UDUPI
ಸಿದ್ಧರಾಮಯ್ಯ ಸರ್ಕಾರವು ಜನಪರ ಸರಕಾರ – ಪ್ರಮೋದ್ ಮಧ್ವರಾಜ್
ಸಿದ್ಧರಾಮಯ್ಯ ಸರ್ಕಾರವು ಜನಪರ ಸರಕಾರ – ಪ್ರಮೋದ್ ಮಧ್ವರಾಜ್
ಉಡುಪಿ, ಅಕ್ಟೋಬರ್ 21: ಸಿದ್ಧರಾಮಯ್ಯ ಸರ್ಕಾರವು ಜನಪರವಾಗಿದ್ದು, ಈಗಾಗಲೇ 35 ವಾರ್ಡ್‍ಗಳಲ್ಲಿ ಜನಸಂಪರ್ಕ ಸಭೆ ಪೂರ್ಣಗೊಂಡು ಕೊನೆಯ ಗ್ರಾಮ ಸಭೆಯ 66ನೇ ಜನಸಂಪರ್ಕ ಸಭೆಯಾಗಿದೆ ಎಂದು ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರಿಂದು ಕೊಳಲಗಿರಿ ಸೆಕ್ರೇಡ್ ಹಾರ್ಟ್ ಚರ್ಚ್‍ನ ಸೌಹಾರ್ದ ಸಭಾಭವನದಲ್ಲಿ ನಡೆದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉಡುಪಿ ಕ್ಷೇತ್ರದಲ್ಲಿ 16 ಸಾವಿರಕ್ಕಿಂತಲೂ ಹೆಚ್ಚಿನ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್‍ಗಳನ್ನು ಒದಗಿಸಲಾಗಿದ್ದು, ವಾಜಪೇಯಿ ಆರೋಗ್ಯ ಸೇವೆ, ಭಾಗ್ಯಲಕ್ಷ್ಮೀ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ ಇತ್ಯಾದಿ ಯೋಜನೆಗಳು ಲಭ್ಯವಾಗುತ್ತಿವೆ. ರಾಜೀವ್ ಗಾಂಧಿ ವಿದ್ಯುತ್ ಯೋಜನೆಯಡಿಯಲ್ಲಿ 850 ಮನೆಗಳಿಗೆ ಉಚಿತವಾಗಿ ವಿದ್ಯುತ್ ಸರಬರಾಜು ಮಾಡಲಾಗಿದ್ದು, ಯಾವುದೇ ತಾಂತ್ರಿಕ ಅಡಚಣೆ ಹೊರತುಪಡಿಸಿ ದಿನದ 24 ಗಂಟೆಯೂ ವಿದ್ಯುತ್ ಸೇವೆಯನ್ನು ಮಾಡುತ್ತಿರುವ ರಾಜ್ಯದ ಏಕೈಕ ಜಿಲ್ಲೆ ಉಡುಪಿ ಯಾಗಿದೆ ಎಂದು ಹೇಳಿದರು.
ಬಿಪಿಎಲ್ ಕಾರ್ಡ್ ಪಡೆಯಲು ಜನರು ಕಷ್ಟಪಡಬೇಕಿಲ್ಲ, ಆಧಾರ ಕಾರ್ಡ್ ಜೊತೆಗೆ ಅವರ ತಲಾದಾಯ ಒಂದು ಲಕ್ಷ ಇಪ್ಪತ್ತೈದು ಸಾವಿರ ಒಳಗಿದ್ದು, ಒಂದು ಸಾವಿರ ಸುತ್ತಳತೆಯ ಒಳಗೆ ಮನೆ ಇದ್ದರೆ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಿದ 3 ತಿಂಗಳೊಳಗಾಗಿ ಅಂಚೆ ಮೂಲಕ ಮನೆಯ ಬಾಗಿಲಿಗೆ ಬಿಪಿಎಲ್ ಕಾರ್ಡ್ ದೊರೆಯುತ್ತದೆ ಎಂದು ಹೇಳಿದರು.
ಆರ್.ಟಿ.ಸಿ ಇದ್ದರೆ ಅನೇಕ ಯೋಜನೆಗಳನ್ನು ಪಡೆದುಕೊಳ್ಳಬಹುದು, ಹೊಸ ಮನೆಗಳ ನಿರ್ಮಾಣಕ್ಕಾಗಿ 2ಲಕ್ಷ. ರೂ ಅನುದಾನ ನೀಡಲಾಗುತ್ತಿದ್ದು, ಉದ್ಯೋಗಖಾತರಿ ಯೋಜನೆಯಡಿ 82 ಸಾವಿರದಷ್ಟು ಅನುದಾನ ಹೊಸ ಬಾವಿ ನಿರ್ಮಾಣಕ್ಕಾಗಿ ನೀಡಲಾಗುತ್ತಿದೆ. ದನದ ಹಟ್ಟಿ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 43 ಸಾವಿರ, ಉಳಿದವರಿಗೆ 23 ಸಾವಿರ ಅನುದಾನ ನೀಡಲಾಗುತ್ತಿದೆ. ತೆಂಗಿನ ತೋಟದ ಬುಡ ನಿರ್ಮಿಸುವವರಿಗೆ 50 ಸಾವಿರ ಜೊತೆಗೆ ಅಡಿಕೆ ತೋಟದ ಬುಡ ನಿರ್ಮಿಸುವವರಿಗೆ 1ಲಕ್ಷ 25 ಸಾವಿರ ನೀಡುವಂತ ಯೋಜನೆಗಳು ಇವೆ, ಸಂಪೂರ್ಣವಾಗಿ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಉಡುಪಿ ಕ್ಷೇತ್ರದಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸಲು 6 ಎಕ್ರೆ ಜಾಗ ಗುರುತಿಸಲಾಗಿದದ್ದು, ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲಿ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.