DAKSHINA KANNADA
“ಸಿದ್ದರಾಮಯ್ಯ ಸರಕಾರದ ಗ್ಯಾರಂಟಿ ಮೋದಿಯಿಂದ ನಕಲು” : ಹರೀಶ್ ಕುಮಾರ್
ಸುರತ್ಕಲ್ : “ಸಿದ್ದರಾಮಯ್ಯ ಸರಕಾರದ ಗ್ಯಾರಂಟಿ ಯೋಜನೆಯನ್ನು ಮೋದಿ ನಕಲು ಮಾಡಿದ್ದಾರೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯಿಂದ ದೇಶ ದಿವಾಳಿಯಾಗುವುದಿಲ್ಲ, ಹಾಗೇನಾದರೂ ಆಗುವುದಿದ್ದರೆ ಅದು ಮೋದಿ ಗ್ಯಾರಂಟಿಯಿಂದ ಮಾತ್ರ” ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ಪುಲ್ವಾಮ ಘಟನೆ ನಡೆದು 5 ವರ್ಷ ಕಳೆಯಿತು. ಅಲ್ಲಿನ ಸತ್ಯ ಘಟನೆ ಏನೆನ್ನುವುದನ್ನು ಅಲ್ಲಿನ ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ಅವರು ಹೇಳಿದ್ದಾರೆ. ಆದರೆ ಯಾರನ್ನೂ ಈ ಕುರಿತು ಬಂಧಿಸಲಾಗಿಲ್ಲ, ತನಿಖೆ ಕೂಡ ನಡೆದಿಲ್ಲ. ಮೋದಿಯವರು ತನಿಖೆಯನ್ನು ನಡೆಯದಂತೆ ನೋಡಿಕೊಂಡಿದ್ದಾರೆ. ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ. ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಅವರು ಪದೇ ಪದೇ ದೇಶದ ಸಂವಿಧಾನ ಬದಲಿಸುವ ಮಾತಾಡುತ್ತಿದ್ದಾರೆ. 400ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಸಂವಿಧಾನ ಬದಲಿಸುತ್ತೇವೆ ಎಂದಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿಯವರನ್ನು ಟೀಕಿಸಿದರೆ ಕೇಸ್ ದಾಖಲಾಗುತ್ತದೆ, ಆದರೆ ದೇಶದ್ರೋಹದ ಮಾತಾಡಿರುವ ಸಂಸದ ಅನಂತ್ ಕುಮಾರ್ ವಿರುದ್ಧ ಕ್ರಮ ಯಾಕಿಲ್ಲ?” ಎಂದು ಅವರು ಪ್ರಶ್ನಿಸಿದರು.
“ಇದು ಅನಂತ್ ಕುಮಾರ್ ಹೆಗಡೆ ಒಬ್ಬರ ಹೇಳಿಕೆಯಲ್ಲ. ಇದು ಬಿಜೆಪಿ ಹಿಡನ್ ಅಜೆಂಡಾ ಆಗಿದ್ದು ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ. ಸಂಸದರೇ ಈ ರೀತಿ ಹೇಳಿದರೆ ಸಂವಿಧಾನ ರಕ್ಷಣೆ ಮಾಡುವವರು ಯಾರು? ಇವರು ಅಂಬೇಡ್ಕರ್ ಅವರಿಗೆ ಯಾವ ಗೌರವ ಕೊಡುತ್ತಾರೆ? ಅನಂತ್ ಕುಮಾರ್ ಹೆಗಡೆ ವಿರುದ್ಧ ದೇಶದ್ರೋಹದ ಪ್ರಕರಣ ದಾಖಳಿಸಿಕೊಳ್ಳಬೇಕು. ಅವರನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಸಬೇಕು” ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಮತಾ ಗಟ್ಟಿ, ಪ್ರಕಾಶ್ ಸಾಲಿಯಾನ್, ಪ್ರವೀಣ್ ಆಳ್ವ, ನವೀನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.