌರವ ಹಾಗೂ ಭಾರತೀಯ ಸೈನಿಕರ ನೈತಿಕ ಸ್ಥೈರ್ಯ ಕುಗ್ಗಿಸಲು ನಡೆಯುತ್ತಿರುವ ಷಡ್ಯಂತ್ರ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಇಂದು ಜಗತ್ತೇ ಖಂಡಿಸುತ್ತಿದೆ. ಅದರೆ ಕಾಂಗ್ರೆಸ್ಸಿನ ನಾಯಕರಿಗೆ ವಾಸ್ತವ ಸ್ಥಿತಿ ಅರಿಯದೆ ನಮ್ಮ ದೇಶದ ಬಗ್ಗೆ ಸಡಿಲ ಮಾತುಗಳನ್ನಾಡುವುದು ರೂಢಿಯಾಗಿಬಿಟ್ಟಿದೆ. ಭಯೋತ್ಪಾದಕ ದಾಳಿಗೆ ‘ಭದ್ರತಾ ಲೋಪ’ ಎಂದು ಗೂಬೆ ಕೂರಿಸುವುದು ಸ್ವೀಕಾರಾರ್ಹವಲ್ಲ. ಮೂಲಭೂತವಾದಿ ಯುವಕರಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಜಿಹಾದಿ ಮನಸ್ಥಿತಿಯು ಕಾಂಗ್ರೆಸ್ ನ ಹಲವು ದಶಕಗಳ ಓಲೈಕೆ ಮತ್ತು ಒಡೆದು ಆಳುವ ರಾಜಕಾರಣದ ನೇರ ಪರಿಣಾಮವಾಗಿದೆ. ಭಯೋತ್ಪಾದಕರು ಒಳನುಸುಳಿಸಲು ನಿಸ್ಸಂದೇಹವಾಗಿ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವಾಗ, ಸಿದ್ದರಾಮಯ್ಯನವರಿಗೆ ಮಾತ್ರ ನೆರೆ ರಾಷ್ಟ್ರದ ಮೇಲೆ ಏಕೆ ಇಷ್ಟೊಂದು ಪ್ರೀತಿ? ಕಳೆದೆರಡು ದಶಕಗಳಲ್ಲಿ ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾದ ಸ್ವದೇಶಿ ಸ್ಲೀಪರ್ ಸೆಲ್‌ಗಳಿಂದ ಹುಟ್ಟಿಕೊಂಡ ಉಗ್ರ ಚಟುವಟಿಕೆಗಳಿಗೆ ಯಾರು ಹೊಣೆ? ಉಗ್ರಗಾಮಿತ್ವದ ಕಡೆಗೆ ಕಾಂಗ್ರೆಸ್‌ನ ಮೃದು ಧೋರಣೆ ಭಾರತದ ಆಂತರಿಕ ಭದ್ರತೆಯನ್ನು ದುರ್ಬಲಗೊಳಿಸಿರುವುದು ಮಾತ್ರವಲ್ಲದೇ ರಾಷ್ಟ್ರವಿರೋಧಿ ಶಕ್ತಿಗಳಿಗೆ ಅಧಿಕಾರ ನೀಡಿದೆ. ಇಂತಹ ಹೇಳಿಕೆ ನೀಡುವ ಸಿದ್ದರಾಮಯ್ಯನವರಿಗೆ ಕರ್ನಾಟಕದಲ್ಲಿ ಪಾಕಿಸ್ತಾನದ ನಾಗರಿಕರ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ಅಚ್ಚರಿಯ ಸಂಗತಿ. ಇಂತಹ ಮಾಹಿತಿ ಸಂಗ್ರಹಿಸಲು ಭಯೋತ್ಪಾದಕ ದಾಳಿಯಾಗುವವರೆಗೂ ಅವರು ಕಾಯುತ್ತಿರುವರೇ ?ಎಂದು ಕ್ಯಾ. ಚೌಟ ಪ್ರಶ್ನಿಸಿದ್ದಾರೆ.

ಪಹಲ್ಗಾಮ್ ದಾಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಂತ್ರಸ್ತರ ನೆರವಿಗೆ ಧಾವಿಸಿ ಆಸ್ಥೆ ವಹಿಸಿ ತಮ್ಮೂರಿಗೆ ತೆರಳಲು ಸಮಗ್ರ ವ್ಯವಸ್ಥೆಯನ್ನು ಮಾಡುತ್ತಿರುವಾಗ ಅವಕಾಶವಾದಿ ಕಾಂಗ್ರೆಸ್ ಸಾರ್ವಜನಿಕ ಸಹಾನುಭೂತಿಯ ಪಾಲು ಪಡೆಯಲು ಹಾಗೂ ರಾಜಕೀಯ ಲಾಭಕ್ಕಾಗಿ ಕೀಳು ತಂತ್ರ ಅನುಸರಿಸುತ್ತಿರುವು ಅತ್ಯಂತ ಖಂಡನೀಯ ಮತ್ತು ಅಮಾನವೀಯ. ಜೊತೆಗೆ ಇಂತಹ ಹೇಳಿಕೆಗಳು ಮೂಲ ಕಾರಣದಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನದ ಭಾಗವಾಗಿದೆ. ಭದ್ರತಾ ಪಡೆಗಳಿರಲಿಲ್ಲ ಎಂಬ ಸುಳ್ಳು ಸುದ್ದಿ ಹಬ್ಬಿಸುವುದು ಅಥವಾ ಭಯೋತ್ಪಾದಕ ದಾಳಿಯನ್ನು ಸಲೀಸಾಗಿ ಗುಪ್ತಚರ ವೈಫಲ್ಯ ಎಂದು ಪರಿಗಣಿಸುವುದು ಬೇಜವಾಬ್ದಾರಿತನದ ಪರಮಾವಧಿ. ನಮ್ಮ ರಾಜ್ಯ ಮತ್ತು ದೇಶದ ಜನರ ಮನೋಸ್ಥೈರ್ಯವನ್ನು ಕುಗ್ಗಿಸುವ ದುರುದ್ದೇಶಪೂರಿತ ಪ್ರಯತ್ನ. ಭಾರತೀಯರಾದ ನಾವು ಇಂತಹ ನಡವಳಿಕೆ ಎಂದೂ ಸಹಿಸಬಾರದು ಜೊತೆಗೆ ಇದನ್ನು ಬಲವಾಗಿ ಖಂಡಿಸಬೇಕು ಎಂದು ಸಂಸದ ಕ್ಯಾ. ಚೌಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *